ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧ್ಯಾತ್ಮ ಶಕ್ತಿ’ ನಂಬಿ ಪುತ್ರಿಯರನ್ನೇ ಕೊಂದ ಸುಶಿಕ್ಷಿತ ಪೋಷಕರು !

ಆಂಧ್ರಪ್ರದೇಶದ ಚಿತ್ತೂರಿನಲ್ಲೊಂದು ವಿಲಕ್ಷಣ, ಆಘಾತಕಾರಿ ಘಟನೆ
Last Updated 25 ಜನವರಿ 2021, 9:57 IST
ಅಕ್ಷರ ಗಾತ್ರ

ಅಮರಾವತಿ: ‘ಕಲಿಯುಗ ಮುಗಿದು ಸತ್ಯಯುಗ ಆರಂಭವಾಗುತ್ತದೆ. ಆಧ್ಯಾತ್ಮಿಕ ಶಕ್ತಿಯಿಂದ ಸತ್ತವರು ಕೆಲವೇ ಗಂಟೆಗಳಲ್ಲಿ ಮತ್ತೆ ಹುಟ್ಟಿ ಬರುತ್ತಾರೆ’ಎಂಬ ನಂಬಿದ ವಿದ್ಯಾವಂತ ಪೋಷಕರು, ತಮ್ಮ ಇಬ್ಬರು ಪುತ್ರಿಯರನ್ನು ಕೊಂದು ಹಾಕಿರುವಂತಹ ವಿಲಕ್ಷಣ ಘಟನೆಯೊಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ವಿ.ಪುರುಷೋತ್ತಮ ನಾಯ್ಡು ಮತ್ತು ಪದ್ಮಜಾ ದಂಪತಿ ಪ್ರಕರಣದ ಆರೋಪಿಗಳು. ಪುತ್ರಿಯರಾದ ಅಲೇಖ್ಯಾ(27) ಮತ್ತು ಸಾಯಿ ದಿವ್ಯಾ (22) ಅವರನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪುರುಷೋತ್ತಮ ನಾಯ್ಡು, ಎಂ.ಎಸ್‌ಸಿ, ಪಿಎಚ್‌ಡಿ ಪದವೀಧರ. ಮದನಪಲ್ಲಿಯ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಕಾಲೇಜಿನ ಉಪ ಪ್ರಾಚಾರ್ಯ. ಪದ್ಮಜಾ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದವರು. ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಪ್ರಾಚಾರ್ಯೆ.

ಅಲೇಖ್ಯಾ, ಭೋಪಾಲ್‌ನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು. ಸಾಯಿ ದಿವ್ಯಾ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಕೆ.ಎಂ. ಮ್ಯೂಸಿಕ್ ಕನ್ಸರ್ವೇಟರಿ ಶಾಲೆಯ ವಿದ್ಯಾರ್ಥಿನಿ. ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಈ ಇಬ್ಬರು ಪುತ್ರಿಯರು ತಮ್ಮ ಪೋಷಕರ ಜತೆಯಲ್ಲಿ ನೆಲೆಸಿದ್ದರು.

ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಕೊಲೆ ಮಾಡಿದ ವಿಷಯವನ್ನು ತಂದೆ, ತನ್ನ ಸಹೋದ್ಯೋಗಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ವಿಷಯ ಕೇಳಿ ಅಘಾತಕ್ಕೊಳಗಾದ ಆ ಸಹೋದ್ಯೋಗಿ, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದಾಗ, ಪೋಷಕರಿಬ್ಬರೂ ಪ್ರಜ್ಞೆ ತಪ್ಪಿದ್ದರು. ಸ್ಥಳ ಪರಿಶೀಲಿಸಿದ ಪೊಲೀಸರು, ಈ ಕುಟುಂಬ, ಕೆಲ ಸಮಯದಿಂದ ಮಾಟ, ಮಂತ್ರದಂತಹ ಅತೀಂದ್ರೀಯ ಚಟುವಟಿಕೆಗಳನ್ನು ಅನುಸರಿಸುತ್ತಿದ್ದರು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ‘ಮಕ್ಕಳನ್ನು ಕೊಂದು, ತಾವೂ ಸಾಯಲು ಯೋಜನೆ ರೂಪಿಸಿದ್ದರು. ನಾವೂ ಮತ್ತೆ ಹುಟ್ಟಿ ಬರುತ್ತೇವೆ ಎಂಬುದು ಅವರ ನಂಬಿಕೆಯಾಗಿತ್ತು‘ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪುರುಷೋತ್ತಮ ನಾಯ್ಡು ಮತ್ತು ಪದ್ಮಜಾ ಅವರನ್ನು ಬಂಧಿಸಿ ಅವರ ಮನೆಯಲ್ಲೇ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ತಾಯಿ ಪದ್ಮಜಾ, ಹಿರಿಯ ಪುತ್ರಿಯನ್ನು ತ್ರಿಶೂಲದಿಂದ ಚುಚ್ಚಿ, ಕಿರಿಯ ಪುತ್ರಿಯನ್ನು ಡಂಬಲ್‌ಗಳಿಂದ ಕೊಂದಿರುವುದಾಗಿ ಪೊಲೀಸರಿಗೆ ಹೇಳಿದ್ದಾರೆ. ಅವರು ಹೀಗೆ ಹೇಳಿಕೆ ನೀಡುವಾಗ ತಂದೆ ಪುರುಷೋತ್ತಮ ನಾಯ್ಡು, ಮೂಕ ಪ್ರೇಕ್ಷಕರಾಗಿದ್ದರು ಎಂದು ಮದನಪಲ್ಲಿ ಡಿವೈಎಸ್‌ಪಿ ಮನೋಹರಾಚಾರಿ ತಿಳಿಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವಾಗಲೂ ಈ ದಂಪತಿ ಪ್ರತಿರೋಧ ತೋರಿ, ‘ಸತ್ಯಯುಗ ಆರಂಭವಾಗುತ್ತದೆ. ಇಬ್ಬರೂ ಮಕ್ಕಳೂ ಅಲ್ಲೇ ಹುಟ್ಟಿಬರಲಿದ್ದಾರೆ, ದೇಹಗಳಿಗೆ ಜೀವ ಬರಲಿದೆ‘ ಎಂದು ಹೇಳುತ್ತಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕೃತ್ಯದಲ್ಲಿ ಕುಟುಂಬದ ಜತೆಗೆ, ಮೂರನೆಯವರ ಪಾತ್ರವು ಇರಬಹುದೇ ಎಂಬುದನ್ನು ಪರಿಶೀಲಿಸಲು ವಿಧಿವಿಜ್ಞಾನ ತಂಡ ಮನೆಯಲ್ಲಿದ್ದ ಸಿಸಿಟಿವಿಯಲ್ಲಿದ್ದ ದೃಶ್ಯದ ತುಣುಕುಗಳನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT