ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವರ್ಣಿಮ್ ವಿಜಯ್’ ಜ್ಯೋತಿ ಬೆಳಗಿದ ಮೋದಿ

‘ವಿಜಯ್‌ ದಿವಸ್‌’ 50ನೇ ವರ್ಷಾಚರಣೆಗೆ ಚಾಲನೆ * ವರ್ಷಪೂರ್ತಿ ಹಲವು ಕಾರ್ಯಕ್ರಮ
Last Updated 16 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ 50ನೇ ವರ್ಷಾಚರಣೆ ಆರಂಭದ ಅಂಗವಾಗಿ, ಇಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವರ್ಣಿಮ್ ವಿಜಯ್’ ಜ್ಯೋತಿ ಬೆಳಗಿದರು.

‘ವಿಜಯ್‌ ದಿವಸದ ಸಂದರ್ಭದಲ್ಲಿ 1971ರ ಯುದ್ಧದಲ್ಲಿ ಭಾರತ ಗೆಲ್ಲುವಂತೆ ಮಾಡಿದ ನಮ್ಮ ಶಸ್ತ್ರಪಡೆಗಳ ಸ್ಥೈರ್ಯಗೆಡದ ಎದೆಗಾರಿಕೆಯನ್ನು ನಾವಿಂದು ನೆನಪಿಸಿಕೊಳ್ಳಬೇಕು’ ಎಂದು ಟ್ವೀಟ್ ಮೂಲಕ ಮೋದಿ ಹೇಳಿದರು.

ಪ್ರಧಾನಿ ಮೋದಿ ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾಪಡೆಗಳ ಮುಖ್ಯಸ್ಥ(ಸಿಡಿಎಸ್‌) ಹಾಗೂ ಮೂರು ಪಡೆಗಳ ಮುಖ್ಯಸ್ಥರು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಸೈನಿಕರಿಗೆ ಗೌರವ ಸಲ್ಲಿಸಿದರು.

50ನೇ ವರ್ಷಾಚರಣೆಯನ್ನು ವರ್ಷ ಪೂರ್ತಿ ಆಚರಿಸಲಾಗುತ್ತಿದೆ. ‘ನಾಲ್ಕು ವಿಜಯ ಜ್ಯೋತಿಗಳು ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಲಿವೆ. ಜೊತೆಗೆ, 1971ರ ಯುದ್ಧದಲ್ಲಿ ಹುತಾತ್ಮರಾಗಿ ಪರಮವೀರ ಚಕ್ರ ಮತ್ತು ಮಹಾವೀರ ಚಕ್ರ ಪುರಸ್ಕಾರ ಪಡೆದ ಯೋಧರ ಹಳ್ಳಿಗಳಿಗೂ ಜ್ಯೋತಿ ಹೋಗಲಿದೆ’ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

50ನೇ ವರ್ಷಾಚರಣೆ ಸಂದರ್ಭದಲ್ಲಿ ದೇಶದಾದ್ಯಂತ ಹಲವು ಕಾರ್ಯಕ್ರಮಗಳ ಮುಖಾಂತರ ಈ ವರ್ಷ ಪೂರ್ತಿ ಸುವರ್ಣ ವಿಜಯ ವರ್ಷ ಎಂದು ಆಚರಿಸಲಾಗುತ್ತದೆ.

‘ಗಡಿ ದಾಟಿ ಬರಲು ಭಯಪಡುತ್ತಿದ್ದರು’
1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತದ ಗೆಲುವಿಗೆ ಕಾರಣವಾದ ಶಸ್ತ್ರಪಡೆಗಳು ಹಾಗೂ ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ಕೆಚ್ಚೆದೆಯ ನಾಯಕತ್ವವನ್ನು ಬುಧವಾರ ಶ್ಲಾಘಿಸಿದ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ‘ನೆರೆ ರಾಷ್ಟ್ರಗಳು ಭಾರತದ ಪ್ರಧಾನಿಯ ಸಾಮರ್ಥ್ಯವನ್ನು ಗುರುತಿಸುವ ಕಾಲ ಅದಾಗಿತ್ತು ಹಾಗೂ ಗಡಿ ನಿಯಮ ಉಲ್ಲಂಘನೆ ಮಾಡಲು ನೆರೆರಾಷ್ಟ್ರಗಳು ಹೆದರುತ್ತಿದ್ದವು’ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು,‘1971ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ಐತಿಹಾಸಿಕ ವಿಜಯವನ್ನು ತನ್ನದಾಗಿಸಿಕೊಂಡಿತು. ಇದಕ್ಕಾಗಿ ನಾನು ಜನರಿಗೆ ಶುಭಾಶಯ ಕೋರುತ್ತೇನೆ. ಭಾರತೀಯ ಸೇನೆಯ ಶೌರ್ಯಕ್ಕೆ ನಮನ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.

‘ಸೈನಿಕರ ತ್ಯಾಗವನ್ನು ಸದಾ ನೆನೆಪಿಸಿಕೊಳ್ಳುತ್ತೇವೆ’
1971ರ ಯುದ್ಧದಲ್ಲಿ ಸೈನಿಕರು ಮಾಡಿದ ತ್ಯಾಗ, ಎಲ್ಲಾ ಭಾರತೀಯರಿಗೆ ಸ್ಫೂರ್ತಿಯಾಗಿದೆ. ದೇಶವು ಅವರನ್ನು ಸದಾ ನೆನಪಿಸಿಕೊಳ್ಳುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಬುಧವಾರ ಹೇಳಿದರು.

‘ಇಂದು ‘ವಿಜಯ ದಿನ’ದ ಸಂದರ್ಭದಲ್ಲಿ ನಾನು ಭಾರತೀಯ ಸೇನೆಯ ಧೈರ್ಯ ಮತ್ತು ಶೌರ್ಯಕ್ಕೆ ವಂದಿಸುತ್ತೇನೆ. 1971ರ ಯುದ್ಧದಲ್ಲಿ ಸೈನಿಕರು ತಮ್ಮ ಶೌರ್ಯದ ಹೊಸ ಕಥೆಯನ್ನು ಬರೆದಿದ್ದಾರೆ’ ಎಂದು ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT