ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರವೂ ನಡೆಯದ ಸಂಸತ್ ಕಲಾಪ: ಚರ್ಚೆಯಿಲ್ಲದೇ ಮೂರು ಮಸೂದೆ ಅಂಗೀಕಾರ

ಪೆಗಾಸಸ್‌, ರೈತರ ಸಮಸ್ಯೆ ಚರ್ಚೆಗೆ ವಿಪಕ್ಷಗಳ ಪಟ್ಟು
Last Updated 5 ಆಗಸ್ಟ್ 2021, 19:40 IST
ಅಕ್ಷರ ಗಾತ್ರ

ನವದೆಹಲಿ: ಪೆಗಾಸಸ್ ತನಿಖೆಗೆ ಆಗ್ರಹಿಸಿ ಸಂಸತ್ತಿನಲ್ಲಿ ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯ ನಡುವೆಯೇ ರಾಜ್ಯಸಭೆಯು ಮೂರು ಮಸೂದೆಗಳಿಗೆ ಗುರುವಾರ ಅಂಗೀಕಾರ ನೀಡಿದೆ.ಲೋಸಭೆಯಲ್ಲಿ ಎರಡು ಮಸೂದೆ ಮಂಡನೆಯಾದವು.

ಅಗತ್ಯ ಸೇವೆಗಳಲ್ಲಿ ತೊಡಗಿರುವ ಘಟಕಗಳಲ್ಲಿ ಮುಷ್ಕರ, ಲಾಕ್-ಔಟ್ ಮತ್ತು ವಜಾ ನಿಷೇಧಿಸಲು ಸರ್ಕಾರಕ್ಕೆ ಅವಕಾಶ ನೀಡುವ ಮಸೂದೆ ಈ ಪೈಕಿ ಒಂದು.ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಗೆ ಆಯೋಗವನ್ನು ಸ್ಥಾಪಿಸುವ ಮಸೂದೆಗೆ ರಾಜ್ಯಸಭೆ ಅನುಮೋದನೆ ನೀಡಿತು.

ವಿರೋಧ ಪಕ್ಷದ ಸದಸ್ಯರು ಪೆಗಾಸಸ್ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಆದರೆ ಇದಕ್ಕೆ ಸರ್ಕಾರ ಒಪ್ಪಲಿಲ್ಲ. ಹೀಗಾಗಿಲೋಕಸಭೆ ಪದೇ ಪದೇ ಮುಂದೂಡಿಕೆಗೆ ಸಾಕ್ಷಿಯಾಯಿತು.ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ ಮಂಡನೆಯಾಯಿತು. ಇದು ಲಡಾಖ್‌ನಲ್ಲಿ ಸಿಂಧು ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸುವುದನ್ನು ಪ್ರಸ್ತಾಪಿಸಿದೆ. ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನೂ ಸಹ ಸರ್ಕಾರ ಮಂಡಿಸಿತು.

ಪ್ರಶ್ನೋತ್ತರ ವೇಳೆಯಲ್ಲಿ ಪ್ರಮುಖ ವಿಷಯಗಳನ್ನು ಚರ್ಚಿಸಲಾಗುವುದು ಎಂದು ಗದ್ದಲ ನಡೆಸುತ್ತಿದ್ದ ಸದಸ್ಯರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭರವಸೆ ನೀಡಿದರು. ಆದರೆ ಸದಸ್ಯರು ಫಲಕಪ್ರದರ್ಶಿಸಿ, ಘೋಷಣೆ ಕೂಗಿ ಪ್ರತಿಭಟನೆ ಮುಂದುವರಿಸಿದರು.41 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಪದಕ ಪಡೆದ ಭಾರತೀಯ ಹಾಕಿ ತಂಡವನ್ನು ಓಂ ಬಿರ್ಲಾ ಅವರು ಅಭಿನಂದಿಸಿದರು. ಟೋಕಿಯೊದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮಹಿಳಾ ಆಟಗಾರ್ತಿಯರಿಗೂ ಅಭಿನಂದನೆ ತಿಳಿಸಿದರು.

ಪರಿಶಿಷ್ಟ ಸಮುದಾಯದ ಬಾಲಕಿ ಸಾವಿನ ವಿಷಯವನ್ನು ಪ್ರಸ್ತಾಪಿಸಲು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಲೋಕಸಭೆಯಲ್ಲಿ ಪ್ರಯತ್ನಿಸಿದರು. ಆದರೆ ಸ್ಪೀಕರ್ ಅನುಮತಿ ನೀಡಲಿಲ್ಲ.ಘಟನೆ ಖಂಡಿಸಿ ನಿರ್ಣಯ ಅಂಗೀಕರಿಸಬೇಕು ಎಂದು ಅವರು ಬಯಸಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಮೇಘಾವಾಲ್, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಇಂತಹದ್ದೇ ಘಟನೆ ನಡೆದಾಗ ಕಾಂಗ್ರೆಸ್ ಏಕೆ ಮೌನವಾಗಿತ್ತು ಎಂದು ಪ್ರಶ್ನಿಸಿದರು.

‘ಸದನವನ್ನು ದಿನದ ಮಟ್ಟಿಗೆ ಮುಂದೂಡಿದ ಬಳಿಕ, ಪ್ರತಿಭಟನೆ ನಡೆಸಿದ ಸದಸ್ಯರು ತಮ್ಮ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡದಿರುವುದು ತಪ್ಪು. ಹೀಗೆ ಮಾಡಿದರೆ ನೀವು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದಕ್ಕೆಪ್ರತಿಕ್ರಿಯಿಸಿದ ಸಚಿವ ನಖ್ವಿ,‘ಪ್ರತಿಪಕ್ಷಗಳು ಪ್ರತಿಭಟನೆ ನಡೆಸುವುದಕ್ಕೆ ಯಾವುದೇ ಆಕ್ಷೇಪವಿಲ್ಲ, ಆದರೆ ಅವರು ಹಿಂಸಾಚಾರಕ್ಕೆ ಮುಂದಾಗಿದ್ದು ಕಳವಳಕಾರಿ. ಭದ್ರತಾ ಸಿಬ್ಬಂದಿಯನ್ನು ನೋಯಿಸಿ, ಹಿಂಸೆಯ ಮೂಲಕ ಕಲಾಪವನ್ನು ಹೈಜಾಕ್ ಮಾಡುವುದಕ್ಕೆ ತಮ್ಮ ಆಕ್ಷೇಪವಿದೆ’ ಎಂದು ಹೇಳಿದರು.

ತೃಣಮೂಲ ಕಾಂಗ್ರೆಸ್‌ನ ಆರು ಸದಸ್ಯರನ್ನು ಅಮಾನತುಗೊಳಿಸಿದ್ದನ್ನು ಖಂಡಿಸಿ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಧರಣಿ ನಡೆಸಿದವು.ಸದನದಲ್ಲಿ ಹಾಜರಿಲ್ಲದ ಸಚಿವರ ಪರವಾಗಿ ಸಂಸದೀಯ ವ್ಯವಹಾರ ಸಚಿವರೇ ಪದೇ ಪದೇ ಉತ್ತರ ನೀಡಿದ್ದಕ್ಕೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಆಕ್ಷೇಪಿಸಿದರು.

ವಿಪಕ್ಷಗಳ ದೇಶದ್ರೋಹ ರಾಜಕಾರಣ: ಮೋದಿ ಆರೋಪ

ಲಖನೌ: ಇಡೀ ದೇಶವು ಮುನ್ನಡೆಯಲು ಕಾತರಿಸುತ್ತಿದ್ದರೆ ವಿರೋಧ ಪಕ್ಷಗಳು ಸಂಸತ್‌ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಪ್ರಧಾನ ನರೇಂದ್ರ ಮೋದಿ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಮಾನವ ಕುಲವು ಕಂಡ ಅತ್ಯಂತ ದೊಡ್ಡ ಬಿಕ್ಕಟ್ಟಿನಿಂದ ಹೊರಬರಲು ಪ್ರತಿಯೊಬ್ಬರೂ ಯತ್ನಿಸುತ್ತಿರುವಾಗ ವಿರೋಧ ಪಕ್ಷಗಳು ದೇಶದ ಹಿತಾಸಕ್ತಿಗೆ ಅಡ್ಡಿ ಮಾಡಲು ಯತ್ನಿಸುತ್ತಿವೆ. ಇಂತಹ ಸ್ವಾರ್ಥ ಮತ್ತು ದೇಶದ್ರೋಹಿ ರಾಜಕಾರಣದ ಒತ್ತೆಯಾಳುಗಳಾಗಲು ಈ ದೇಶದ ಶ್ರೇಷ್ಠ ಜನರು ಅವಕಾಶ ಕೊಡುವುದಿಲ್ಲ. ವಿರೋಧ ಪಕ್ಷಗಳು ಎಷ್ಟೇ ಪ್ರಯತ್ನಿಸಿದರೂ ದೇಶದ ಅಭಿವೃದ್ಧಿಯನ್ನು ನಿಲ್ಲಿಸಲಾಗದು ಎಂದು ಮೋದಿ ಹೇಳಿದ್ದಾರೆ.

‘ಒಂದೆಡೆ, ನಮ್ಮ ದೇಶವು ಮೇಲಿಂದ ಮೇಲೆ ಗೆಲುವಿನ ಗೋಲು ಹೊಡೆಯುತ್ತಿದೆ. ಇನ್ನೊಂದೆಡೆ, ಕೆಲವರು ತಮ್ಮ ಸ್ವಾರ್ಥ ರಾಜಕೀಯ ಹಿತಾಸಕ್ತಿಗಾಗಿ ತಮ್ಮದೇ ಗೋಲುಪೆಟ್ಟಿಗೆಗೆ ಗೋಲು ಹೊಡೆಯುವಂತಹ ಕೆಲಸ ಮಾಡುತ್ತಿದ್ದಾರೆ’ ಎಂದು ಮೋದಿ ಹೇಳಿದ್ದಾರೆ. ಪೆಗಾಸಸ್‌ ಕುತಂತ್ರಾಂಶ ಬಳಸಿ ನಡೆದಿದೆ ಎನ್ನಲಾದ ಬೇಹುಗಾರಿಕೆ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಏರ್ಪಡಿಸಿದ್ದ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನಾ ದಿನದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿ ಮೋದಿ ಮಾತನಾಡಿದರು.

‘ದೇಶಕ್ಕೆ ಏನು ಬೇಕು ಎಂಬ ಬಗ್ಗೆ ಅವರಿಗೆ ಕಾಳಜಿ ಇಲ್ಲ. ದೇಶ ಏನನ್ನು ಸಾಧಿಸುತ್ತಿದೆ ಅಥವಾ ಹೇಗೆ ಬದಲಾಗುತ್ತಿದೆ ಎಂಬುದೂ ಬೇಕಾಗಿಲ್ಲ. ತಮ್ಮ ಸ್ವ ಹಿತಾಸಕ್ತಿಗಾಗಿ ಸಂಸತ್ತಿಗೆ ಅವಮಾನ ಮಾಡುತ್ತಿದ್ದಾರೆ’ ಎಂದು ಮೋದಿ ಆರೋಪಿಸಿದ್ದಾರೆ.

ಪೆಗಾಸಸ್‌: ಜನರ ಬಾಯಿ ಮುಚ್ಚಿಸುವ ಅಸ್ತ್ರ: ರಾಹುಲ್

ಪೆಗಾಸಸ್‌ ಕುತಂತ್ರಾಂಶ ಬಳಸಿ ಬೇಹುಗಾರಿಕೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುತಂತ್ರಾಂಶವು ಜನರ ಬಾಯಿ ಮುಚ್ಚಿಸುವ ಅಸ್ತ್ರವಾಗಿದೆ ಎಂದು ಅವರು ಹೇಳಿದ್ದಾರೆ.

ಯುವ ಕಾಂಗ್ರೆಸ್‌ ಕಾರ್ಯಕರ್ತರು ಹಮ್ಮಿಕೊಂಡಿದ್ದ ‘ಸಂಸತ್‌ ಘೆರಾವೊ’ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿರುದ್ಯೋಗ ಸಮಸ್ಯೆಯ ಕುರಿತಂತೆಯೂ ಅವರು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನಿಮ್ಮ ಮೊಬೈಲ್‌ ಫೋನ್‌ ನಿಮ್ಮ ಧ್ವನಿ. ನನ್ನೊಬ್ಬನ ಫೋನ್‌ನಲ್ಲಿ ಮಾತ್ರವಲ್ಲ, ದೇಶದ ಎಲ್ಲ ಯುವ ಜನರ ಮೊಬೈಲ್‌ನಲ್ಲಿ ಪೆಗಾಸಸ್‌ ಕುತಂತ್ರಾಂಶವನ್ನು ಮೋದಿ ಅಳವಡಿಸಿದ್ದಾರೆ. ನೀವು ಸತ್ಯವನ್ನು ಮಾತನಾಡಲೇಬಾರದು. ಏಕೆಂದರೆ ನಿಮ್ಮ ಫೋನ್‌ನಲ್ಲಿ ನರೇಂದ್ರ ಮೋದಿಯೂ ಇದ್ದಾರೆ, ಪೆಗಾಸಸ್‌ ಕೂಡ ಇದೆ’ ಎಂದು ರಾಹುಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT