ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯಲ್ಲಿ ಮಹಿಳಾ ಅಧಿಕಾರಿಗಳ ಸಾಧನೆ ಕಡೆಗಣನೆ: ‘ಸುಪ್ರೀಂ’

ದೋಷಪೂರಿತ ವಾರ್ಷಿಕ ವರದಿಗಳು: ಕಾಯಂ ಸೇವೆಯ ಹುದ್ದೆಯ ಕುರಿತ ಅರ್ಜಿ ಅಂಗೀಕರಿಸಿದ ’ಸುಪ್ರೀಂ’
Last Updated 25 ಮಾರ್ಚ್ 2021, 9:45 IST
ಅಕ್ಷರ ಗಾತ್ರ

ನವದೆಹಲಿ: ಸೇನೆಯಲ್ಲಿ ವಾರ್ಷಿಕ ರಹಸ್ಯ ವರದಿ ಸಿದ್ಧಪಡಿಸುವಾಗ ಮಹಿಳಾ ಅಧಿಕಾರಿಗಳ ಸಾಧನೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಸುಪ್ರಿಂ ಕೋರ್ಟ್‌ ಹೇಳಿದೆ.

ಸೇನೆಯಲ್ಲಿ ಕಾಯಂ ಸೇವೆಯ ಹುದ್ದೆಗಳನ್ನು ಕಲ್ಪಿಸಬೇಕು ಎಂದು ‘ಶಾರ್ಟ್‌ ಸರ್ವಿಸ್‌ ಕಮಿಷನ್‌ (ಎಸ್‌ಎಸ್‌ಸಿ) ಮಹಿಳಾ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಗಳನ್ನು ಗುರುವಾರ ಅಂಗೀಕರಿಸಿದ ಸುಪ್ರೀಂ ಕೋರ್ಟ್‌, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

‘ವಾರ್ಷಿಕ ರಹಸ್ಯ ವರದಿಯ (ಎಸಿಆರ್‌) ಮೌಲ್ಯಮಾಪನ ಪ್ರಕ್ರಿಯೆಗಳು ಲೋಪ ಮತ್ತು ತಾರತಮ್ಯದಿಂದ ಕೂಡಿವೆ. ನ್ಯಾಯಯುತವಾಗಿ ಈ ವರದಿ ಸಿದ್ಧಪಡಿಸುತ್ತಿಲ್ಲ ಎನ್ನುವುದು ಮನವರಿಕೆಯಾಗಿದೆ’ ಎಂದು ಹೇಳಿದೆ.

‘ಪುರುಷರಿಂದ ಪುರುಷರಿಗಾಗಿ ರೂಪಿಸಿರುವ ನಮ್ಮ ಸಮಾಜದ ವ್ಯವಸ್ಥೆಯಲ್ಲಿ ಸಮಾನತೆ ಎನ್ನುವುದು ಸೋಗಲಾಡಿತನವಾಗಿದೆ. ಸ್ವಾತಂತ್ರ್ಯಪಡೆದ ಬಳಿಕ, ತಾರತಮ್ಯವನ್ನು ಹೋಗಲಾಡಿಸಿ ಸಮಾನ ಅವಕಾಶ ಕಲ್ಪಿಸುವ ಪ್ರಯತ್ನಗಳು ಇನ್ನೂ ನಡೆಯುತ್ತಿವೆ’ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠವು ಅಭಿಪ್ರಾಯಪಟ್ಟಿದೆ.

ಭಾರತೀಯ ಸೇನೆಯಲ್ಲಿನ ಎಲ್ಲ ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವೆಯ ಹುದ್ದೆಗಳನ್ನು ಕಲ್ಪಿಸಬೇಕು ಎಂದು ಕಳೆದ ವರ್ಷ ಫೆಬ್ರುವರಿ 17ರಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಮೂರು ತಿಂಗಳಲ್ಲಿ ಈ ಆದೇಶವನ್ನು ಜಾರಿಗೊಳಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿತ್ತು. ಹೀಗಾಗಿ, ಸೇನೆಯ ಹಲವು ಮಹಿಳಾ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು.

‘ಸೇನೆಯಲ್ಲಿ ಕಾಯಂ ಸೇವೆ ಹುದ್ದೆಗಳನ್ನು ಕಲ್ಪಿಸುವ ಬಗ್ಗೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ ನೀಡಿದ್ದ ತೀರ್ಪಿನಲ್ಲಿ ಲಿಂಗ ತಾರತಮ್ಯದ ಬಗ್ಗೆ ಉಲ್ಲೇಖಿಸಿತ್ತು. ಆದರೂ, ಮಹಿಳಾ ಅಧಿಕಾರಿಗಳ ಕಾರ್ಯನಿರ್ವಹಣೆಯ ಮೌಲ್ಯಮಾಪನದ ಸಂದರ್ಭದಲ್ಲಿ ಸಾಧನೆಯ ಬಗ್ಗೆ ಗಮನಹರಿಸಿಲ್ಲ’ ಎಂದು ಪೀಠವು ಹೇಳಿದೆ.

‘ಮಹಿಳಾ ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎನ್ನುವುದನ್ನು ಮಾತ್ರ ಹೇಳಿದರೆ ಸಾಲದು. ಸೇನೆಯಲ್ಲಿ ಮಹಿಳಾ ಅಧಿಕಾರಿಗಳ ಪರಿಸ್ಥಿತಿಯೂ ಭಿನ್ನವಾಗಿದೆ. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ನ್ಯಾಯಾಲಯದ ಮುಂದೆ ಬಂದಿದ್ದಾರೆ. ದಯಾಧರ್ಮಕ್ಕೆ ಅವರು ಇಲ್ಲಿ ಬಂದಿಲ್ಲ’ ಎಂದು ಹೇಳಿದ್ದಾರೆ.

ಕಾಯಂ ಸೇವೆಯ ಹುದ್ದೆಗಳನ್ನು ಒದಗಿಸುವ ಪ್ರಕ್ರಿಯೆಯು ನ್ಯಾಯಯುತವಾಗಿಲ್ಲ ಮತ್ತು ಸಮರ್ಪಕವಾದ ಕಾರಣಗಳಿಂದ ಕೂಡಿಲ್ಲ ಎಂದು ಮಹಿಳಾ ಅಧಿಕಾರಿಗಳು ಅರ್ಜಿಯಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT