ಶನಿವಾರ, ಸೆಪ್ಟೆಂಬರ್ 19, 2020
23 °C

ಲಕ್ಷ ಕೋಟಿ ಕೃಷಿ ನಿಧಿಗೆ ಪ್ರಧಾನಿ ಮೋದಿ ಚಾಲನೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಒಂದು ಲಕ್ಷ ಕೋಟಿ ರೂಪಾಯಿಯ ಕೃಷಿ ಮೂಲಸೌಕರ್ಯ ನಿಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು. ಕೃಷಿ ಉತ್ಪನ್ನಗಳ ಶೇಖರಣೆ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಹೆಚ್ಚಿಸುವ ಉದ್ದೇಶದೊಂದಿಗೆ 2,280 ರೈತ ಸಂಘಗಳಿಗೆ ₹1,000 ಕೋಟಿ ವಿತರಿಸಲಾಯಿತು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳ ಹಲವು ರೈತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಯೋಜನೆಯ ಆರಂಭಿಕ ಫಲಾನುಭವಿಗಳಾದ ಕರ್ನಾಟಕ, ಮಧ್ಯಪ್ರದೇಶ, ಗುಜರಾತ್‌ನ ಕೃಷಿ ಸೌಹಾರ್ದ ಸಂಘಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.

ಯೋಜನೆಯಿಂದ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ಪಡೆಯಲು ಸಾಧ್ಯವಾಗುತ್ತದೆ. ಹೆಚ್ಚಿನ ಬೆಲೆಗೆ ಉತ್ಪನ್ನ ಮಾರಾಟ ಮಾಡಲು, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಸಾಧ್ಯವಾಗುತ್ತದೆ ಎಂದು ಪ್ರಧಾನಿ ಹೇಳಿದರು.

ಕೊಯಿಲು ನಂತರದ ಉತ್ಪನ್ನಗಳ ಸಂಗ್ರಹ, ಶೀಥಲೀಕರಣ ಮತ್ತು ಸಂಸ್ಕರಣೆಯಲ್ಲಿ ಹೂಡಿಕೆ ಮಾಡಲು ಭಾರತಕ್ಕೆ ದೊಡ್ಡ ಅವಕಾಶವಿದೆ ಎಂದು ಪುನರುಚ್ಚರಿಸಿದರು.

ಕೃಷಿ ಮೂಲಸೌಕರ್ಯ ನಿಧಿಯು ಮಧ್ಯಮ-ದೀರ್ಘಾವಧಿಯ ಸಾಲ ಹಣಕಾಸು ಸೌಲಭ್ಯವಾಗಿದ್ದು, ಕೃಷಿ ಉತ್ಪಾದನೆ ನಂತರದ ನಿರ್ವಹಣೆಗೆ ಸಂಬಂಧಿಸಿದೆ. ಯೋಜನೆಯ ಅವಧಿ 2020ರಿಂದ 2029ರವರೆಗೆ ಇರಲಿದೆ. ಈ ಅವಧಿಯಲ್ಲಿ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳ ಮೂಲಕ ವಾರ್ಷಿಕ ಶೇ 3ರಷ್ಟು ಬಡ್ಡಿ ಸಹಾಯಧನದೊಂದಿಗೆ ₹1 ಲಕ್ಷ ಕೋಟಿ ಸಾಲ ನೀಡಲಾಗುತ್ತದೆ. ₹2 ಕೋಟಿವರೆಗೆ ಸಾಲ ಖಾತರಿ ಸೌಲಭ್ಯ ನೀಡಲಾಗುತ್ತದೆ.

₹17,000 ಕೋಟಿ ಬಿಡುಗಡೆ: ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ದೇಶದ8.5 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ₹17,000 ಕೋಟಿ ಬಿಡುಗಡೆ ಮಾಡಲಾಯಿತು. ಮಧ್ಯವರ್ತಿಗಳ ಹಾವಳಿ ಇಲ್ಲದೆ, ಯೋಜನೆಯು ತನ್ನ ಉದ್ದೇಶವನ್ನು ಯಶಸ್ವಿಯಾಗಿ ಸಾಧಿಸಿದೆ ಎಂದು ಮೋದಿ ಹೇಳಿದರು.

ಮೂರು ಹಂತಗಳಲ್ಲಿ ₹6,000 ವನ್ನು ರೈತರ ಖಾತೆಗಳಿಗೆ ಜಮಾ ಮಾಡುವ ಈ ಯೋಜನೆಯನ್ನು 2018ರ ಡಿಸೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಮೋದಿ ಅವರು ಯೋಜನೆಯ 6ನೇ ಕಂತನ್ನು ಭಾನುವಾರ ಬಿಡುಗಡೆ ಮಾಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು