ಮಂಗಳವಾರ, ಜೂನ್ 22, 2021
24 °C

ಪ್ರಧಾನಿ ಮೋದಿ ಸಮೀಕ್ಷೆ ಗುಜರಾತಲ್ಲಿ ಮಾತ್ರ ಏಕೆ: ಎನ್‌ಸಿಪಿ, ಶಿವಸೇನಾ ಪ್ರಶ್ನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ತೌತೆ ಚಂಡಮಾರುತದಿಂದಾಗಿ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಹಾನಿ ಆಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯ ಗುಜರಾತ್‌ ಮತ್ತು ದಿಯು, ದಾಮನ್‌ನಲ್ಲಿ ಮಾತ್ರ ವೈಮಾನಿಕ ಸಮೀಕ್ಷೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. 

ಪ್ರಧಾನಿಯವರು ಗುಜರಾತ್‌ನಲ್ಲಿ ಮಾತ್ರ ವೈಮಾನಿಕ ಸಮೀಕ್ಷೆ ನಡೆಸಿರುವುದು ಮಹಾರಾಷ್ಟ್ರಕ್ಕೆ ಮಾಡಿದ ಅವಮಾನ ಅಲ್ಲವೇ ಎಂದು ಆಡಳಿತಾರೂಢ ಮಹಾ ವಿಕಾಸ್‌ ಅಘಾಡಿಯ ಭಾಗವಾಗಿರುವ ಎನ್‌ಸಿಪಿ ಪ್ರಶ್ನಿಸಿದೆ.

ಓದಿ: 

‘ಪ್ರಧಾನಿ ಮೋದಿ ಅವರು ತೌತೆ ಚಂಡಮಾರುತದಿಂದ ಬಾಧಿತವಾದ ದಮನ್‌, ದಿಯು ಮತ್ತು ಗುಜರಾತ್‌ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅದೇ ರೀತಿ ಬಾಧಿತವಾದ ಮಹಾರಾಷ್ಟ್ರದಲ್ಲಿ ವೈಮಾನಿಕ ಸಮೀಕ್ಷೆ ಏಕಿಲ್ಲ? ಇದು ಅತ್ಯಂತ ಸ್ಪಷ್ಟವಾಗಿ ತಾರತಮ್ಯ ಅಲ್ಲವೇ’ ಎಂದು ಎನ್‌ಸಿಪಿ ರಾಷ್ಟ್ರೀಯ ವಕ್ತಾರ ನವಾಬ್‌ ಮಲಿಕ್‌ ಟ್ವೀಟ್‌ ಮಾಡಿದ್ದಾರೆ. 

ಮಹಾರಾಷ್ಟ್ರ ಗುಜರಾತ್‌ನಂತೆ ಅಲ್ಲ. ಮಹಾರಾಷ್ಟ್ರದಲ್ಲಿ ಪ್ರಬಲ ಮುಖ್ಯಮಂತ್ರಿ ಇದ್ದಾರೆ. ಹಾಗಾಗಿಯೇ ಪ್ರಧಾನಿಯು ವೈಮಾನಿಕ ಸಮೀಕ್ಷೆಗೆ ಇಲ್ಲಿಗೆ ಬಂದಿಲ್ಲ ಎಂದು ಶಿವಸೇನಾದ ಸಂಸದ ಸಂಜಯ ರಾವುತ್‌ ಹೇಳಿದ್ದಾರೆ. 

ಗುಜರಾತ್‌ಗೆ ಮಾತ್ರ ಹೋಗಿದ್ದಕ್ಕೆ ಪ್ರಧಾನಿಯನ್ನು ದೂರಲಾಗದು. ಅವರ ತವರು ರಾಜ್ಯದಲ್ಲಿ ಅತ್ಯಂತ ದುರ್ಬಲ ಸರ್ಕಾರ ಇದೆ. ಹಾಗಾಗಿ ಆ ರಾಜ್ಯಕ್ಕೆ ಪ್ರಧಾನಿ ಹೋಗಿದ್ದಾರೆ ಎಂದು ರಾವುತ್‌ ಲೇವಡಿ ಮಾಡಿದ್ದಾರೆ. 

ಗುಜರಾತ್‌ಗೆ ₹1,000 ಕೋಟಿ ಪರಿಹಾರ

ತೌತೆ ಚಂಡಮಾರುತದಿಂದ ಹಾನಿಗೆ ಒಳಗಾಗಿರುವ ಗುಜರಾತ್‌ಗೆ ತಕ್ಷಣದ ಪರಿಹಾರವಾಗಿ ₹1,000 ಕೋಟಿ ನೀಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ‘ತೌತೆ’ ಅಬ್ಬರದಿಂದಾಗಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿಯೂ ಅವರು ಪ್ರಕಟಿಸಿದ್ದಾರೆ. 

ಗುಜರಾತ್‌ನ ಹಾನಿಗೊಳಗಾದ ಪ್ರದೇಶದಲ್ಲಿ ಬುಧವಾರ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಪ್ರಧಾನಿ ಈ ನೆರವನ್ನು ಪ್ರಕಟಿಸಿದರು. 

ವೈಮಾನಿಕ ಸಮೀಕ್ಷೆ ಬಳಿಕ, ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ, ಮುಖ್ಯ ಕಾಯರ್ದರ್ಶಿ ಅನಿಲ್‌ ಮುಕಿಮ್‌ ಮತ್ತು ಹಿರಿಯ ಅಧಿಕಾರಿಗಳ ಜೊತೆ ಪ್ರಧಾನಿ ಸಭೆ ನಡೆಸಿದರು. ಹಾನಿಗೀಡಾದ ಮೂಲಸೌಕರ್ಯ ಮರುನಿರ್ಮಾಣಕ್ಕೆ ಗುಜರಾತ್‌ಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ರಾಜ್ಯ ಸರ್ಕಾರವು ಹಾನಿ ಕುರಿತು ಮೌಲ್ಯಮಾಪನ ನಡೆಸಿ ವರದಿ ನೀಡಿದ ಬಳಿಕ ಮತ್ತಷ್ಟು ಪರಿಹಾರ ನೀಡುವುದಾಗಿ ಪ್ರಧಾನಿ ಆಶ್ವಾಸನೆ ನೀಡಿದ್ದಾರೆ.

ಚಂಡಮಾರುತದ ಹೊಡೆತಕ್ಕೆ ಒಳಗಾಗಿರುವ ಇತರ ರಾಜ್ಯಗಳ ಸರ್ಕಾರಗಳು ತಮ್ಮ ರಾಜ್ಯಕ್ಕೆ ಆಗಿರುವ ಹಾನಿಯನ್ನು ಅಂದಾಜಿಸಿ ಕೇಂದ್ರಕ್ಕೆ ವರದಿ ನೀಡಬೇಕು. ಬಳಿಕ ಆ ರಾಜ್ಯಗಳಿಗೂ ಪರಿಹಾರ ನೀಡಲಾಗುತ್ತದೆ ಎಂದು ಕೇಂದ್ರದ ಪ್ರಕಟಣೆಯಲ್ಲಿ ಹೇಳಲಾಗಿದೆ.

‘ಚಂಡಮಾರುತದಿಂದ ತೊಂದರೆಗೆ ಒಳಗಾಗಿರುವ ಎಲ್ಲಾ ರಾಜ್ಯಗಳ ನೆರವಿಗೆ ಕೇಂದ್ರ ನಿಂತಿದೆ’ ಎಂದು ಮೋದಿ ಬಳಿಕ ಟ್ವೀಟ್‌ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು