ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಣಸಿ ಕಾಶಿ ವಿಶ್ವನಾಥ ಕಾರಿಡಾರ್; ಪ್ರಧಾನಿ ಮೋದಿಯಿಂದ ಇಂದು ಉದ್ಘಾಟನೆ

Last Updated 13 ಡಿಸೆಂಬರ್ 2021, 3:51 IST
ಅಕ್ಷರ ಗಾತ್ರ

ವಾರಾಣಸಿ: ವಾರಾಣಸಿಯ ಕೇಂದ್ರ ಭಾಗದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ಕಾಶಿ ವಿಶ್ವನಾಥ ಕಾರಿಡಾರ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವರು. ಈ ಯೋಜನೆಯಿಂದಾಗಿ ಪಾರಂಪರಿಕ ನಗರದಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ ಎಂದು ಆಶಿಸಲಾಗಿದೆ.

ಐತಿಹಾಸಿಕ ಕಾಶಿ ವಿಶ್ವನಾಥ ದೇಗುಲ ಮತ್ತು ಪ್ರಮುಖ ದಶಾಶ್ವಮೇದ ಘಾಟ್‌ ಬಳಿ ನಿರ್ಮಿಸಿರುವ ಈ ಅತ್ಯಾಧುನಿಕ ಸೌಲಭ್ಯವು, ಉತ್ತರಪ್ರದೇಶವು ವಿಧಾನಸಭೆ ಚುನಾವಣೆಗೆ ಹತ್ತಿರವಾಗುತ್ತಿರುವಂತೆಯೇ ಉದ್ಘಾಟನೆಗೆ ಸಜ್ಜಾಗಿದೆ.

ಕಾರಿಡಾರ್‌ನ ಮಹಾದ್ವಾರ ಮತ್ತು ಇತರೆ ಸಂಕೀರ್ಣಗಳಿಗೆ ಕಲ್ಲು ಮತ್ತು ಇತರೆ ಪರಿಕರಗಳನ್ನು ಬಳಸಿದ್ದು, ಸಾಂಪ್ರದಾಯಿಕ ಕರಕುಶಲಕಾರರ ಸೇವೆಯನ್ನು ಬಳಸಿ ನಿರ್ಮಾಣ ಮಾಡಲಾಗಿದೆ.

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸಂತರು, ಸ್ವಾಮೀಜಿಗಳು, ಸ್ಥಳೀಯ ವ್ಯಾಪಾರಿಗಳಲ್ಲಿ ಸಂಭ್ರಮ ಮನೆಮಾಡಿದೆ.

ಈ ದೇಗುಲ 1780ರಲ್ಲಿ ಮಹಾರಾಣಿ ಅಹಿಲ್ಯಾಬಾಯಿ ಹೋಳ್ಕರ್ ಅವಧಿಯಲ್ಲಿ ಪುನರ್‌ನಿರ್ಮಾಣಗೊಂಡಿತ್ತು. ಬಳಿಕ 19ನೇ ಶತಮಾನದಲ್ಲಿ ಮಹಾರಾಜ ರಣಜಿತ್‌ ಸಿಂಗ್ ‘ಚಿನ್ನದ ಕಳಶ‘ ಅಳವಡಿಸಿದ್ದರು. ಕಾಶಿ ವಿಶ್ವನಾಥ ದೇಗುಲ ಟ್ರಸ್ಟ್‌ನ ವೆಬ್‌ಸೈಟ್‌ನ ಪ್ರಕಾರ, ಈ ಧಾರ್ಮಿಕ ತಾಣವನ್ನು ‘ಚಿನ್ನದ ದೇವಸ್ಥಾನ’ ಎಂದೂ ಗುರುತಿಸಲಾಗುತ್ತದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

‘ಕಾಶಿ ವಿಶ್ವನಾಥ ಕಾರಿಡಾರ್‌’ ಉದ್ಘಾಟನೆಯೊಂದಿಗೆ ಒಂದು ತಿಂಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನೆ ಸಮಾರಂಭದಲ್ಲಿ ಬಿಜೆಪಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಭಾಗವಹಿಸುವರು. ದೇಶದ ವಿವಿಧೆಡೆ 51 ಸಾವಿರ ಕಡೆ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

₹ 339 ಕೋಟಿ ವೆಚ್ಚ: ಪ್ರಧಾನಮಂತ್ರಿಗಳ ಕಚೇರಿಯು ಈ ಕುರಿತು ಹೇಳಿಕೆ ನೀಡಿದ್ದು, ‘ಕಾಶಿ ವಿಶ್ವನಾಥ ಕಾರಿಡಾರ್‌ ಯೋಜನೆಯ ಮೊದಲ ಹಂತದ ಯೋಜನೆಯ ವೆಚ್ಚ ಸುಮಾರು ₹ 339 ಕೋಟಿ. ಯೋಜನೆಯ ಉದ್ಘಾಟನೆಗೆ ಪ್ರಧಾನಿ ಮೋದಿ ಅವರು ಮಧ್ಯಾಹ್ನ 1 ಗಂಟೆಗೆ ದೇಗುಲಕ್ಕೆ ಭೇಟಿ ನೀಡುವರು’ ಎಂದು ತಿಳಿಸಿದೆ.

ದೇಗುಲ ಚೌಕ ನಿರ್ಮಾಣ, ಸಿಟಿ ಗ್ಯಾಲರಿ, ಸಂಗ್ರಹಾಲಯ, ಬಹೂಪಯೋಗಿ ಸಭಾಂಗಣ, ಭಕ್ತರ ತಂಗುದಾಣ, ಸಂತರು, ಸನ್ಯಾಸಿಗಳ ಸೇವಾದರ, ಧಾರ್ಮಿಕ ಪುಸ್ತಕಕೇಂದ್ರ ನಿರ್ಮಾಣ ಕಾರಿಡಾರ್ ಅಭಿವೃದ್ಧಿಯಲ್ಲಿ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT