ಶನಿವಾರ, ಮೇ 21, 2022
28 °C
ದೂರು ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ ಪಟ್ನಾ ಹೈಕೋರ್ಟ್

ವಂಚನೆ: ತೇಜಸ್ವಿ ಯಾದವ್, ಮೀಸಾ ಭಾರತಿ ವಿರುದ್ಧ ಎಫ್ಐಆರ್‌ಗೆ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಭರವಸೆ ನೀಡಿ ವ್ಯಕ್ತಿಯೊಬ್ಬರಿಗೆ ₹ 5 ಕೋಟಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್, ಅವರ ಸಹೋದರಿ ಹಾಗೂ ಸಂಸದೆ ಮೀಸಾ ಭಾರತಿ ಮತ್ತು ಇತರ ರಾಜಕಾರಣಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಟ್ನಾ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.

ಕಾಂಗ್ರೆಸ್‌ನೊಂದಿಗೆ ಸಂಪರ್ಕವಿರುವ ಮತ್ತು ಭಾಗಲ್ಪುರ ಕ್ಷೇತ್ರದಿಂದ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಜೀವ್ ಕುಮಾರ್ ಸಿಂಗ್ ಎಂಬುವರು ತಮಗಾದ ವಂಚನೆಯ ಕುರಿತು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಪಟ್ನಾ ನ್ಯಾಯಾಲಯದ ಪ್ರಧಾನ ಸತ್ರ ನ್ಯಾಯಾಧೀಶ ವಿಜಯ್‌ಕಿಶೋರ್ ಸಿಂಗ್ ಅವರು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೆ. 16ರಂದು ಆದೇಶ ಹೊರಡಿಸಿದ್ದಾರೆ.

ಅರ್ಜಿಯಲ್ಲಿ ದೂರುದಾರರು ತೇಜಸ್ವಿ ಯಾದವ್ ಅವರ ಸಹೋದರಿ ಹಾಗೂ ರಾಜ್ಯಸಭಾ ಸದಸ್ಯೆ ಮೀಸಾ ಭಾರತಿ ಅವರ ಹೆಸರನ್ನೂ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಝಾ, ಬಿಹಾರ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮುಖ್ಯಸ್ಥರಾಗಿದ್ದ ದಿವಂಗತ ಸದಾನಂದ ಸಿಂಗ್ ಮತ್ತು ಅವರ ಪುತ್ರ ಶುಭಾನಂದ ಮುಕೇಶ್, ಕಾಂಗ್ರೆಸ್ ವಕ್ತಾರ ರಾಜೇಶ್ ರಾಥೋರ್ ಅವರ ವಿರುದ್ಧವೂ ಆರೋಪ ಮಾಡಿದ್ದಾರೆ.

ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತನಿಖೆ ಕೈಗೊಳ್ಳುವಂತೆ ನ್ಯಾಯಾಲಯವು ಪಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆರ್‌ಜೆಡಿಯ ವಕ್ತಾರ ಹಾಗೂ ಮಾಜಿ ಶಾಸಕ ಮೃತ್ಯುಂಜಯ ತಿವಾರಿ ಅವರು ‘ಕಾಂಗ್ರೆಸ್ ಟಿಕೆಟ್‌ಗಾಗಿ ದೂರುದಾರರು ನಮ್ಮ ಪಕ್ಷದ ಮುಖಂಡರ ವಿರುದ್ಧ ಆರೋಪ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಕಾಂಗ್ರೆಸ್, ಆರ್‌ಜೆಡಿಯ ಹಳೆಯ ಮಿತ್ರಪಕ್ಷವಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು