ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತನ್ನು ಅಪಮಾನಿಸುವವರಿಗೆ ಉಳಿಗಾಲವಿಲ್ಲ: ನರೇಂದ್ರ ಮೋದಿ

ತವರು ರಾಜ್ಯದಲ್ಲಿ ಮೊದಲ ಚುನಾವಣಾ ಪ್ರಚಾರ ರ್‍ಯಾಲಿ
Last Updated 6 ನವೆಂಬರ್ 2022, 19:32 IST
ಅಕ್ಷರ ಗಾತ್ರ

ನಾನಪೋಡ (ಗುಜರಾತ್): ದ್ವೇಷ ಹರಡುವವರು ಹಾಗೂ ಗುಜರಾತ್ ಅನ್ನು ಅಪಮಾನಿಸುವವರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯು ರಾಜ್ಯದಿಂದಲೇ ಗುಡಿಸಿ ಹಾಕಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ. ಬಿಜೆಪಿ ಈ ಬಾರಿ ಮತ್ತೊಮ್ಮೆ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತವರು ರಾಜ್ಯದ ಮೊದಲ ಚುನಾವಣಾ ರ್‍ಯಾಲಿಯಲ್ಲಿ ‘ಇದು ನಾನು ಮಾಡಿದ ಗುಜರಾತ್’ ಎಂಬ ಹೊಸ ಘೋಷಣೆಯೊಂದಿಗೆ ಪ್ರಚಾರ ಆರಂಭಿಸಿದ ಅವರು, ತಮ್ಮ 25 ನಿಮಿಷಗಳ ಭಾಷಣದ ಉದ್ದಕ್ಕೂ ಈ ಘೋಷಣೆಯನ್ನು ಜನರಿಂದ ಹಲವು ಬಾರಿ ಹೇಳಿಸಿದರು.

‘ದ್ವೇಷ ಕಾರುವವರನ್ನು ಗುಜರಾತ್ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂಬುದು ಸಾಬೀತಾಗಿದೆ. ಹಿಂದಿನ ಹಲವು ಚುನಾವಣೆಗಳಲ್ಲಿ ಗುಜರಾತ್‌ ಅನ್ನು ಅಪಮಾನಿಸಲು ಯತ್ನಿಸಿದವರನ್ನು ರಾಜ್ಯದ ಜನರು ಹೊರಹಾಕಿದ್ದಾರೆ. ಈ ಚುನಾವಣೆಯಲ್ಲಿಯೂ ಅಂತಹ ಯತ್ನ ಮಾಡುವವರು ಅದೇ ಪರಿಣಾಮ ಎದುರಿಸಲಿದ್ದಾರೆ’ ಎಂದು ಪ್ರಧಾನಿ ಎಚ್ಚರಿಸಿದರು.

ಬುಡಕಟ್ಟು ಜನರ ಪ್ರಾಬಲ್ಯದ ವಲಸಾಡ್ ಜಿಲ್ಲೆಯ ಕಪರಾಡಾ ತಾಲ್ಲೂಕಿನ ನಾನ ಪೋಡ ಎಂಬಲ್ಲಿ ಅವರು ಮತಯಾಚನೆ ಮಾಡಿದರು.

ಯಾರ ಹೆಸರನ್ನೂ ಉಲ್ಲೇಖಿಸದೆ ಮಾತನಾಡಿದ ಪ್ರಧಾನಿ, ‘ಕಳೆದ ಎರಡು ದಶಕಗಳಿಂದ ‘ಒಂದು ಗುಂಪು’ ಗುಜರಾತ್‌ನ ಹೆಸರು ಕೆಡಿಸುವ ಯತ್ನದಲ್ಲಿ ತೊಡಗಿದೆ. ಆದರೆ ಜನರು ಅವರನ್ನು ನಂಬಿಲ್ಲ. ತಮ್ಮ ಸುಳ್ಳು ಪ್ರಚಾರವನ್ನು ಜನರು ಏಕೆ ನಂಬುತ್ತಿಲ್ಲ ಎಂಬ ವಿಚಾರ ಆ ಗುಂಪಿನವರಿಗೆ ಅಚ್ಚರಿಯಾಗಿಯೇ ಉಳಿದಿದೆ’ ಎಂದರು. ಕಠಿಣ ಪರಿಶ್ರಮದಿಂದ ಗುಜರಾತ್‌ಅನ್ನು ಕಟ್ಟಿರುವ ಜನರು, ಆ ‘ಒಂದು ಗುಂಪಿನವರಿಗೆ’ ಷಡ್ಯಂತ್ರ ರೂಪಿಸಲು ಅವಕಾಶ ನೀಡುತ್ತಿಲ್ಲ ಎಂದು ಶ್ಲಾಘಿಸಿದರು.

‘ರಾಜ್ಯದ ಬುಡಕಟ್ಟು ಪ್ರದೇಶದಲ್ಲಿ ಎರಡು ದಶಕಗಳ ಹಿಂದೆ ಒಂದೂ ವಿಜ್ಞಾನ ಕಾಲೇಜು ಇರಲಿಲ್ಲ. ಈಗ ಬುಡಕಟ್ಟು ಜನರಿಗೆ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ಸಾಧ್ಯವಾಗಿದೆ. ದಕ್ಷಿಣ ಗುಜರಾತಿನ ಉಮರ್‌ಗಾಮ್‌ನಿಂದ ಉತ್ತರ ಭಾಗದ ಅಂಬಾಜಿವರೆಗೆ ಐದು ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿವೆ’ ಎಂದು ಪ್ರಧಾನಿ ಹೇಳಿದರು. ಜನರು ದಿನದ 24 ಗಂಟೆಯೂ ವಿದ್ಯುತ್ ಪಡೆಯುತ್ತಿದ್ದಾರೆ ಎಂದರು.

2002ರಲ್ಲಿ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯು ದಾಖಲೆಯ 127 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. 2017ರಲ್ಲಿ 99 ಕ್ಷೇತ್ರಗಳಿಗೆ ಸೀಮಿತಗೊಂಡಿತ್ತು. ಈ ಅವಧಿಯಲ್ಲಿ ಕಾಂಗ್ರೆಸ್‌ ಗೆದ್ದ ಕ್ಷೇತ್ರಗಳು 16ರಿಂದ 77ಕ್ಕೆ ಜಿಗಿದಿದ್ದು, ತನ್ನ ಸಾಧನೆಯನ್ನು ಉತ್ತಮಪಡಿಸಿಕೊಂಡಿದೆ.

‘ಇದು ನಾನು ಮಾಡಿದ ಗುಜರಾತ್’
‘ಇದು ನಾನು ಮಾಡಿದ ಗುಜರಾತ್’ ಎಂಬ ಘೋಷಣೆಯು ಪ್ರಧಾನಿ ಸಮಾವೇಶದಲ್ಲಿ ಅನುರಣಿಸಿತು. ‘ಆದಿವಾಸಿಯಾಗಿರಲಿ, ಮೀನುಗಾರರಾಗಿರಲೀ, ಗ್ರಾಮೀಣ ಭಾಗ ಅಥವಾ ನಗರ ಭಾಗದವರೇ ಇರಲಿ, ಎಲ್ಲ ಗುಜರಾತಿಯೂ ಇಂದು ಸಂಪೂರ್ಣ ವಿಶ್ವಾಸದಲ್ಲಿದ್ದಾರೆ. ಹೀಗಾಗಿಯೇ ಪ್ರತಿಯೊಬ್ಬ ಗುಜರಾತಿಯೂ‘ಇದು ನಾನು ಮಾಡಿದ ಗುಜರಾತ್’ ಎಂದು ಹೇಳುತ್ತಿದ್ದಾರೆ. ಜನರು ತಮ್ಮ ಕಠಿಣ ಪರಿಶ್ರಮದಿಂದ ಗುಜರಾತ್ ರಾಜ್ಯವನ್ನು ಕಟ್ಟಿದ್ದಾರೆ’ ಎಂದು ಪ್ರಧಾನಿ ಪ್ರಶಂಸಿಸಿದರು.

*
ಗುಜರಾತ್‌ನಲ್ಲಿ ಈ ಬಾರಿ ಬಿಜೆಪಿ ದಾಖಲೆ ಅಂತರದಲ್ಲಿ ಗೆಲ್ಲಲಿದೆ ಎಂದು ನನಗೆ ಮಾಹಿತಿ ಬಂದಿದೆ. ನನ್ನ ಹಿಂದಿನ ದಾಖಲೆಗಳನ್ನು ಮುರಿಯಲು ಮತ್ತೆ ಬಂದಿದ್ದೇನೆ
–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT