ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಲಸಿಕೆ ಲಭ್ಯವಾಗಲು ಸರ್ಕಾರದೊಂದಿಗೆ ಕೈಜೋಡಿಸಲು ಬದ್ಧ: ಫೈಝರ್‌

Last Updated 3 ಡಿಸೆಂಬರ್ 2020, 15:31 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್‌–19 ಲಸಿಕೆ ಲಭ್ಯತೆಗೆ ಸಂಬಂಧಿಸಿದಂತೆ ಅವಕಾಶಗಳ ಹುಡುಕಾಟಕ್ಕಾಗಿ ಭಾರತ ಸರ್ಕಾರದೊಂದಿಗೆ ತೊಡಗಿಸಿಕೊಂಡಿರುವುದಾಗಿ ಫೈಝರ್‌ ಫಾರ್ಮಾ ಕಂಪನಿ ಗುರುವಾರ ಹೇಳಿದೆ.

ಇಂಗ್ಲೆಂಡ್‌ ಬುಧವಾರ ಫೈಝರ್‌/ ಬಯೋಎನ್‌ಟೆಕ್‌ ಕೋವಿಡ್‌–19 ಲಸಿಕೆ ಬಳಕೆಗೆ ಅನುಮೋದನೆ ನೀಡಿದೆ. ತುರ್ತು ಪರಿಸ್ಥಿತಿಯಲ್ಲಿ ಲಸಿಕೆ ಬಳಕೆಗೆ ಇಂಗ್ಲೆಂಡ್‌ನ ಎಂಎಚ್‌ಆರ್‌ಎ ನಿಯಂತ್ರಣ ಸಂಸ್ಥೆ ಸಮ್ಮತಿ ನೀಡಿದೆ.

'ಪ್ರಸ್ತುತ ಜಗತ್ತಿನಾದ್ಯಂತ ಹಲವು ಸರ್ಕಾರಗಳೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ ಹಾಗೂ ಲಸಿಕೆ ಲಭ್ಯತೆಯ ಕುರಿತು ಭಾರತ ಸರ್ಕಾರದೊಂದಿಗೆ ಕೈಜೋಡಿಸಿದ್ದೇವೆ' ಎಂದು ಫೈಝರ್‌ ಕಂಪನಿಯ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಸರ್ಕಾರದೊಂದಿಗೆ ಮಾಡಿಕೊಳ್ಳುವ ಒಪ್ಪಂದಗಳ ಅನ್ವಯ ಮಾತ್ರವೇ ಫೈಝರ್‌ ಲಸಿಕೆ ಪೂರೈಕೆ ಮಾಡಲಿದೆ. ಎಲ್ಲರಿಗೂ ಲಸಿಕೆ ಲಭ್ಯತೆ ಅವಕಾಶಗಳು ಸಿಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳೊಂದಿಗೆ ಕಾರ್ಯಾಚರಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ದೇಶದಲ್ಲಿ ಲಸಿಕೆ ಲಭ್ಯತೆಯ ಕುರಿತು ನವೆಂಬರ್‌ನಲ್ಲಿ ಮಾತನಾಡಿದ್ದ ಕೋವಿಡ್‌–19 ರಾಷ್ಟ್ರೀಯ ಕಾರ್ಯಪಡೆಯ ನೇತೃತ್ವ ವಹಿಸಿರುವ ವಿ.ಕೆ.ಪೌಲ್‌, 'ಫೈಝರ್‌ ಲಸಿಕೆ ದೇಶದಲ್ಲಿ ಪೂರೈಕೆಯಾಗಲು ಇನ್ನೂ ಕೆಲವು ತಿಂಗಳು ಬೇಕಾಗಬಹುದು' ಎಂದಿದ್ದರು.

'ಫೈಝರ್‌ ಲಸಿಕೆ ಸಂಗ್ರಹಿಸಲು ಮೈನಸ್‌ 70 ಡಿಗ್ರಿ ಸೆಲ್ಸಿಯಸ್‌ ಶೀತಮಯ ವಾತಾವರಣ ಅಗತ್ಯವಿರುವುದು ದೊಡ್ಡ ಸವಾಲಾಗಿದೆ. ಅಂಥ ವ್ಯವಸ್ಥೆಯನ್ನು ರೂಪಿಸುವುದು ಯಾವುದೇ ರಾಷ್ಟ್ರಕ್ಕೂ ಸುಲಭವಲ್ಲ. ಆದರೆ, ಅದಕ್ಕಾಗಿ ಕಾರ್ಯ ಯೋಜನೆ ರೂಪಿಸುತ್ತೇವೆ,...' ಎಂದು ಹೇಳಿದ್ದರು.

ತುರ್ತು ಪರಿಸ್ಥಿತಿಯಲ್ಲಿ ಆಸ್ಟ್ರಾಜೆನಿಕಾ–ಆಕ್ಸ್‌ಫರ್ಡ್‌ ಲಸಿಕೆ ಬಳಸಲು ಅನುಮತಿ ಕೋರಿ ಪರವಾನಗಿಗಾಗಿ ಎರಡು ವಾರಗಳಲ್ಲಿ ಮನವಿ ಸಲ್ಲಿಸಲಾಗುತ್ತದೆ ಎಂದು ಪುಣೆ ಮೂಲದ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಹೇಳಿದೆ.

ಐಸಿಎಂಆರ್‌ ಮತ್ತು ಭಾರತ್‌ ಬಯೋಟೆಕ್‌ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಕೊವಾಕ್ಸಿನ್‌ ಲಸಿಕೆಯು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ. ಝೈಡಸ್‌ ಕ್ಯಾಡಿಲಾ ಎರಡನೇ ಹಂತದ ಪ್ರಯೋಗ ಪೂರ್ಣಗೊಳಿಸಿದೆ, ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ರಷ್ಯಾದ ಸ್ಫುಟ್ನಿಕ್‌ ಲಸಿಕೆಯ ಎರಡು ಮತ್ತು 3ನೇ ಹಂತಗಳ ಪ್ರಯೋಗಗಳನ್ನು ಶುರು ಮಾಡಿದೆ. ಮತ್ತೊಂದು ದೇಶೀಯ ಸಂಸ್ಥೆ ಬಯೊಲಾಜಿಕಲ್ ಇ ಲಿಮಿಟೆಡ್‌ ಕೋವಿಡ್‌–19 ಲಸಿಕೆಯ ಮೊದಲ ಮತ್ತು 2ನೇ ಹಂತದ ಪ್ರಯೋಗ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT