ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಭದ್ರತೆ ವಿಷಯದಲ್ಲಿ ರಾಜಿಮಾಡಿಕೊಂಡಿದ್ದ ಕಾಂಗ್ರೆಸ್: ನರೇಂದ್ರ ಮೋದಿ

ವಿಶ್ವದ ಅತಿ ಉದ್ದನೆಯ ಸುರಂಗ ‘ಅಟಲ್‌ ಟನಲ್‌‘ ಉದ್ಘಾಟನೆ
Last Updated 3 ಅಕ್ಟೋಬರ್ 2020, 9:23 IST
ಅಕ್ಷರ ಗಾತ್ರ

ರೋಹ್ಟಾಂಗ್‌ (ಹಿಮಾಚಲ ಪ್ರದೇಶ): ‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ದೇಶದ ಭದ್ರತೆ ವಿಷಯದಲ್ಲಿ ರಾಜಿಮಾಡಿಕೊಂಡು, ದೇಶದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಲಾಯಿತು‘ ಎಂದು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ, ‘ನಮ್ಮ ಸರ್ಕಾರಕ್ಕೆ ದೇಶ ರಕ್ಷಣೆಗಿಂತ ಮುಖ್ಯವಾದದು ಬೇರೆ ಯಾವುದೂ ಇಲ್ಲ‘ ಎಂದು ಪ್ರತಿಪಾದಿಸಿದರು.

ವರ್ಷದ ಎಲ್ಲ ಹವಾಮಾನದಲ್ಲೂ ಸಂಚರಿಸಬಹುದಾದ ದೇಶದ ಅತಿ ದೊಡ್ಡ ಸುರಂಗ ಮಾರ್ಗ ‘ಅಟಲ್‌ ಸುರಂಗ‘ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು,2004 ರಿಂದ 2014 ಅವಧಿಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು.

‘ವಾಜಪೇಯಿ ಆಡಳಿತದ ನಂತರ ದೇಶದಲ್ಲಿಆಳ್ವಿಕೆ ನಡೆಸಿದ ಸರ್ಕಾರ, ಅಟಲ್‌ ಸುರಂಗ ಯೋಜನೆ, ಲಡಾಕ್‌ನಲ್ಲಿ ಏರ್‌ಸ್ಟ್ರಿಪ್‌ ನಿರ್ಮಣ, ತೇಜಸ್‌ ಯುದ್ಧ ವಿಮಾನ ಉತ್ಪಾದನೆಯಂತಹ ಕೆಲ ಪ್ರಮುಖ ಯೋಜನೆಗಳನ್ನು ಮರೆತೇಬಿಟ್ಟಿತ್ತು. ಇನ್ನೂ ಕೆಲವು ಯೋಜನೆಗಳ ಕಾಮಗಾರಿ ವಿಳಂಬವಾಗುತ್ತಿದ್ದವು. ಹೀಗೆ ಮಾಡಲು ಯಾರಾದರೂ ಒತ್ತಡ ಹೇರುತ್ತಿದ್ದರೇ ?‘ ಎಂದು ಕಾಂಗ್ರೆಸ್ ಹೆಸರು ಉಲ್ಲೇಖಿಸದೇ, ಆ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

‘ನಮ್ಮ ಸರ್ಕಾರ ತನ್ನೆಲ್ಲ ಶಕ್ತಿಯನ್ನು ಧಾರೆ ಎರೆದು ಗಡಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ‘ ಎಂದು ಹೇಳಿದ ಮೋದಿಯವರು, ‘ಹಿಂದೆ ಯಾವ ಸರ್ಕಾರವೂ ಮಾಡದಷ್ಟು ರಸ್ತೆಗಳು, ಸೇತುವೆಗಳು ಅಥವಾ ಸುರಂಗಗಳನ್ನು ನಮ್ಮ ಸರ್ಕಾರ ನಿರ್ಮಾಣ ಮಾಡಿದೆ‘ ಎಂದು ಪ್ರತಿಪಾದಿಸಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಗಡಿ ಅಭಿವೃದ್ಧಿ ಯೋಜನೆಗಳು, ಯೋಜನೆಯ ಹಂತ ದಾಟಿ ಅನುಷ್ಠಾನಕ್ಕೆ ಬರಲೇ ಇಲ್ಲ. ಅವೆಲ್ಲಾ ಅಲ್ಲೇ ಸ್ಥಗಿತಗೊಂಡಿದ್ದವು ಎಂದು ಮೋದಿ ಟೀಕಿಸಿದರು.

2002ರಲ್ಲಿ ಅಟಲ್‌ ಬಿಹಾರಿ ವಾಜಪೇಯಿಯವರು ಅಟಲ್‌ ಟನಲ್‌ಗೆ ಶಿಲಾನ್ಯಾಸ ಮಾಡಿದ್ದರು. ನಂತರ ಬಂದ ಸರ್ಕಾರ ಈ ಯೋಜನೆಯನ್ನು ಮರೆತುಬಿಟ್ಟಿತ್ತು. 2013–14ರವರೆಗೆ ಈ ಸುರಂಗ ಮಾರ್ಗದ ಕಾಮಗಾರಿ 1300 ಮೀಟರ್‌ನಷ್ಟು ಪೂರ್ಣಗೊಂಡಿತ್ತು. ಇದೇ ವೇಗದಲ್ಲಿ ಕಾಮಗಾರಿ ಸಾಗಿದರೆ, ಈ ಸುರಂಗ ಮಾರ್ಗ 2040ಕ್ಕೆ ಪೂರ್ಣಗೊಳ್ಳುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು. ಆದರೆ,2014ರಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಸುರಂಗ ಕಾಮಗಾರಿಗೆ ವೇಗ ನೀಡಲಾಯಿತು.ವರ್ಷಕ್ಕೆ 300 ಮೀಟರ್ ಉದ್ದ‌ ನಿರ್ಮಾಣವಾಗುತ್ತಿದ್ದ ಸುರಂಗ ಮಾರ್ಗವನ್ನು 1400 ಮೀಟರ್‌ಗೆ ಹೆಚ್ಚಿಸಿದೆವು. 26 ವರ್ಷಗಳಲ್ಲಿ ಆಗಬೇಕಾಗಿದ್ದ ಕಾಮಗಾರಿಯನ್ನು ಕೇವಲ ಆರು ವರ್ಷಗಳಲ್ಲಿ ಪೂರ್ಣಗೊಳಿಸಿದ್ದೇವೆ. ಅಟಲ್‌ ಸುರಂಗ ಮಾರ್ಗದಂತೆಯೇ ಹಲವು ಯೋಜನೆಗಳನ್ನೂ ನಮ್ಮ ಸರ್ಕಾರ ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತಿದೆ‘ ಎಂದು ಹೇಳಿದರು.

‘ಹಿಂದಿನ ಸರ್ಕಾರಕ್ಕೆ ಯಾವುದೇ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ. ಸರಿಯಾದ ಕಾರ್ಯತಂತ್ರ ರೂಪಿಸದೇ ಬಹಳಷ್ಟು ಯೋಜನೆಗಳನ್ನು ನಿರ್ಲಕ್ಷ್ಯಿಸಲಾಯಿತು. ಅಂಥ ಹಲವು ಯೋಜನೆಗಳನ್ನು ನಾನು ತೋರಿಸಬಲ್ಲೆ‘ ಎಂದು ಹೇಳುವ ಮೂಲಕ ಹಿಂದಿನ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಾರ್ಡರ್ ರೋಡ್ಸ್‌ ಆರ್ಗನೈಸೇಷನ್ ಸಂಸ್ಥೆ ನಿರ್ಮಾಣ ಮಾಡಿರುವ 9.2 ಕಿ.ಮೀ ಉದ್ದದ ಅಟಲ್ ಸುರಂಗ ಮಾರ್ಗ, ಮನಾಲಿ ಮತ್ತು ಲೆಹ್‌ ನಡುವೆ 46 ಕಿ.ಮೀ ದೂರವನ್ನು ಕಡಿತಗೊಳಿಸುತ್ತಿದೆ. ಅಷ್ಟೇ ಅಲ್ಲ, ಈ ಊರುಗಳ ನಡುವಿನ ಪ್ರಯಾಣದ ಅವಧಿಯನ್ನು ನಾಲ್ಕರಿಂದ ಐದು ಗಂಟೆ ಕಡಿಮೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT