ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನೌಷಧ ಕೇಂದ್ರಗಳಿಂದ ಬಡ, ಮಧ್ಯಮ ವರ್ಗದ ಜನರಿಗೆ ₹13,000 ಕೋಟಿ ಉಳಿತಾಯ: ಮೋದಿ

Last Updated 7 ಮಾರ್ಚ್ 2022, 11:38 IST
ಅಕ್ಷರ ಗಾತ್ರ

ನವದೆಹಲಿ: ‘ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧ ಪೂರೈಸುವ ಜನೌಷಧ ಕೇಂದ್ರಗಳ ಲಾಭ ಬಡವರು, ಮಧ್ಯಮ ವರ್ಗದ ಜನರಿಗೆ ಆಗಿದೆ. ಈ ವರ್ಗದ ಕುಟುಂಬಗಳಿಗೆ ₹13,000 ಕೋಟಿ ಉಳಿತಾಯವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಜನೌಷಧ ದಿವಸ್’ ನಿಮಿತ್ತ ಸೋಮವಾರ ಅವರು ಜನೌಷಧ ಯೋಜನೆಯ ಫಲಾನುಭವಿಗಳ ಜೊತೆಗೆ ಸಂವಾದ ನಡೆಸಿ, ಯೋಜನೆಯ ಅನುಕೂಲಗಳ ಕುರಿತಂತೆ ಪ್ರತಿಕ್ರಿಯೆಯನ್ನು ಪಡೆದುಕೊಂಡರು.

‘ಔಷಧಗಳ ದುಬಾರಿ ಬೆಲೆ ಕುರಿತು ಜನರಿಗಿದ್ದ ಆತಂಕವನ್ನು ಈ ಜನೌಷಧ ಕೇಂದ್ರಗಳು ನಿವಾರಿಸಿವೆ. ದೇಶದಾದ್ಯಂತ ಸುಮಾರು 8,500 ಜನೌಷಧ ಮಳಿಗೆಗಳಿವೆ. ಇವು, ಸರ್ಕಾರಿ ಮಳಿಗೆಗಳಷ್ಟೇ ಅಲ್ಲ, ಸಾಮಾನ್ಯ ಜನರಿಗೆ ಪರಿಹಾರದ ಕೇಂದ್ರಗಳೂ ಆಗಿವೆ’ ಎಂದು ಹೇಳಿದರು.

ಕ್ಯಾನ್ಸರ್‌, ಕ್ಷಯ, ಸಕ್ಕರೆಕಾಯಿಲೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಚಿಕಿತ್ಸೆಗೆ ಬಳಸುವ ಸುಮಾರು 800 ಔಷಧಗಳ ದರವನ್ನುತಮ್ಮ ನೇತೃತ್ವದ ಸರ್ಕಾರವು ನಿಯಂತ್ರಿಸಿದೆ. ಅಲ್ಲದೆ, ಮಂಡಿ ಕಸಿಗೆ ಬಳಸುವ ಸ್ಟಂಟ್‌ಗಳ ವೆಚ್ಚವನ್ನು ಕುಗ್ಗಿಸಿದೆ ಎಂದು ತಿಳಿಸಿದರು.

ಗುಣಮಟ್ಟದ ಔಷಧಗಳನ್ನು ಕೈಗೆಟುಕುವ ದರದಲ್ಲಿ ಜನರಿಗೆ ಒದಗಿಸಲು ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನೆ (ಪಿಎಂಬಿಜೆಪಿ) ಅನ್ನು ಔಷಧ ಸಚಿವಾಲಯವು ಆರಂಭಿಸಿದೆ. ಬ್ರಾಂಡೆಡ್ ಔಷಧಗಳಿಗೆ ಸಮಾನವಾಗಿ ಗುಣಮಟ್ಟದ ಜೆನೆರಿಕ್‌ ಔಷಧಗಳನ್ನು ಅಗ್ಗದ ದರದಲ್ಲಿ ಒದಗಿಸಲು ದೇಶದಾದ್ಯಂತ ಸುಮಾರು 8,600 ಪಿಎಂಬಿಜೆಪಿ ಮಳಿಗೆಗಳನ್ನು ತೆರೆಯಲಾಗಿದೆ.

ಜೆನೆರಿಕ್‌ ಔಷಧಗಳ ಅನುಕೂಲ ಕುರಿತು ಜಾಗೃತಿ ಮೂಡಿಸಲು ದೇಶದಾದ್ಯಂತ ಮಾ.7ರವರೆಗೆ ಜನೌಷಧ ಸಪ್ತಾಹ ನಡೆದಿದ್ದು, ಈ ಅವಧಿಯಲ್ಲಿ ಜನೌಷಧಿ ಸಂಕಲ್ಪ ಯಾತ್ರೆ, ಬನ್ನಿ, ಜನೌಷಧ ಸ್ನೇಹಿತರಾಗೋಣ, ಜನೌಷಧಿ ಜನ ಆರೋಗ್ಯ ಮೇಳ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT