ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಜನ್ಮದಿನ: ಸಂಭ್ರಮ ಜೋರು

ಕೇಕ್ ಕತ್ತರಿಸಿ ಆಚರಣೆ, ಅಂಗವಿಕಲರಿಗೆ ಗಾಲಿಕುರ್ಚಿ ವಿತರಣೆ, ರಕ್ತದಾನ ಶಿಬಿರ
Last Updated 17 ಸೆಪ್ಟೆಂಬರ್ 2022, 17:16 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನದ ಅಂಗವಾಗಿ ದೇಶದ ಹಲವು ಕಡೆಗಳಲ್ಲಿ ಸಂಭ್ರಮಾಚರಣೆ ನಡೆಯಿತು. ಜನ್ಮದಿನ ನಿಮಿತ್ತ ವಿವಿಧ ಸೇವಾ ಚಟುವಟಿಕೆಗಳನ್ನು ಬಿಜೆಪಿ ಹಮ್ಮಿಕೊಂಡಿತ್ತು. ರಕ್ತದಾನ ಶಿಬಿರ, ಸಸಿ ನಾಟಿ, ಗಂಗಾನದಿ ಸ್ವಚ್ಛತೆ ಮೊದಲಾದ ಕಾರ್ಯಕ್ರಮಗಳು ನಡೆದವು. ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಗೃಹಸಚಿವ ಅಮಿತ್ ಶಾ, ಬೌದ್ಧಗುರು ದಲೈಲಾಮಾ ಸೇರಿ ದಂತೆ ಹಲವು ಗಣ್ಯರು ಮೋದಿ ಅವರಿಗೆ ಶುಭ ಕೋರಿದರು.

ಮೋದಿ ಅವರು ತಮ್ಮ ಜನ್ಮದಿನ ದಂದು ನಾಲ್ಕು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಪ್ರತಿ ವರ್ಷ ಸೆ.17ರಂದು ಅವರು ಗುಜರಾತ್‌ಗೆ ತೆರಳಿ ತಮ್ಮ ತಾಯಿಯನ್ನು ಭೇಟಿಯಾಗುತ್ತಿದ್ದರು. ಆದರೆ ಈ ಬಾರಿ ಅವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿ, ನಮೀಬಿಯಾದಿಂದ ತರಿಸಿದ್ದ ಚೀತಾಗಳನ್ನು ಕಾಡಿಗೆ ಬಿಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ, ಸ್ವಸಹಾಯ ಗುಂಪಿನ ಸದಸ್ಯರ ಸಮಾವೇಶದಲ್ಲಿ ಮಾತನಾಡಿದರು.

ರಕ್ತದಾನ ಅಮೃತ ಮಹೋತ್ಸವ: ಪ್ರಧಾನಿ ಹುಟ್ಟುಹಬ್ಬದ ಅಂಗವಾಗಿ ದೇಶದಾದ್ಯಂತ 15 ದಿನಗಳ ರಕ್ತದಾನ ಅಮೃತ ಮಹೋತ್ಸವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದರು. ದೇಶದಾದ್ಯಂತ 5,980 ಕೇಂದ್ರಗಳಲ್ಲಿ ರಕ್ತದಾನ ಶಿಬಿರ ನಡೆಯುತ್ತಿದೆ. ‘ಮೊದಲ ದಿನವೇ ಸುಮಾರು 87 ಸಾವಿರ ಜನ ರಕ್ತದಾನ ಮಾಡಿದ್ದಾರೆ. ಇದೊಂದು ವಿಶ್ವ ದಾಖಲೆ’ ಎಂದು ಮಾಂಡವೀಯ ಹೇಳಿದ್ದಾರೆ. ಅ.1ರ ವರೆಗೆ ನಡೆಯಲಿರುವ ರಕ್ತದಾನ ಅಮೃತ ಮಹೋತ್ಸವದಲ್ಲಿ ರಕ್ತದಾನ ಮಾಡಲು ಬಯಸುವವರು ಆರೋಗ್ಯ ಸೇತು ಆ್ಯಪ್‌ನಲ್ಲಿ ನೋಂದಣಿ ಮಾಡಿ ಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ನೀರು ಸಂರಕ್ಷಣೆ ಮ್ಯೂಸಿಯಂ ಉದ್ಘಾಟನೆ: ಪ್ರಧಾನಿ ಜನ್ಮದಿನದ ಅಂಗವಾಗಿ, ನೀರು ಸಂರಕ್ಷಣೆಯ ಮಹತ್ವವನ್ನು ತಿಳಿಸುವ ವಸ್ತು ಸಂಗ್ರಹಾಲಯವನ್ನು ದೆಹಲಿಯಲ್ಲಿ ಶನಿವಾರ ಉದ್ಘಾಟಿಸಲಾಯಿತು. ಸಿಕ್ಕಿಂ ರಾಜ್ಯಪಾಲ ಗಂಗಾ ಪ್ರಸಾದ್ ಅವರು ಇಲ್ಲಿನ ಸುಲಭ್ ಇಂಟರ್‌ನ್ಯಾಷನಲ್ ಕ್ಯಾಂಪಸ್‌ನಲ್ಲಿ ನಿರ್ಮಿಸಿರುವ ಮ್ಯೂಸಿಯಂ ಉದ್ಘಾಟಿಸಿದರು. ವಿವಿಧ ಜಲಮೂಲಗಳು, ನೀರು ಸಂರಕ್ಷಣೆಯ ಸಾಂಪ್ರದಾಯಿಕ ಹಾಗೂ ಆಧುನಿಕ ವಿಧಾನಗಳು, ನೀರು ನಿರ್ವಹಣೆಯ ಉತ್ತಮ ಅಭ್ಯಾಸಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತದೆ.

ಮೋದಿ ತವರು ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮ: ಮೋದಿ ಅವರ ಜೀವನವನ್ನು ಬಿಂಬಿಸುವ ವಸ್ತುಪ್ರದರ್ಶನವನ್ನು ವಾರಾಣಸಿಯ ಶಹೀದ್ ಉದ್ಯಾನದಲ್ಲಿ ಏರ್ಪಡಿಸ ಲಾಗಿತ್ತು. ವಾರಾಣಸಿ ದಕ್ಷಿಣ ಕ್ಷೇತ್ರದ ಶಾಸಕ ನೀಲಕಂಠ ತಿವಾರಿ ಹಾಗೂ ಕಾರ್ಯಕರ್ತರು ಗಂಗಾ ನದಿಗೆ 51 ಲೀಟರ್ ಹಾಲಿನ ಅಭಿಷೇಕ ಮಾಡಿದರು. ಬಿಜೆಪಿ ಕಾರ್ಯಕರ್ತರು ಕಾಶಿ ವಿಶ್ವನಾಥ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ‘ನಮಾಮಿ ಗಂಗೆ’ ನೌಕರರು ನಮೋ ಘಾಟ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಮನೋಕಾಮನ ಸಿದ್ಧಿ ಹನುಮಾನ್ ದೇವಸ್ಥಾನದಲ್ಲಿ ಅಖಂಡ ರಾಮಾಯಣ ಪಠಣ ಹಮ್ಮಿಕೊಳ್ಳಲಾಗಿತ್ತು.ಲಡ್ಡು ಬಳಸಿ ತಯಾರಿಸಲಾಗಿದ್ದ 72 ಕೆ.ಜಿ ತೂಕದ ಕೇಕ್ ಕತ್ತರಿಸಲಾಯಿತು.

ಮೋದಿ ಜನ್ಮದಿನ ಅಂಗವಾಗಿ...

*ಕಲಾವಿದೆ ಲಕ್ಷ್ಮಿ ಗೌಡ್ ಅವರುಮುಂಬೈ ಕಡಲತೀರದಲ್ಲಿ ಹಾಗೂ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಕಡಲತೀರದಲ್ಲಿ ಮರಳುಶಿಲ್ಪ ರಚಿಸಿ ಮೋದಿ ಅವರಿಗೆ ಶುಭ ಕೋರಿದರು

*ಹೈದರಾಬಾದ್‌ನಲ್ಲಿ ಅಂಗವಿಕಲರಿಗೆ ಗಾಲಿಕುರ್ಚಿ ನೀಡುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಭಾಗಿ; ಪಟ್ನಾದಲ್ಲಿ ಅಂಗವಿಕಲರಿಗೆ ಗಾಲಿಕುರ್ಚಿ ನೀಡುವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಭಾಗಿ

*ಮೋದಿ ಅವರ ಜೀವನಪಥ ಒಳಗೊಂಡ ಚಿತ್ರಪ್ರದರ್ಶನವನ್ನುಲಖನೌದಲ್ಲಿ ಉದ್ಘಾಟಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

*ಮೋದಿ ಜನ್ಮದಿನಕ್ಕೆಂದೇ ವಿಶೇಷ ಥಾಲಿಯನ್ನು ದೆಹಲಿಯ ರೆಸ್ಟೋರೆಂಟ್‌ವೊಂದರಲ್ಲಿ ತಯಾರಿಸಲಾಗಿತ್ತು. ಈ ಥಾಲಿಯು 56 ಖಾದ್ಯಗಳನ್ನು ಒಳಗೊಂಡಿದೆ

*ಫರೀದಾಬಾದ್‌ನಲ್ಲಿ ಶಾಲಾಮಕ್ಕಳು ‘ಹ್ಯಾಪಿ ಬರ್ತ್‌ಡೇ ಮೋದಿಜೀ’ ಎಂಬ ವಾಕ್ಯದ ವಿನ್ಯಾಸದಲ್ಲಿ ನಿಂತು ಶುಭ ಕೋರಿದರು

*ಗೋರಖಪುರದಲ್ಲಿ ಎನ್‌ಸಿಸಿ ಕೆಡೆಟ್‌ಗಳು ಸ್ವಚ್ಛ ಭಾರತದ ಪ್ರತಿಜ್ಞೆ ಸ್ವೀಕರಿಸಿದರು‌; ನವಿಮುಂಬೈನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು

*ಅಹಮದಾಬಾದ್‌ನಲ್ಲಿ ಮುಸ್ಲಿಂ ಸಮುದಾಯದ ಜನರು ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದರು

*****

ಪ್ರತೀ ವರ್ಷ ಜನ್ಮದಿನದಂದು ತಾಯಿಯ ಭೇಟಿ ಆಗುತ್ತಿದ್ದೆ. ಈ ಬಾರಿ ಮಧ್ಯಪ್ರದೇಶದ ಲಕ್ಷಾಂತರ ತಾಯಂದಿರು ನನ್ನನ್ನು ಆಶೀರ್ವದಿಸಿದ್ದಾರೆ. ಇದರಿಂದ ಅಮ್ಮ ಸಂತಸಗೊಂಡಿರುತ್ತಾರೆ.

– ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT