ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿ ವಿದ್ಯಾರ್ಥಿಗಳಿಗೆ ₹1 ಕೋಟಿ ಸಂಬಳದ ಉದ್ಯೋಗ: ಟಿ.ಬಿ. ರಾಮಕಮಲ್

Last Updated 2 ಡಿಸೆಂಬರ್ 2022, 15:48 IST
ಅಕ್ಷರ ಗಾತ್ರ

ನವದೆಹಲಿ: ಐಐಟಿ ಮದ್ರಾಸ್‌ನ 25 ವಿದ್ಯಾರ್ಥಿಗಳು ಹಾಗೂ ಐಐಟಿ ಗುವಾಹಟಿಯ 5 ವಿದ್ಯಾರ್ಥಿಗಳು ₹ 1 ಕೋಟಿ ವಾರ್ಷಿಕ ಮೊತ್ತದ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.

ಐಐಟಿ ರೂರ್ಕಿಯ ವಿದ್ಯಾರ್ಥಿಯೊಬ್ಬರು ₹ 1.06 ಕೋಟಿ ವಾರ್ಷಿಕ ಪ್ಯಾಕೇಜ್‌ನ ಉದ್ಯೋಗಕ್ಕೆ ಹಾಗೂ ಮತ್ತೊಬ್ಬ ವಿದ್ಯಾರ್ಥಿ ₹1.30 ಕೋಟಿ ವಾರ್ಷಿಕ ಪ್ಯಾಕೇಜ್‌ನ ಉದ್ಯೋಗಕ್ಕೆ ಆಯ್ಕೆಯಾಗಿದ್ದು, 10 ವಿದ್ಯಾರ್ಥಿಗಳು ತಲಾ ₹ 80 ಲಕ್ಷ ವಾರ್ಷಿಕ ಸಂಬಳದ ಉದ್ಯೋಗ ಪಡೆದಿದ್ದಾರೆ.

ಈ ವರ್ಷ ಅತಿಹೆಚ್ಚು ಮೊತ್ತದ ಸಂಬಳದ ಉದ್ಯೋಗಕ್ಕೆ ಐಐಟಿ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ದಾಖಲೆ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 10ರಷ್ಟು ಉದ್ಯೋಗಾವಕಾಶ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

‘ಹೊಸ ಹೈಬ್ರಿಡ್ ವ್ಯವಸ್ಥೆಯು ವಿದ್ಯಾರ್ಥಿ- ಉದ್ಯೋಗದಾತರ ಸಂವಹನದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಉದ್ಯೋಗಗಳಿಗೆ ಕಾರಣವಾಗುತ್ತದೆ ಎಂದು ನಾವು ಭಾವಿಸುತ್ತೇವೆ’ ಎಂದು ಮದ್ರಾಸ್ ಐಐಟಿಯ ವಿದ್ಯಾರ್ಥಿ ವ್ಯವಹಾರಗಳ ಕಾರ್ಯದರ್ಶಿ ಟಿ.ಬಿ. ರಾಮಕಮಲ್ ಅಭಿಪ್ರಾಯಪಟ್ಟಿದ್ದಾರೆ.

ದೊಡ್ಡ ಕಂಪನಿಗಳು ಮದ್ರಾಸ್ ಐಐಟಿಯ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸಿವೆ. ಅದರಲ್ಲಿಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ 14, ಬಜಾಜ್ ಆಟೋ ಲಿಮಿಟೆಡ್ ಮತ್ತು ಚೇತಕ್ ಟೆಕ್ ಲಿಮಿಟೆಡ್ 10 ವಿದ್ಯಾರ್ಥಿಗಳಿಗೆ, ಕ್ವಾಲ್ಕಾಮ್ 8, ಜೆಪಿ ಮೋರ್ಗನ್ ಚೇಸ್ ಮತ್ತು ಕೋ 9, ಪ್ರಾಕ್ಟರ್ ಮತ್ತು ಗ್ಯಾಂಬಲ್ 7, ಮೋರ್ಗನ್ ಸ್ಟಾನ್ಲಿ 6, ಗ್ರಾವಿಟನ್ 6, ಮೆಕಿನ್ಸೆ & ಕಂಪನಿ 5 ಮತ್ತು ಕೊಹೆಸಿಟಿ 5 ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿವೆ.

ಗುವಾಹಟಿಯ ಐಐಟಿಯು ಶುಕ್ರವಾರ ಉದ್ಯೋಗಮೇಳ ನಡೆಸಿದ್ದು, ಇದರಲ್ಲಿ 84 ಕಂಪನಿಗಳು 290 ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡಿವೆ. ಇದರಲ್ಲಿ ಐವರು ವಿದ್ಯಾರ್ಥಿಗಳು ₹ 1 ಕೋಟಿ ಮೊತ್ತದ ವಾರ್ಷಿಕ ಪ್ಯಾಕೇಜ್‌ನ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.

ಖರಗಪುರ ವಿದ್ಯಾರ್ಥಿಗೆ ₹2.6 ಕೋಟಿ ವೇತನ
ಖರಗ್‌ಪುರ, ಪಶ್ಚಿಮ ಬಂಗಾಳ:
ಇಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ವಿದ್ಯಾರ್ಥಿಯೊಬ್ಬರಿಗೆ ವಿದೇಶಿ ಕಂಪನಿಯೊಂದರಲ್ಲಿ ವಾರ್ಷಿಕ ₹2.6 ಕೋಟಿ ವೇತನದ ಉದ್ಯೋಗ ದೊರೆತಿದೆ.

‘ಇದೇ ಸಂಸ್ಥೆಯ ಇನ್ನಿಬ್ಬರು ವಿದ್ಯಾರ್ಥಿಗಳಿಗೆ ತಲಾ ₹1 ಕೋಟಿಯ ಉದ್ಯೋಗ ಲಭಿಸಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT