ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ತಿಂಗಳಲ್ಲಿ 10 ಲಕ್ಷ ಜನರಿಗೆ ಉದ್ಯೋಗ

ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಪ್ರಧಾನಿ ಮೋದಿ ನಿರ್ದೇಶನ
Last Updated 14 ಜೂನ್ 2022, 20:30 IST
ಅಕ್ಷರ ಗಾತ್ರ

ನವದೆಹಲಿ:ದೇಶದಲ್ಲಿ ಮುಂದಿನ ಒಂದೂವರೆ ವರ್ಷಗಳಲ್ಲಿ 10 ಲಕ್ಷ ಜನರಿಗೆ ತ್ವರಿತವಾಗಿ ಉದ್ಯೋಗ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಸೂಚಿಸಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಮಂಗಳವಾರ ತಿಳಿಸಿದೆ.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ ಕುರಿತು ಪರಿಶೀಲಿಸಿದ ಬಳಿಕ ಪ್ರಧಾನಿ ಮೋದಿ ಅವರು ಈ ಕುರಿತು ನಿರ್ದೇಶನ ನೀಡಿದ್ದಾರೆ ಎಂದು ಪಿಎಂಒ ಹೇಳಿದೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇದ್ದು, ದೇಶವನ್ನು ನಿರುದ್ಯೋಗ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ ಎಂದು ವಿರೋಧ ಪಕ್ಷಗಳು ಪದೇ ಪದೇ ಟೀಕೆ ಮಾಡುತ್ತಿರುವ ಸಂದರ್ಭದಲ್ಲಿ ಸರ್ಕಾರದ ಈ ನಿರ್ಧಾರ ಬಂದಿದೆ.

ಮುಂದಿನ 18 ತಿಂಗಳಲ್ಲಿ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಸರ್ಕಾರದ ನಿರ್ಧಾರದ ಹಿಂದೆ 2024ರ ಲೋಕಸಭಾ ಚುನಾವಣೆಯ ಗುರಿ ಇದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ನಿರುದ್ಯೋಗ ಕುರಿತ ವಿರೋಧ ಪಕ್ಷಗಳ ಟೀಕೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶವನ್ನುಆಡಳಿತಾರೂಢ ಬಿಜೆಪಿ ಹೊಂದಿದೆ ಎನ್ನಲಾಗುತ್ತಿದೆ.ಮುಂದಿನ ಸಾರ್ವತ್ರಿಕ ಚುನಾವಣೆಯು (ಲೋಕಸಭೆ) 2024ರ ಏಪ್ರಿಲ್‌–ಮೇ ತಿಂಗಳಲ್ಲಿ (18 ತಿಂಗಳ ಅಂತ್ಯದೊಳಗೆ) ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ದೇಶದಲ್ಲಿ ಕೇಂದ್ರ ಸರ್ಕಾರದ ನಾಗರಿಕ ಹುದ್ದೆಗಳ ಒಟ್ಟಾರೆ ಮಂಜೂರಾದ ಹುದ್ದೆಗಳ ಸಂಖ್ಯೆ 40.78 ಲಕ್ಷ ಇದ್ದು,2020ರ ಮಾರ್ಚ್‌ 1ರ ವೇಳೆಗೆ 31.19 ಲಕ್ಷ ಹುದ್ದೆಗಳು ಭರ್ತಿಯಾಗಿವೆ. ಸುಮಾರು ಶೇ 21.75ರಷ್ಟು ಹುದ್ದೆಗಳು ಖಾಲಿ ಇವೆ ಎಂದು ವೇತನ ಮತ್ತು ಭತ್ಯೆಗಳ ಇಲಾಖೆಯ ಇತ್ತೀಚಿನ ವಾರ್ಷಿಕ ವರದಿ ತಿಳಿಸಿದೆ.

ಒಟ್ಟು ಮಾನವ ಶಕ್ತಿಯ ಪೈಕಿ ಶೇ 92ರಷ್ಟು ರೈಲ್ವೆ, ರಕ್ಷಣಾ, ಗೃಹ ವ್ಯವಹಾರಗಳು, ಅಂಚೆ ಮತ್ತು ಕಂದಾಯ (ಐದು) ಇಲಾಖೆ ವ್ಯಾಪ್ತಿಯಲ್ಲಿವೆ. ಕೇಂದ್ರಾಡಳಿ ಪ್ರದೇಶಗಳನ್ನು ಹೊರತುಪಡಿಸಿದಂತೆ ಇರುವ ಒಟ್ಟು 31.33 ಲಕ್ಷ ಉದ್ಯೋಗಿಗಳ ಪೈಕಿ ರೈಲ್ವೆ (ಶೇ 40.55), ಗೃಹ ವ್ಯವಹಾರ (ಶೇ 30.5), ರಕ್ಷಣಾ (ಶೇ 12.31), ಅಂಚೆ (ಶೇ 12.31), ಕಂದಾಯ (ಶೇ 3.26) ಹಾಗೂ ಇತರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಶೇ 7.72 ರಷ್ಟು ಹುದ್ದೆಗಳು ಭರ್ತಿಯಾಗಿವೆ.

ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಮತ್ತು ಭತ್ಯೆಗಳಿಗಾಗಿ 2018–19ರಲ್ಲಿ ₹ 2,08,960 ಕೋಟಿ ಹಾಗೂ 2019–20ರಲ್ಲಿ ₹ 2,25,744 ಕೋಟಿ ವ್ಯಯಿಸಲಾಗಿದೆ.ವರದಿಯ ಪ್ರಕಾರ ಕೇಂದ್ರ ಪೊಲೀಸ್‌ ಪಡೆಗಳಲ್ಲಿ ಒಟ್ಟು 10.16 ಲಕ್ಷ ಮಂಜೂರಾದ ಹುದ್ದೆಗಳಿದ್ದು, 2020ರ ಮಾರ್ಚ್‌ 1ರ ವೇಳೆಗೆ 9.05 ಲಕ್ಷ ಹುದ್ದೆಗಳು ಭರ್ತಿಯಾಗಿವೆ.

ಯುವ ಜನರಲ್ಲಿ ಆತ್ಮವಿಶ್ವಾಸ:‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವ ಜನರ ಸಬಲೀಕರಣಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ಕಲ್ಪಿಸುವ ಅವರ ನಿರ್ಧಾರವು ಯುವ ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ’ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

‘ಜನಕೇಂದ್ರಿತ ನಿರ್ಧಾರ’:ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ಈ ಮಹತ್ವದ ಜನಕೇಂದ್ರಿತ ನಿರ್ಧಾರವು ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವುದರ ಜತೆಗೆ ಯುವಜನರಲ್ಲಿ ಹೊಸ ಆಶಾವಾದವನ್ನು ಮೂಡಿಸಿದೆ ಎಂದು ಸಿಬ್ಬಂದಿ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

ಪ್ರಾಮಾಣಿಕ ಪ್ರಯತ್ನಕ್ಕೆ ವರುಣ್‌ ಗಾಂಧಿ ಆಗ್ರಹ

ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಒಂದು ಕೋಟಿಗೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಥಪೂರ್ಣ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಮಂಗಳವಾರ ಆಗ್ರಹಿಸಿದ್ದಾರೆ.ಎರಡು ಕೋಟಿ ಜನರಿಗೆ ಉದ್ಯೋಗ ನೀಡುವ ಭರವಸೆಯನ್ನು ಈಡೇರಿಸಲು ಹೆಚ್ಚಿನ ವೇಗದಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.

ನಿರುದ್ಯೋಗದ ಸಮಸ್ಯೆ ಕುರಿತು ಆಗಾಗ್ಗೆ ಪ್ರಸ್ತಾಪಿಸುವ ಮೂಲಕ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿರುವ ವರುಣ್‌ ಗಾಂಧಿ ಅವರು, ‘ನಿರುದ್ಯೋಗಿ ಯುವಕರ ನೋವು ಮತ್ತು ವೇದನೆಗಳನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಪ್ರಧಾನಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ’ ಟ್ವೀಟ್‌ ಮಾಡಿದ್ದಾರೆ.

ಇದು ‘ಮಹಾ ಸುಳ್ಳಿನ’ ಸರ್ಕಾರ: ರಾಹುಲ್‌

ನವದೆಹಲಿ): ದೇಶದ 10 ಲಕ್ಷ ಜನರಿಗೆ ಒಂದೂವರೆ ವರ್ಷಗಳಲ್ಲಿ ಉದ್ಯೋಗ ಒದಗಿಸುವುದಾಗಿ ಕೇಂದ್ರ ಸರ್ಕಾರ ಮಾಡಿರುವ ಘೋಷಣೆ ಕುರಿತು ಮಂಗಳವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ‘ಇದು ಬರೀ ಸುಳ್ಳಲ್ಲ, ಮಹಾ ಸುಳ್ಳಿನ ಸರ್ಕಾರ’ ಎಂದು ದೂರಿದ್ದಾರೆ.

‘ಎಂಟು ವರ್ಷಗಳ ಹಿಂದೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿ ಯುವ ಸಮುದಾಯವನ್ನು ವಂಚಿಸಿದ್ದೀರಿ. ಈಗ ಇದೇ ಸರದಿಯ ಮುಂದುವರಿದ ಭಾಗವಾಗಿ 10 ಲಕ್ಷ ಸರ್ಕಾರಿ ಉದ್ಯೋಗಗಳ ಭರವಸೆ ನೀಡಿದ್ದೀರಿ’ ಎಂದು ರಾಹುಲ್‌ ಟ್ವೀಟ್ ಮಾಡಿದ್ದಾರೆ.

‘ಪ್ರಧಾನಿಯವರು ಉದ್ಯೋಗ ಸೃಷ್ಟಿಸುವುದರಲ್ಲಿ ಪರಿಣತರಲ್ಲ, ಆದರೆ ಉದ್ಯೋಗಗಳ ಮೇಲಿನ ‘ಸುದ್ದಿ’ ಸೃಷ್ಟಿಸುವುದರಲ್ಲಿ ನಿಪುಣರು’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT