ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾಕಾಲ ಲೋಕ’ ಲೋಕಾರ್ಪಣೆ: ಮೊದಲ ಹಂತ ಉದ್ಘಾಟಿಸಿದ ಪ್ರಧಾನಿ ಮೋದಿ

ಮಹಾಕಾಲೇಶ್ವರ ಕಾರಿಡಾರ್‌
Last Updated 12 ಅಕ್ಟೋಬರ್ 2022, 4:39 IST
ಅಕ್ಷರ ಗಾತ್ರ

ಉಜ್ಜೈನ್‌: ಮಹಾಕಾಲ ಲೋಕ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಘಾಟಿಸಿದ್ದಾರೆ. ಅದಕ್ಕೂ ಮುಂಚೆ ಮೋದಿ ಅವರು ಮಹಾಕಾಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. 12 ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ‍ಪರಿಗಣಿತವಾಗಿರುವ ಮಹಾಕಾಲೇಶ್ವರ ದೇವಾಲಯದ ಗರ್ಭಗುಡಿಗೆ ಮೋದಿ ಅವರು ಸಂಜೆ 6 ಗಂಟೆಗೆ ಪ್ರವೇಶಿಸಿದರು.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮೋದಿ ಅವರ ಜತೆಗೆ ಗರ್ಭಗುಡಿಯ ತನಕ ಸಾಗಿದರು. ಗರ್ಭಗುಡಿಯೊಳಗೆ ಮೋದಿ ಅವರೊಬ್ಬರೇ ಹೋದರು. ಮೋದಿ ಅವರು ವಿಧಿವತ್ತಾಗಿ ಪೂಜೆ ನಡೆಸಿದರು. ಮುಖ್ಯ ಅರ್ಚಕ ಘನಶ್ಯಾಮ ಪೂಜಾರಿ ಅವರು ಸುಮಾರು 20 ನಿಮಿಷ ಮಂತ್ರಗಳನ್ನು ಪಠಿಸಿದರು.

ವಿಧಿ ವಿಧಾನಗಳ ಬಳಿಕ ಮೋದಿ ಅವರು ಕೈಯಲ್ಲಿ ಬಿಲ್ವಪತ್ರೆ ಹಿಡಿದು ಸುಮಾರು ಹತ್ತು ನಿಮಿಷ ಧ್ಯಾನಸ್ಥರಾಗಿದ್ದರು. ಬಳಿಕ ಶಿವನ ವಾಹನ ನಂದಿಯ ಪ್ರತಿಮೆಯ ಸಮೀಪ ಐದು ನಿಮಿಷ ಕುಳಿತು ಪ್ರಾರ್ಥಿಸಿದರು. ನಂತರ, ವಿಶೇಷ ಪೆಟ್ಟಿಗೆಯಲ್ಲಿ ದೇಣಿಗೆ ನೀಡಿದರು.

ಮೋದಿ ಅವರು ಚೌಹಾಣ್‌ ಮತ್ತು ರಾಜ್ಯದ ರಾಜ್ಯಪಾಲ ಮಂಗುಭಾಯಿ ಪಟೇಲ್‌ ಅವರ ಜತೆಗೆ ದೇಗುಲದ ಆವರಣದಲ್ಲಿ ಒಂದು ಪ್ರದಕ್ಷಿಣೆ ಹಾಕಿದರು.

ಮಹಾಕಾಲೇಶ್ವರ ದೇಗುಲ ಕಾರಿಡಾರ್‌ ಅಭಿವೃದ್ಧಿಯು ₹866 ಕೋಟಿ ವೆಚ್ಚದ ಯೋಜನೆ. ಅದರ ಮೊದಲ ಹಂತ ‘ಮಹಾಕಾಲ ಲೋಕ’ವನ್ನು ₹316 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.

ಮಹಾಕಾಲ ಲೋಕ ಕಾರಿಡಾರ್‌ 900 ಮೀಟರ್‌ಗೂ ಅಧಿಕ ಉದ್ದವಿದೆ. ಇದು ಹಳೆಯ ರುದ್ರಸಾಗರ ಸರೋವರದ ಸುತ್ತ ಇದೆ.
ಇದು ದೇಶದಲ್ಲಿಯೇ ಈ ರೀತಿಯ ಅತ್ಯಂತ ದೊಡ್ಡ ಕಾರಿಡಾರ್‌ ಎನ್ನಲಾಗಿದೆ. ಯೋಜನೆಯ ಭಾಗವಾಗಿ ರುದ್ರಸಾಗರ ಸರೋವರವನ್ನೂ ಅಭಿವೃದ್ಧಿಪಡಿಸಲಾಗಿದೆ. ಎರಡು ಭವ್ಯ ದ್ವಾರಗಳನ್ನು– ನಂದಿ ದ್ವಾರ ಮತ್ತು ಪಿನಾಕಿ ದ್ವಾರ– ನಿರ್ಮಿಸಲಾಗಿದೆ. ಇವು ಕಾರಿಡಾರ್‌ನ ಆರಂಭದಲ್ಲಿ ಇವೆ.

108 ಆಲಂಕಾರಿಕ ಸ್ತಂಭಗಳು, ಕಾರಂಜಿಗಳು, ಶಿವ ಪುರಾಣದಕತೆ ಹೇಳುವ 50ಕ್ಕೂ ಹೆಚ್ಚು ಭಿತ್ತಿಚಿತ್ರಗಳು ಮಹಾಕಾಲ ಲೋಕದ ಭಾಗಗಳಾಗಿವೆ.

ಪಂಚತಾರಾ ಧರ್ಮಶಾಲೆ
ಪಂಚತಾರಾ ಹೋಟೆಲ್‌ ಸೌಲಭ್ಯ ಇರುವ 40 ಕೊಠಡಿಗಳ ಧರ್ಮಶಾಲೆಯನ್ನು ಎರಡನೇ ಹಂತದಲ್ಲಿ ನಿರ್ಮಿಸಲಾಗುತ್ತಿದೆ. ಮಹಾಕಾಲೇಶ್ವರ ದೇವಾಲಯದ ಸಮೀಪದಲ್ಲಿಯೇ ಇರುವ ಪಾರಂಪರಿಕ ಕಟ್ಟಡದಲ್ಲಿ ಈ ಧರ್ಮಶಾಲೆ ಇರಲಿದೆ. ಈ ಕಟ್ಟಡದಿಂದ ದೇವಾಲಯವು ಸ್ಪಷ್ಟವಾಗಿ ಕಾಣಿಸುತ್ತದೆ. ಎರಡನೇ ಹಂತದ ಯೋಜನೆಯ ಕೆಲಸಗಳು ಈಗಾಗಲೇ ಆರಂಭವಾಗಿವೆ. 2023ರ ಜೂನ್‌ನಲ್ಲಿ ಎರಡನೇ ಹಂತ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ದೇವಾಲಯದ ಗೋಪುರವನ್ನು ಸ್ಪಷ್ಟವಾಗಿ ನೋಡುವುದಕ್ಕಾಗಿ ‘ಶಿಖರ ದರ್ಶನ’ ಎಂಬ ವೇದಿಕೆಯ ನಿರ್ಮಾಣವೂ ಆಗಲಿದೆ. ದೇವಾಲಯದ ಎದುರು ಭಾಗದಲ್ಲಿ ಐದೂವರೆ ಎಕರೆ ಖಾಲಿ ಸ್ಥಳವೂ ಇದೆ. ಇಲ್ಲಿ ಚಿಂತನವನ, ಅನುಭೂತಿ ವನ ಮತ್ತು ಧ್ಯಾನ ಕೇಂದ್ರವನ್ನು ನಿರ್ಮಿಸಲಾಗುವುದು ಎಂದು ಉಜ್ಜೈನ್‌ ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶೀಶ್‌ ಕುಮಾರ್ ಪಾಠಕ್‌ ತಿಳಿಸಿದ್ದಾರೆ.

ಕ್ಷಿಪ್ರ ನದಿಯ ದಂಡೆಯಲ್ಲಿರುವ ರಾಮ ಘಾಟ್‌ ಅನ್ನು ಎರಡನೇ ಹಂತದಲ್ಲಿ ಅಭಿವೃದ್ಧಿಪಡಿಸಲಾಗುವುದು. ಎರಡನೇ ಹಂತದ ಯೋಜನೆಯ ಒಟ್ಟು ವೆಚ್ಚ ₹450 ಕೋಟಿ ಎಂದು ಅಂದಾಜಿಸಲಾಗಿದೆ.

ಬಿಜೆಪಿ–ಕಾಂಗ್ರೆಸ್‌ ವಾಗ್ವಾದ
ಮಧ್ಯಪ‍್ರದೇಶದಲ್ಲಿ ಕಾಂಗ್ರೆಸ್‌ನ ಕಮಲನಾಥ್ ನೇತೃತ್ವದ ಸರ್ಕಾರ ಇದ್ದಾಗ ಮಹಾಕಾಲೇಶ್ವರ ಅಭಿವೃದ್ಧಿ ಯೋಜನೆ ಸಿದ್ಧಪಡಿಸಲಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ. ಆದರೆ, ಆಡಳಿತಾರೂಢ ಬಿಜೆಪಿ ಇದನ್ನು ಅಲ್ಲಗಳೆದಿದೆ.

2019ರ ಆಗಸ್ಟ್‌ನಲ್ಲಿ ಈ ಯೋಜನೆ ಸಿದ್ಧವಾಗಿತ್ತು. ಆಗ ಕಮಲನಾಥ ಮುಖ್ಯಮಂತ್ರಿ ಆಗಿದ್ದರು ಎಂದು ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷ ನಾಯಕ ಡಾ. ಗೋವಿಂದ ಸಿಂಗ್ ಹೇಳಿದ್ದಾರೆ.

ಯೋಜನೆಯ ಪ್ರಸ್ತಾವ 2017ರಲ್ಲಿ ಸಿದ್ಧವಾಗಿತ್ತು. ಮತ್ತೊಂದು ವರ್ಷದೊಳಗೆ ವಿವರವಾದ ಯೋಜನೆ ಸಿದ್ಧಪಡಿಸಲಾಗಿತ್ತು. 2018ರಲ್ಲಿ ಕಾಮಗಾರಿಗಳ ಟೆಂಡರ್ ಕರೆಯಲಾಗಿತ್ತು. ಈ ಎಲ್ಲ ಅವಧಿಯಲ್ಲಿಯೂ ಶಿವರಾಜ್ ಸಿಂಗ್ ಚೌಹಾಣ್ ಅವರೇ ಮುಖ್ಯಮಂತ್ರಿಯಾಗಿದ್ದರು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಇದ್ದ ಅವಧಿಯಲ್ಲಿ ಯೋಜನೆಯು ನನೆಗುದಿಗೆ ಬಿದ್ದಿತ್ತು. ಚೌಹಾಣ್ ಅವರು ಮುಖ್ಯಮಂತ್ರಿಯಾಗಿ 2020ರಲ್ಲಿ ಮರಳಿ ಅಧಿಕಾರಕ್ಕೆ ಬಂದ ಬಳಿಕವೇ ಯೋಜನೆ ಜೀವ ಪಡೆಯಿತು ಎಂದು ಮಿಶ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT