ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳೆಯನ ಹಗರಣ ತೊಳೆಯಲು ಸಂಸತ್ತನ್ನೇ ವಾಷಿಂಗ್ ಮೆಶಿನ್ ಮಾಡಿಕೊಂಡ ಮೋದಿ: ಖರ್ಗೆ

Last Updated 10 ಫೆಬ್ರುವರಿ 2023, 16:37 IST
ಅಕ್ಷರ ಗಾತ್ರ

ನವದೆಹಲಿ: ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡದ ಕೇಂದ್ರ ಸರ್ಕಾರವನ್ನು ಜನರು ತೊಲಗಿಸುತ್ತಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಶುಕ್ರವಾರ ಅದಾನಿ ಗ್ರೂಪ್ ವಿಚಾರದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಂಸತ್ತಿನ ದಾಖಲೆಗಳಿಂದ ಅದಾನಿ ಸಮೂಹ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಟೀಕೆಗಳನ್ನು ತೆಗೆದುಹಾಕಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅದಾನಿ ಸಮೂಹದ ಮೇಲಿನ ಆರೋಪದ ಕುರಿತಂತೆ ಮೋದಿ ಸರ್ಕಾರವು ಸತ್ಯವನ್ನು ಮುಚ್ಚಿಡಲು ಮತ್ತು ಜಂಟಿ ಸದನ ಸಮಿತಿಯಿಂದ ತನಿಖೆಯನ್ನು ತಡೆಯಲು ಯತ್ನಿಸುತ್ತಿದೆ. ಹಾಗಾಗಿ, ಸಂಸತ್ತಿನ ೊಳಗೂ ಮತ್ತು ಹೊರಗೂ ಎರಡೂ ಕಡೆ ಈ ಬಗ್ಗೆ ಪ್ರಶ್ನಿಸಲು ವಿರೋಧ ಪಕ್ಷಗಳು ತೀರ್ಮಾನಿಸಿವೆ ಎಂದು ಹೇಳಿದರು.

ಸಾಮಾನ್ದ ಜನರ ಹಣಕ್ಕೆ ಸಂಬಂಧಿಸಿದ ಹಗರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು.

‘ಸದನದಲ್ಲಿ ಅದಾನಿ ಮತ್ತು ಸರ್ಕಾರದ ಮೇಲೆ ಮಾಡಿದ ಟೀಕೆಗಳನ್ನು ಕಡತದಿಂದ ತೆಗೆದುಹಾಕಿರುವ ಬಗ್ಗೆ ನಾನು ರಾಜ್ಯಸಭೆ ಸಭಾಪತಿಗೆ ಪತ್ರ ಬರೆದಿದ್ದು, ಟೀಕೆಗಳನ್ನು ಕಡತದಿಂದ ತೆಗೆಯುವುದರಿಂದ ಮಾಧ್ಯಮಗಳು ಮತ್ತು ಜನರು ಮಾಡಿದ ಆರೋಪಗಳನ್ನು ಯಾರ ಹೆಸರಿನಿಂದಲೂ ತೆಗೆಯಲು ಸಾಧಯವಿಲ್ಲ’ ಎಂದು ಖರ್ಗೆ ಹೇಳಿದರು.

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಅದಾನಿ ಮತ್ತು ಸರ್ಕಾರದ ವಿರುದ್ಧ ತಾವು ಮಾಡಿದ್ದ ಟೀಕೆಗಳನ್ನು ತೆಗೆದುಹಾಕಿದ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡದ್ದರಿಂದ ಗುರುವಾರ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಸದನದಿಂದ ಹೊರ ನಡೆದಿದ್ದವು.

ಇಂತಹ ದೊಡ್ಡ ಹಗರಣಗಳ ಬಗ್ಗೆ ಜೆಪಿಸಿ ತನಿಖೆಗೆ ಒತ್ತಾಯಿಸುವುದು ಅಪರಾಧವೇ? ಎಂದು ಪ್ರಶ್ನಿಸಿದ ಖರ್ಗೆ, ಈ ಬಗ್ಗೆ ನಾನೊಬ್ಬ ಮಾತ್ರ ಪ್ರಶ್ನೆಗಳನ್ನು ಎತ್ತಲು ಸಾಧ್ಯವಾಯಿತು. ಬೇರೆ ಯಾರಿಗೂ ಈ ಬಗ್ಗೆ ಮಾತನಾಡಲು ಅವಕಾಶ ನೀಡದ ಮೋದಿ ಮತ್ತು ಅವರ ಸರ್ಕಾರದ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.

ಮೋದಿಯವರು ತಮ್ಮ ಸ್ನೇಹಿತನ ಹಗರಣಗಳನ್ನು ತೊಳೆಯಲು ಸಂಸತ್ತನ್ನು ವಾಷಿಂಗ್ ಮೆಶಿನ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಜನರ ಹಣವನ್ನು ರಕ್ಷಿಸುವುದು ಮತ್ತು ಅವರ ಜೀವನದ ಮೇಲಿನ ಪರಿಣಾಮದ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವುದು ಸಂಸದರ ಜವಾಬ್ದಾರಿ ಎಂದು ಹೇಳಿದರು.

‘ಅದಾನಿ ಹಗರಣದ ಬಗ್ಗೆ ತನಿಖೆ ನಡೆಯಬಾರದೇ? ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಎಲ್‌ಐಸಿ ಹಣದ ಮೌಲ್ಯ ಕುಸಿಯುತ್ತಿಲ್ಲವೇ? ಅದಾನಿ ಸಮೂಹಕ್ಕೆ ಎಸ್‌ಬಿಐ ಮತ್ತು ಇತರ ಬ್ಯಾಂಕ್‌ಗಳು ₹82,000 ಕೋಟಿ ಸಾಲ ನೀಡಿರುವ ಬಗ್ಗೆ ಧ್ವನಿ ಎತ್ತಬಾರದೇ? ಅದಾನಿ ಷೇರುಗಳ ಮೌಲ್ಯ ಶೇಕಡ 32ರಷ್ಟು ಕುಸಿದ ಬಳಿಕವೂ ಎಲ್‌ಐಸಿಯ ₹525 ಕೋಟಿ ಮತ್ತು ಎಸ್‌ಬಿಐ ಹಣವನ್ನು ಅದಾನಿ ಎಫ್‌ಪಿಒನಲ್ಲಿ ಹೂಡಿಕೆ ಮಾಡಿದ್ದೇಕೆ? ಎಂದು ಖರ್ಗೆ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT