ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಸ್ವತ್ತಾಗುತ್ತಿವೆ ಪೂಜಾ ಸ್ಥಳಗಳು: ದೆಹಲಿ ಹೈಕೋರ್ಟ್‌ ಕಳವಳ

Last Updated 13 ಮಾರ್ಚ್ 2023, 13:04 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಾರ್ವಜನಿಕ ಪೂಜಾ ಸ್ಥಳಗಳನ್ನು ಖಾಸಗಿ ಸ್ವತ್ತಾಗಿ ಪರಿವರ್ತಿಸಿಕೊಳ್ಳುತ್ತಿರುವ ಬಗ್ಗೆ ದೆಹಲಿ ಹೈಕೋರ್ಟ್‌ ಸೋಮವಾರ ಕಳವಳ ವ್ಯಕ್ತಪಡಿಸಿದೆ.

ಇಂಡಿಯಾ ಗೇಟ್ ಬಳಿಯ ಮಾನ್‌ ಸಿಂಗ್ ರಸ್ತೆಯಲ್ಲಿರುವ ಜಬ್ತಾ ಗಂಜ್‌ ಮಸೀದಿ ಪಕ್ಕದ ಪ್ರಮುಖ ಆಸ್ತಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌ ಅವರು, ಸಾರ್ವಜನಿಕ ಪೂಜಾ ಸ್ಥಳಗಳ ದುರ್ಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಪುರೋಹಿತರು, ಅರ್ಚಕರು, ಇಮಾಮ್‌ಗಳು ಮತ್ತು ಉಸ್ತುವಾರಿಗಳು ಹಾಗೂ ಅವರ ಕುಟುಂಬದವರು ಸಾರ್ವಜನಿಕ ಪೂಜಾ ಸ್ಥಳಗಳನ್ನು ಅನಧಿಕೃತ, ಅಕ್ರಮ ವಿಧಾನಗಳಿಂದ ಖಾಸಗಿ ಸ್ವತ್ತಾಗಿಸಿಕೊಂಡು, ಹಕ್ಕು ಚಲಾಯಿಸುತ್ತಿದ್ದಾರೆ. ಪೂಜಾ ಸ್ಥಳಗಳ ನಿರ್ವಹಣೆಯ ಉಸ್ತುವಾರಿಗಳ ವಿಸ್ತರಿತ ಕುಟುಂಬಗಳೂ ಇಂತಹ ಸ್ಥಳಗಳನ್ನು ಆಕ್ರಮಿಸಿಕೊಂಡು, ವಾಸದ ಮನೆಗಳಾಗಿ ಪರಿವರ್ತಿಸಿಕೊಂಡು ಅವರ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಕಾನೂನಿಗೆ ವಿರುದ್ಧವಾದುದು’ ಎಂದು ಅವರು ಹೇಳಿದರು.

ಅರ್ಜಿದಾರ ಜಹೀರ್ ಅಹ್ಮದ್ ಎಂಬುವವರು ಮಸೀದಿಗೆ ಹೊಂದಿಕೊಂಡಂತಿರುವ ಸ್ವಲ್ಪ ಜಾಗ ಮತ್ತು ಒಂದು ಕೊಠಡಿ, ಅಡುಗೆ ಮನೆ, ಸ್ನಾನಗೃಹ ಇರುವ ಆಸ್ತಿಯ ಹಕ್ಕಿಗೆ ಸಂಬಂಧಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಮಗೆ ಕಿರುಕುಳವಿದೆ ಎಂದೂ ಆರೋಪಿಸಿ, ಮನೆಯ ಪುನರ್‌ ನಿರ್ಮಾಣಕ್ಕೆ ಅವರು ಅನುಮತಿ ಕೋರಿದ್ದರು.

ವಕ್ಫ್ ಬೋರ್ಡ್ ಮತ್ತು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ಅತಿಕ್ರಮಣ ತೆರವಿಗೆ ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿದಾರ, ತಾನು ಮತ್ತು ತನ್ನ ಕುಟುಂಬ ಹಲವು ದಶಕಗಳಿಂದ ಈ ಆಸ್ತಿಯಲ್ಲಿ ವಾಸಿಸುತ್ತಿದ್ದು, ಇದು ಮಸೀದಿ ಗೋಡೆಯಿಂದ ಬೇರ್ಪಡಿಸಲಾಗಿದೆ. ಈ ಆಸ್ತಿಯ ಮೇಲಿನ ತಮ್ಮ ಹಕ್ಕು ಮಾನ್ಯ ಮಾಡುವಂತೆಯೂ ಕೋರಿದ್ದರು.

ಅರ್ಜಿದಾರ ಜಹೀರ್‌ ಅಹ್ಮದ್‌ ಅವರು ದೆಹಲಿ ವಕ್ಫ್‌ ಬೋರ್ಡ್‌ಗೆ ಸೇರಿದ ಆಸ್ತಿಯ ಅನಧಿಕೃತ ಒತ್ತುವಾರಿದಾರ ಎನ್ನುವುದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಅವರ ಅರ್ಜಿ ವಜಾಗೊಳಿಸಿದರು. ಅವರ ಅರ್ಜಿಗೆ ಯಾವುದೇ ಅರ್ಹತೆ ಇಲ್ಲ. ಎಂಟು ವಾರಗಳಲ್ಲಿ ದೆಹಲಿ ವಕ್ಫ್ ಮಂಡಳಿಗೆ ₹ 15 ಲಕ್ಷ ಪಾವತಿಸುವ ಜತೆಗೆ, ಇದೇ ಗಡುವಿನೊಳಗೆ ವಕ್ಫ್‌ ಮಂಡಳಿಗೆ ₹2 ಲಕ್ಷ ವೆಚ್ಚ ಭರಿಸಲು ಅರ್ಜಿದಾರನಿಗೆ ನಿರ್ದೇಶನ ನೀಡಿದರು.

‘ಅರ್ಜಿದಾರ ಮತ್ತು ಅವರನ್ನು ಪ್ರತಿನಿಧಿಸಿದ ಮೂವರು ವ್ಯಕ್ತಿಗಳು ಸಂಬಂಧಿತ ಆಸ್ತಿಯಲ್ಲಿ ಅನಧಿಕೃತವಾಗಿ ನೆಲೆಸಿದ್ದಾರೆ ಎನ್ನುವುದು ಸ್ಪಷ್ಟ ಮತ್ತು ಈ ಆಸ್ತಿಯಲ್ಲಿ ಯಾವುದೇ ಹಕ್ಕು ಹೊಂದಿಲ್ಲದ ಅತಿಕ್ರಮಣಕಾರರು ಇವರು’ ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಹೇಳಿದರು.

ಪ್ರಮುಖ ಆಸ್ತಿ ಮಸೀದಿಯಿಂದ ಅತಿಕ್ರಮಣವಾಗಿದೆಯೇ ಅಥವಾ ಅದಕ್ಕೆ ಹಂಚಿಕೆಯಾದ ಪ್ರಕಾರ ಬಳಕೆಯಾಗುತ್ತಿದೆಯೇ ಎನ್ನುವುದರ ಖಾತ್ರಿಗೆ ಆಸ್ತಿಯ ಗಡಿರೇಖೆ ಗುರುತಿಸುವಂತೆ ದೆಹಲಿ ವಕ್ಫ್ ಮಂಡಳಿ ಅಧಿಕಾರಿಗಳಿಗೆ ಸಂಬಂಧಪಟ್ಟ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ನಿರ್ದೇಶಿಸುವುದು ಸೂಕ್ತವೆಂದು ನ್ಯಾಯಮೂರ್ತಿಗಳು ಪರಿಗಣಿಸಿದರು. ಆಸ್ತಿಯ ನಕ್ಷೆ ಗಡಿರೇಖೆ ಗುರುತು ಪ್ರಕ್ರಿಯೆ ನಾಲ್ಕು ವಾರಗಳಲ್ಲಿ ಮುಗಿಯಬೇಕು ಎಂದೂ ಆದೇಶಿಸಿದರು.

‘ಮಸೀದಿಯಲ್ಲಿರುವ ಇಮಾಮ್ ಕುಟುಂಬವು ಮಸೀದಿ ಆಸ್ತಿಯಲ್ಲಿ ಯಾವುದೇ ಸ್ವತಂತ್ರ ಹಕ್ಕುಗಳನ್ನು ಸಾಧಿಸಲು ಸಾಧ್ಯವಿಲ್ಲ. ಇಮಾಮ್‌ಗಳನ್ನು ಕೇವಲ ಪ್ರಾರ್ಥನೆ ನಡೆಸುವ ಮತ್ತು ವಕ್ಫ್ ಆಸ್ತಿ ನೋಡಿಕೊಳ್ಳುವ ಉದ್ದೇಶಗಳಿಗಾಗಿ ವಕ್ಫ್ ಮಂಡಳಿ ನೇಮಿಸಿರುತ್ತದೆ. ವಕ್ಫ್‌ ಮಂಡಳಿ ಆಸ್ತಿ ಮೇಲೆ ಹಕ್ಕು ಸಾಧಿಸುವ ಯಾವುದೇ ಪ್ರಯತ್ನಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ‌ವಕ್ಫ್‌ ಮಂಡಳಿಗೆ ಹಂಚಿಕೆಯಾದ ಭೂಮಿಯನ್ನು ಹಂಚಿಕೆಯಾದ ಉದ್ದೇಶಗಳಿಗಾಗಿ ಅಂದರೆ, ಮಸೀದಿ ನಡೆಸಲು ಮಾತ್ರ ಬಳಸಬೇಕು. ಯಾವುದೇ ಅಕ್ರಮ ಬಳಕೆಗೆ ಅನುಮತಿ ಇಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT