ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ-ಮುಂಬೈ ಹೆದ್ದಾರಿಯ ಮೊದಲ ಹಂತ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

Last Updated 12 ಫೆಬ್ರುವರಿ 2023, 14:17 IST
ಅಕ್ಷರ ಗಾತ್ರ

ದೌಸಾ: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನ 246 ಕಿ.ಮೀ ಉದ್ದದ ಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೌಸಾದಲ್ಲಿ ಉದ್ಘಾಟಿಸಿದರು.

ದೆಹಲಿ-ದೌಸಾ-ಲಾಲ್ಸೋಟ್ ಮಾರ್ಗವು ದೆಹಲಿ ಮತ್ತು ಜೈಪುರ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

₹18,000 ಕೋಟಿಗೂ ಹೆಚ್ಚು ಮೊತ್ತದ ಮೊದಲ ಹಂತದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ಸೇರಿದಂತೆ ಒಟ್ಟು ನಾಲ್ಕು ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಪ್ರಧಾನಿ ನೆರವೇರಿಸಿದರು.

ಹೆದ್ದಾರಿ ಯೋಜನೆಗಳು, ಬಂದರುಗಳು, ರೈಲ್ವೆ, ಆಪ್ಟಿಕಲ್ ಫೈಬರ್ ಮತ್ತು ವೈದ್ಯಕೀಯ ಕಾಲೇಜು ತೆರೆಯಲು ಸರ್ಕಾರ ಹೂಡಿಕೆ ಮಾಡಿದಾಗ ಅದು ವ್ಯಾಪಾರಿಗಳು, ಸಣ್ಣ ಅಂಗಡಿಯವರು ಮತ್ತು ಕೈಗಾರಿಕೆಗಳಿಗೆ ಬಲ ನೀಡುತ್ತದೆ ಎಂದು ಮೋದಿ ಹೇಳಿದರು.

‘ಮೂಲಸೌಕರ್ಯದ ಮೇಲಿನ ಹೂಡಿಕೆಯು ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುತ್ತದೆ’ ಎಂದರು.

ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲು ನವದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ ಹಿಂದುಳಿದ ಪ್ರದೇಶಗಳ ಮೂಲಕ ಹಾದುಹೋಗುತ್ತದೆ ಎಂದು ಹೇಳಿದರು.

2024 ರ ಅಂತ್ಯದ ವೇಳೆಗೆ ಭಾರತದ ಹೆದ್ದಾರಿಗಳನ್ನು ಅಮೆರಿಕದ ಹೆದ್ದಾರಿಗಳಿಗೆ ಸರಿಸಮನಾಗಿ ಸಿದ್ಧಪಡಿಸಲು ಪ್ರಯತ್ನಿಸಲಾಗುವುದು. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸುಮಾರು 500 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಈ ಹೆದ್ದಾರಿಯು ಹಿಂದುಳಿದ ಪ್ರದೇಶಗಳ ಮೂಲಕ ಹಾದು ಹೋಗುತ್ತಿದ್ದು, ಈ ಪ್ರದೇಶಗಳಿಗೆ ಬೆಳವಣಿಗೆಯ ಎಂಜಿನ್ ಆಗುತ್ತಿದೆ ಎಂದರು.

ಜೈಪುರ ಮತ್ತು ದೆಹಲಿ ನಡುವೆ ವಿದ್ಯುತ್ ಕೇಬಲ್ ಹಾಕಲಾಗುವುದು. ಇ-ಟ್ರಕ್‌ಗಳು ಮತ್ತು ಇ-ಬಸ್‌ಗಳು ಈ ಹೆದ್ದಾರಿಯಲ್ಲಿ ಚಲಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

‘ಕಾಗದದಲ್ಲೇ ಉಳಿದ ಯೋಜನೆಗಳು’:

‘ದೂರದೃಷ್ಟಿ ಇಲ್ಲದ ಕಾಂಗ್ರೆಸ್‌ ಸರ್ಕಾರದಿಂದಾಗಿ ರಾಜಸ್ಥಾನದ ಅಭಿವೃದ್ಧಿ ಮೂಲೆಗುಂಪಾಗಿದೆ. ಸರ್ಕಾರದ ಯೋಜನೆಗಳು ಮತ್ತು ಘೋಷಣೆಗಳು ಕೇವಲ ಕಾಗದದಲ್ಲಷ್ಟೇ ಉಳಿದಿದೆ’ ಎಂದು ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

ಪಕ್ಷದ ರ್‍ಯಾಲಿಯೊಂದರಲ್ಲಿ ಮಾತನಾಡಿದ ಅವರು, ‘ರಾಜಸ್ಥಾನದಲ್ಲಿ ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯವು ಇನ್ನಷ್ಟು ಪ್ರಗತಿ ಸಾಧಿಸಲಿದೆ’ ಎಂದೂ ಹೇಳಿದ್ದಾರೆ.

‘ರಾಜ್ಯ ಸರ್ಕಾರವು ಭಯದ ಕಾರಣದಿಂದಾಗಿ ಗಡಿ ಪ್ರದೇಶಗಳಲ್ಲಿರುವ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಲ್ಲ’ ಎಂದೂ ಮೋದಿ ಅವರು ಆರೋಪಿಸಿದ್ದಾರೆ.

‘ಕಾಂಗ್ರೆಸ್‌ ಪಕ್ಷವು ಯಾವಾಗಲೂ ನಮ್ಮ ಯೋಧರ ಸಾಮರ್ಥ್ಯವನ್ನು ಕಡಿಮೆ ಅಂದಾಜಿಸುತ್ತಿದೆ. ಶತ್ರುಗಳನ್ನು ಹೇಗೆ ತಡೆಯೋದು ಎಂಬುದು ನಮ್ಮ ರಕ್ಷಣಾ ಪಡೆಗಳಿಗೆ ತಿಳಿದಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT