ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತು, ಒಗ್ಗಟ್ಟು ಅತ್ಯಗತ್ಯ; ವೈಯಕ್ತಿಕ ಹಿತ ಬದಿಗಿಟ್ಟು ಪಕ್ಷ ಬಲಪಡಿಸಿ: ಸೋನಿಯಾ

Last Updated 26 ಅಕ್ಟೋಬರ್ 2021, 9:50 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷವನ್ನು ಬಲಪಡಿಸಲು ಶಿಸ್ತು ಮತ್ತು ಒಗ್ಗಟ್ಟು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಅಲ್ಲದೆ ವೈಯಕ್ತಿಕಹಿತಾಸಕ್ತಿಗಳನ್ನು ಬದಗಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.

ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಕಾರ್ಯತಂತ್ರಗಳನ್ನು ರೂಪಿಸಲು ಮಂಗಳವಾರ ಇಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಉನ್ನತ ನಾಯಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ನೀತಿಗಳಿಂದ ಸಂತ್ರಸ್ತರಾದವರಿಗಾಗಿ ಪಕ್ಷವು ತನ್ನ ಹೋರಾಟವನ್ನು ದ್ವಿಗುಣಗೊಳಿಸಬೇಕಿದೆ ಎಂದು ಅವರು ಹೇಳಿದರು.

ಪ್ರಮುಖ ವಿಷಯಗಳ ಬಗ್ಗೆ ಪಕ್ಷದ ಸಂದೇಶಗಳು ತಳಮಟ್ಟದ ಕಾರ್ಯಕರ್ತರಿಗೆ ತಲುಪದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸೋನಿಯಾ ಅವರು, ರಾಜ್ಯಗಳ ನಾಯಕರಲ್ಲಿ ಸ್ಪಷ್ಟತೆ ಮತ್ತು ಒಗ್ಗಟ್ಟಿನ ಕೊರತೆಯಿದೆ ಎಂದು ಬೇಸರದಿಂದ ಹೇಳಿದರು.

‘ನಮ್ಮ ಪ್ರಜಾಪ್ರಭುತ್ವ, ನಮ್ಮ ಸಂವಿಧಾನ ಮತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಬೇಕಿದೆ. ಅಲ್ಲದೆ ವಿರೋಧಿಗಳು ಮಾಡುವ ಸುಳ್ಳು ಪ್ರಚಾರವನ್ನು ಗುರುತಿಸಿ, ಅದನ್ನು ಸಮರ್ಥವಾಗಿ ಎದುರಿಸುವ ಕಾರ್ಯವನ್ನೂ ‌ಮಾಡಬೇಕಿದೆ’ ಎಂದರು.

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪೈಶಾಚಿಕ ಅಭಿಯಾನದ ವಿರುದ್ಧ ನಾವು ಸೈದ್ಧಾಂತಿಕವಾಗಿ ಹೋರಾಡಬೇಕು. ಈ ಯುದ್ಧವನ್ನು ಗೆಲ್ಲಬೇಕಾದರೆ ಜನರ ಮುಂದೆ ಅವರ ಸುಳ್ಳುಗಳನ್ನು ಬಹಿರಂಗಪಡಿಸಬೇಕು’ ಎಂದು ಹೇಳಿದರು.

ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಅದು ನಮ್ಮ ಸಂಸ್ಥೆಗಳನ್ನು ನಾಶಮಾಡಲು ಪ್ರಯತ್ನಿಸಿದೆ. ಈ ಮೂಲಕ ಅದು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲೂ ಯತ್ನಿಸುತ್ತಿದೆ. ಅಲ್ಲದೆ ನಮ್ಮ ಸಂವಿಧಾನದ ಮೂಲ ಮೌಲ್ಯಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ’ ಎಂದು ದೂರಿದರು.

‘ಕೇಂದ್ರ ಸರ್ಕಾರದ ಅತ್ಯಂತ ಕೆಟ್ಟ ನೀತಿಗಳಿಗೆ ಬಲಿಯಾದವರಿಗಾಗಿ ನಾವು ನಮ್ಮ ಹೋರಾಟವನ್ನು ದ್ವಿಗುಣಗೊಳಿಸಬೇಕು. ನಮ್ಮ ರೈತರು ಮತ್ತು ಕೃಷಿ ಕಾರ್ಮಿಕರು, ಉದ್ಯೋಗ ಮತ್ತು ಅವಕಾಶಗಳಿಗಾಗಿ ಹೋರಾಡುತ್ತಿರುವ ಯುವ ಜನ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು, ನಮ್ಮ ಸಹೋದರರು, ಸಹೋದರಿಯರ ಏಳಿಗೆಗೆ ಗಮನಹರಿಸಬೇಕು’ ಎಂದು ಅವರು ಒತ್ತಿ ಹೇಳಿದರು.

ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷರೂ ಆದ ಸಂಸದ ರಾಹುಲ್‌ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು ಭಾಗವಹಿಸಿದ್ದರು.

ಪಕ್ಷದ ಹೊಸ ಸದಸ್ಯತ್ವ ಅಭಿಯಾನದ ಕಾರ್ಯತಂತ್ರವನ್ನು ರೂಪಿಸುವುದು ಮತ್ತು ಅದರ ವಿಧಾನಗಳನ್ನು ಅಂತಿಮಗೊಳಿಸುವುದು ಸಭೆಯ ಮತ್ತೊಂದು ಉದ್ದೇಶವಾಗಿತ್ತು. ಈ ಅಭಿಯಾನವು ನವೆಂಬರ್ 1 ರಿಂದ ಆರಂಭವಾಗುತ್ತಿದ್ದು, ಮುಂದಿನ ವರ್ಷದ ಮಾರ್ಚ್ 31ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT