ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗದ ಆಮಿಷ: 500 ಮಂದಿಗೆ ಮೋಸ

ಸುಮಾರು ₹7.5 ಕೋಟಿ ವಂಚನೆ; ಪಿಎಚ್.ಡಿ ಪದವೀಧರ ಸೇರಿ ಐವರ ಬಂಧನ
Last Updated 26 ಮಾರ್ಚ್ 2021, 13:02 IST
ಅಕ್ಷರ ಗಾತ್ರ

ನವದೆಹಲಿ: ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಸುಮಾರು 500 ಜನರಿಂದ ₹7.5 ಕೋಟಿ ಹಣ ಪಡೆದು ವಂಚಿಸಿರುವ ಆರೋಪದ ಮೇರೆಗೆ ಪಿಎಚ್‌.ಡಿ ಪದವೀಧರ ಸೇರಿದಂತೆ ಐವರನ್ನು ಗುರುಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮನೋಜ್ ಹೋಟಾ (44), ಆಶಿಶ್ ರಂಜನ್‌ (26), ಅಭಿಷೇಕ್ ಕುಮಾರ್‌(27), ಸೋನು ರಾವಲ್‌ (29), ಶೇಖ್‌ ಪಿಂಟು ಅಲಿ (25) ಬಂಧಿತ ಆರೋಪಿಗಳು. ಪ್ರಕರಣದ ಪ್ರಮುಖ ಆರೋಪಿ ಹೋಟಾ , ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಂದರ್ಶಕ ಅಧ್ಯಾಪಕರಾಗಿ ಕೆಲಸ ಮಾಡಿದ್ದು, ಸ್ವಂತ ಕಾಲೇಜು ಸ್ಥಾಪಿಸಿದ್ದರು. ಆದರೆ ಆ ಕಾಲೇಜು ಯಶಸ್ವಿಯಾಗದ ಕಾರಣಕ್ಕೆ ಸಾಲದ ಸುಳಿಗೆ ಸಿಲುಕಿದ್ದರು. ಎಂಬಿಎ ಪದವಿ ಪಡೆದಿರುವ ಇವರು, ಹೆಸರಾಂತ ವಿಶ್ವವಿದ್ಯಾಲಯದಿಂದ ಮಾನವ ಸಂಪನ್ಮೂಲದಲ್ಲಿ ಪಿಎಚ್‌.ಡಿ ಕೂಡ ಮಾಡಿದ್ದಾರೆ.

ಸಾಲದ ಸುಳಿಯಿಂದ ಪಾರಾಗುವ ಸಲುವಾಗಿ ಹೋಟಾ ಹಣಗಳಿಸಲು ಈ ಹಗರಣ ನಡೆಸಿದ್ದಾರೆ. ಜನರನ್ನು ಮೋಸಗೊಳಿಸಲು ಹೋಟಾ, ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲಎಂಜಿನಿಯರ್‌ಗಳಾದ ಆಶಿಶ್ ರಂಜನ್ ಮತ್ತು ಅಭಿಷೇಕ್ ಕುಮಾರ್ ಎಂಬುವವರನ್ನು ನೇಮಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಹಲವಾರು ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳು ಮತ್ತು ಇಮೇಲ್ ಐಡಿಗಳನ್ನು ಸೃಷ್ಟಿಸಿದ್ದರು. ಕಂಪನಿಗಳಲ್ಲಿ ವ್ಯವಸ್ಥಾಪಕ ಹುದ್ದೆಗಳನ್ನು ನೀಡುವ ಆಮಿಷ ತೋರಿಸಿ, ಆಯ್ಕೆ ಪ್ರಕ್ರಿಯೆ, ಡಾಕ್ಯುಮೆಂಟ್ ಪರಿಶೀಲನೆ, ಆಪ್ಟಿಟ್ಯೂಡ್ ಟೆಸ್ಟ್ ಮುಂತಾದ ವಿವಿಧ ಕಾರಣಗಳನ್ನು ಉಲ್ಲೇಖಿಸಿ, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಹಣ ಠೇವಣಿ ಮಾಡಿಸಿ 500ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾರೆ ಎಂದು ಸೈಬರ್‌ ಘಟಕದ ಅಧಿಕಾರಿ ಅನೀಶ್ ರಾಯ್ ತಿಳಿಸಿದ್ದಾರೆ.

ಆರೋಪಿಗಳುಸುಮಾರು ₹20 ಲಕ್ಷ ವಂಚಿಸಿದ ಸಂಬಂಧ ಉತ್ತಮ್ ನಗರದ ನಿವಾಸಿಗಳು ಪೊಲೀಸರಿಗೆ ದೂರು ನೀಡಿದಾಗ ಈ ಹಗರಣ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT