ಭಾನುವಾರ, ಜೂನ್ 13, 2021
21 °C

ಕೋವಿಡ್‌ನಿಂದ ಮೃತಪಟ್ಟವರನ್ನು ನೆನೆದು ಭಾವುಕರಾದ ಪ್ರಧಾನಿ ಮೋದಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌-19 ಸಾಂಕ್ರಾಮಿಕದಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸುವ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಭಾವುಕರಾದರು.

ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ ವಾರಣಾಸಿಯಲ್ಲಿ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಹನ ನಡೆಸಿದ ಮೋದಿ, ʼಕೋವಿಡ್‌-19 ನಮ್ಮ ಹಲವು ಪ್ರೀತಿಪಾತ್ರರನ್ನು ನಮ್ಮಿಂದ ಕಸಿದುಕೊಂಡಿದೆ. ಕೋವಿಡ್‌ನಿಂದ ನಿಧನರಾದವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬದವರಿಗೆ ನನ್ನ ಸಂತಾಪಗಳನ್ನೂ ಸೂಚಿಸುತ್ತೇನೆʼ ಎಂದು ಹೇಳಿದ್ದಾರೆ.

ಮಾತುಕತೆ ವೇಳೆ ಸಾಕಷ್ಟು ಸಲ ವಿರಾಮ ತೆಗೆದುಕೊಂಡ ಅವರು, ಭಾವುಕರಾದಂತೆ ಮತ್ತು ಕಣ್ಣೀರನ್ನು ತಡೆಯಲು ಪ್ರಯತ್ನಿಸುತ್ತಿರುವಂತೆ ಕಂಡುಬಂದರು. ಬಳಿಕ ಮಾತು ಮುಂದುವರಿಸಿದ ಪ್ರಧಾನಿ, ಕೋವಿಡ್‌ ವಿರುದ್ಧ ಲಸಿಕೆಯನ್ನು ʼಸುರಕ್ಷತಾ ಕವಚʼ ಎಂದು ಬಣ್ಣಿಸಿದರು ಮತ್ತು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ʼಜನರನ್ನು ಕಾಪಾಡಲು ಸೇವೆ ಮಾಡುತ್ತಿರುವ ನಮ್ಮ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಯು ರಕ್ಷಣೆಯನ್ನು ಒದಗಿಸಿದೆ. ಮುಂಬರುವ ದಿನಗಳಲ್ಲಿ ಲಸಿಕೆ ಸುರಕ್ಷತೆಯನ್ನು ಪ್ರತಿಯೊಬ್ಬರಿಗೂ ವಿಸ್ತರಿಸಲಿದ್ದೇವೆʼ ಎಂದು ಹೇಳಿದರು.

ʼಸದ್ಯ ಕೋವಿಡ್‌-19 ವಿರುದ್ಧ ಹೋರಾಟದ ನಡೆಸುತ್ತಿರುವಾಗಲೇ, ಕಪ್ಪು ಶಿಲೀಂಧ್ರ ಸೋಂಕು ಹೊಸ ಸವಾಲಾಗಿ ಎದುರಾಗಿದೆ. ನಾವು ಅದನ್ನು ಮೀರಿ ನಿಲ್ಲಲು ಮುಂಜಾಗ್ರತೆ ಮತ್ತು ಸಿದ್ಧತೆಗಳನ್ನು ಕೈಗೊಳ್ಳುವತ್ತ ಗಮನ ಹರಿಸಬೇಕಿದೆʼ ಎಂದಿದ್ದಾರೆ.

ಇದೇ ವೇಳೆ ಅವರು ಕೋವಿಡ್‌ ಎರಡನೇ ಅಲೆ ವಿರುದ್ಧ ವಾರಣಾಸಿಯು ಪರಿಣಾಮಕಾರಿಯಾಗಿ ಹೋರಾಟ ನಡೆಸಿದೆ ಎಂದು ಶ್ಲಾಘಿಸಿದರು. ಹಾಗೆಯೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋವಿಡ್‌ ಆಸ್ಪತ್ರೆಗಳ ಸ್ಥಿತಿಗತಿಗಳನ್ನೂ ಪರಿಶೀಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು