ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ವನ್ ಕಣಿವೆಗೆ ಭೇಟಿ ನೀಡಲು ಸಂಸದೀಯ ಸ್ಥಾಯಿ ಸಮಿತಿ ನಿರ್ಧಾರ

Last Updated 13 ಫೆಬ್ರುವರಿ 2021, 2:18 IST
ಅಕ್ಷರ ಗಾತ್ರ

ನವದೆಹಲಿ: ಚೀನಾ ಸೇನಾ ಪಡೆಗಳೊಂದಿಗೆ ಹಿಂಸಾತ್ಮಕ ಮುಖಾಮುಖಿಗೆ ಸಾಕ್ಷಿಯಾಗಿದ್ದ ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ, ಪಾಂಗಾಂಗ್‌ ಸರೋವರ ಪ್ರದೇಶಕ್ಕೆ ಭೇಟಿ ನೀಡಲು ರಕ್ಷಣಾ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ಜುಯೆಲ್ ಓರಮ್ ಅಧ್ಯಕ್ಷತೆಯ 30 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯು ಮೇ ಕೊನೆಯ ವಾರ ಅಥವಾ ಜೂನ್ ವೇಳೆಗೆ ಗಡಿ ಪ್ರದೇಶಕ್ಕೆ ಭೇಟಿ ನೀಡಲು ಬಯಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಸಮಿತಿಯ ಸದಸ್ಯರಾಗಿದ್ದಾರೆ.

ಕಳೆದ ವಾರ ನಡೆದ ಸಮಿತಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆ ಸಭೆಗೆ ರಾಹುಲ್ ಗಾಂಧಿ ಹಾಜರಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಸಮಿತಿಯು ನೈಜ ನಿಯಂತ್ರಣ ರೇಖೆ ಪ್ರದೇಶಕ್ಕೆ (ಎಲ್‌ಎಸಿ) ಭೇಟಿ ನೀಡಬೇಕಿದ್ದರೆ ಸರ್ಕಾರದ ಅನುಮತಿ ಅಗತ್ಯವಿದೆ.

ಒಂಬತ್ತು ತಿಂಗಳ ಮುಖಾಮುಖಿ ಬಳಿಕ ಭಾರತ–ಚೀನಾ ಪಡೆಗಳು ಪಾಂಗಾಂಗ್‌ ಸರೋವರದ ಉತ್ತರ ಹಾಗೂ ದಕ್ಷಿಣ ಭಾಗಗಳ ಮುಂಚೂಣಿ ನೆಲೆಗಳಿಂದ ಸೇನೆ ಹಿಂಪಡೆಯುವ ವಿಚಾರದಲ್ಲಿ ಒಮ್ಮತಕ್ಕೆ ಬಂದಿವೆ. ಹಂತ–ಹಂತವಾಗಿ, ಸಮನ್ವಯ ಮತ್ತು ಪರಿಶೀಲನೆಯೊಂದಿಗೆ ಪಡೆಗಳನ್ನು ಹಿಂಪಡೆಯುವ ಬಗ್ಗೆ ಒಮ್ಮತಕ್ಕೆ ಬರಲಾಗಿದೆ.

ಮುಂಚೂಣಿ ನೆಲೆಗಳಿಂದ ಸೇನೆ ಹಿಂಪಡೆಯುವ ಒಪ್ಪಂದಕ್ಕೆ ಸಂಬಂಧಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಸಂಸತ್‌ನಲ್ಲಿ ವಿಸ್ತೃತ ವಿವರಣೆ ನೀಡಿದ್ದರು.

ಒಪ್ಪಂದದ ಪ್ರಕಾರ, ಪಾಂಗಾಂಗ್ ಸರೋವರದ ಉತ್ತರ ದಂಡೆಯ ‘ಫಿಂಗರ್ 8’ ಪ್ರದೇಶದಿಂದ ಚೀನಾವು ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಿದೆ. ಭಾರತೀಯ ಸೇನೆ ಸಿಬ್ಬಂದಿಯು ತಮ್ಮ ಕಾಯಂ ನೆಲೆಯಾದ, ‘ಫಿಂಗರ್ 3’ ಪ್ರದೇಶದಲ್ಲಿರುವ ‘ಧನ್ ಸಿಂಗ್ ಥಾಪಾ’ ಪೋಸ್ಟ್‌ನಲ್ಲಿ ನೆಲೆಸಲಿದ್ದಾರೆ.

ಇಂಥದ್ದೇ ಕ್ರಮವನ್ನು ಸರೋವರದ ದಕ್ಷಿಣ ದಂಡೆಯಲ್ಲೂ ಅನುಸರಿಸಲಾಗುವುದು ಎಂದು ರಾಜನಾಥ್ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT