ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ ಜೊತೆ ಚರ್ಚಿಸಿ ಅಂತಿಮ ತೀರ್ಮಾನ: ಗೋಯಲ್‌

ಕಲಬುರ್ಗಿ ರೈಲ್ವೆ ವಿಭಾಗ; ರಾಜ್ಯಸಭೆಯಲ್ಲಿ ಪ್ರಸ್ತಾಪ
Last Updated 19 ಮಾರ್ಚ್ 2021, 21:56 IST
ಅಕ್ಷರ ಗಾತ್ರ

ನವದೆಹಲಿ: ಕಲಬುರ್ಗಿಯಲ್ಲಿ ರೈಲ್ವೆ ವಿಭಾಗ ಆರಂಭಿಸುವುದು ಕಾರ್ಯಸಾಧುವಲ್ಲ ಎಂಬ ತಜ್ಞರ ಅಧ್ಯಯನ ವರದಿಯ ಮೇರೆಗೆ ಸರ್ಕಾರ ಪ್ರಸ್ತಾವವನ್ನು ಕೈಬಿಟ್ಟಿದೆ ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ರಾಜ್ಯಸಭೆಯಲ್ಲಿ ಶುಕ್ರವಾರ ಸ್ಪಷ್ಟಪಡಿಸಿದರು.

‘ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ 8 ವರ್ಷಗಳ ಹಿಂದೆಯೇ ಬಜೆಟ್‌ನಲ್ಲಿ ಕಲಬುರ್ಗಿ ರೈಲ್ವೆ ವಿಭಾಗ ಸ್ಥಾಪನೆ ಕುರಿತು ಘೋಷಿಸಿದ್ದರು. ಈಗ ಕಲ್ಯಾಣ ಕರ್ನಾಟಕ ಭಾಗದಿಂದಲೇ ಬಿಜೆಪಿಯ ಐವರು ಸಂಸದರಿದ್ದರೂ ರೈಲ್ವೆ ವಿಭಾಗಕ್ಕೆ ಅನುಮೋದನೆ ದೊರೆತಿಲ್ಲವೇಕೆ’ ಎಂಬ ಕಾಂಗ್ರೆಸ್‌ನ ಜಿ.ಸಿ. ಚಂದ್ರಶೇಖರ್‌ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.

ಯಾವುದೇ ಅಗತ್ಯ ಅಧ್ಯಯನ ನಡೆಸದೆಯೇ, ಕೇವಲ ಚುನಾವಣೆಯನ್ನೇ ಉದ್ದೇಶವಾಗಿಸಿ ಆ ಘೋಷಣೆ ಮಾಡಲಾಗಿತ್ತು. ಕಾರ್ಯಸಾಧುವಲ್ಲ ಎಂಬ ಕಾರಣದಿಂದ ವಿಭಾಗ ಸ್ಥಾಪನೆ ಕೈಬಿಡಲಾಗಿದೆ ಎಂದು ಗೋಯಲ್‌ ಪುನರುಚ್ಚರಿಸಿದರು.

‘ಅಗತ್ಯ ಅಧ್ಯಯನದ ಬಳಿಕವೇ ರೈಲ್ವೆ ವಿಭಾಗದ ಘೋಷಣೆ ಮಾಡಲಾಗಿತ್ತು. 3 ರಾಜ್ಯಗಳನ್ನು ಒಳಗೊಂಡ ವಿಭಾಗ ಸ್ಥಾಪನೆ ಅಗತ್ಯವಿದೆ ಎಂದು ಹುಬ್ಬಳ್ಳಿ ರೈಲ್ವೆ ವಲಯದ ವ್ಯವಸ್ಥಾಪಕರಾಗಿದ್ದ ಮಿತ್ತಲ್‌ ಸಲಹೆ ನೀಡಿದ್ದರು. ಈಗ ಕಾರ್ಯಸಾಧುವಲ್ಲ ಎಂದಾದಲ್ಲಿ, ವಿಭಾಗ ಸ್ಥಾಪನೆ ಉದ್ದೇಶಕ್ಕೆ ನೀಡಲಾದ ಭೂಮಿಯನ್ನು ಮರಳಿ ನೀಡಿಲ್ಲವೇಕೆ, ಆ ಭೂಮಿಗೆ ತಂತಿಬೇಲಿ ಹಾಕಿದ್ದೇಕೆ’ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಪ್ರಾಯೋಗಿಕ ಸ್ಥಿತಿಗತಿ ಹಾಗೂ ಲಾಭ–ನಷ್ಟದ ಲೆಕ್ಕಾಚಾರದೊಂದಿಗೆ ರೈಲ್ವೆ ವಿಭಾಗ ಸ್ಥಾಪಿಸಲಾಗುತ್ತದೆ. ಈ ಸಂಬಂಧ ತಾರತಮ್ಯ ನೀತಿ ಅನುಸರಿಸಲು ಆಗದು. ಆದರೂ, ಈ ಕುರಿತು ಖರ್ಗೆ ಅವರೊಂದಿಗೆ ಪ್ರತ್ಯೇಕವಾದ ಸಭೆ ನಡೆಸಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಗೋಯಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT