ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿನ್, ಝೆಲೆನ್‌ಸ್ಕಿ ಜತೆ ಚರ್ಚೆ: ವಿದ್ಯಾರ್ಥಿಗಳ ಸುರಕ್ಷಿತ ತೆರವಿಗೆ ಮೋದಿ ಮನವಿ

ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯರು l ಪುಟಿನ್, ಝೆಲೆನ್‌ಸ್ಕಿ ಜತೆ ನರೇಂದ್ರ ಮೋದಿ ಮಾತುಕತೆ
Last Updated 8 ಮಾರ್ಚ್ 2022, 5:29 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರ ಜತೆ ಸೋಮವಾರ ಪ್ರತ್ಯೇಕವಾಗಿ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಉಕ್ರೇನ್‌ನ ಉತ್ತರ ಭಾಗದ ಸುಮಿ ನಗರದಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ತೆರವಿಗೆ ನೆರವು ನೀಡುವಂತೆ ಮನವಿ ಮಾಡಿದರು.

ರಷ್ಯಾ ಹಾಗೂ ಉಕ್ರೇನ್ ನಡುವೆ ತೀವ್ರ ಪ್ರಮಾಣದ ಯುದ್ಧ ನಡೆಯುತ್ತಿರುವ ಸುಮಿ ನಗರದಲ್ಲಿ ಭಾರತದ ಸುಮಾರು 700 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.

ಸುಮಿ ನಗರ ಸೇರಿದಂತೆ, ಉಕ್ರೇನ್‌ನ ಕೆಲವು ಭಾಗಗಳಲ್ಲಿ ಕದನ ವಿರಾಮ ಘೋಷಣೆ ಹಾಗೂ ಯುದ್ಧ ಸಂತ್ರಸ್ತರ ತೆರವಿಗೆ ಮಾನವೀಯನೆಲೆಯಲ್ಲಿ ‘ಸುರಕ್ಷಿತ ಕಾರಿಡಾರ್’ ನಿರ್ಮಿಸುವ ರಷ್ಯಾದ ನಿರ್ಧಾರವನ್ನು ಪ್ರಧಾನಿ ಅಭಿನಂದಿಸಿದರು ಎಂದು ಮೂಲಗಳು ತಿಳಿಸಿವೆ.

ಕೀವ್, ಹಾರ್ಕಿವ್ ಹಾಗೂ ಸುಮಿ ನಗರಗಳಲ್ಲಿ ಕದನ ವಿರಾಮ ಜಾರಿ ಹಾಗೂ ಸಂತ್ರಸ್ತತ ತೆರವಿಗೆ ಕಾರಿಡಾರ್‌ ನಿರ್ಮಾಣಕ್ಕೆ ಅವಕಾಶ ನೀಡುವುದಾಗಿ ರಷ್ಯಾ ಅಧಿಕಾರಿಗಳು ಈ ಮುನ್ನ ತಿಳಿಸಿದ್ದರು.

ಪುಟಿನ್‌ಗೆ ಮೋದಿ ಸಲಹೆ: ಪುಟಿನ್ ಜೊತೆ ಮೋದಿ ಅವರು ಸುಮಾರು 50 ನಿಮಿಷ ಮಾತುಕತೆ ನಡೆಸಿದರು. ಉಕ್ರೇನ್ ಅಧ್ಯಕ್ಷರ ಜೊತೆ ನೇರವಾಗಿ ಮಾತುಕತೆ ನಡೆಸುವಂತೆ ಪುಟಿನ್‌ಗೆ ಮೋದಿ ಅವರು ಸಲಹೆ ನೀಡಿದರು ಎಂದು ತಿಳಿದುಬಂದಿದೆ. ಪ್ರಸ್ತುತ ಸ್ಥಿತಿ ಹಾಗೂ ಮಾತುಕತೆಯ ವಿವರಗಳನ್ನು ಪುಟಿನ್ ಅವರು ಮೋದಿ ಅವರಿಗೆ ನೀಡಿ ದರು. 11 ದಿನಗಳ ಹಿಂದೆ ಉಕ್ರೇನ್‌ ಬಿಕ್ಕಟ್ಟು ಆರಂಭವಾದ ಬಳಿಕ ಪುಟಿನ್–ಮೋದಿ ನಡುವೆ ನಡೆದ ಮೂರನೇ ದೂರವಾಣಿ ಸಂಭಾಷಣೆ ಇದಾಗಿದೆ.

ಝೆಲೆನ್‌ಸ್ಕಿಗೆ ಮೋದಿ ಧನ್ಯವಾದ:ಪುಟಿನ್ ಜೊತೆ ಮಾತುಕತೆ ನಡೆಸುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷರ ಜೊತೆ ಪ್ರಧಾನಿ 35 ನಿಮಿಷ ಮಾತುಕತೆ ನಡೆಸಿದರು. ಯುದ್ಧಪೀಡಿತ ಜಾಗಗಳಿಂದ ಭಾರತೀಯರನ್ನು ತೆರವು ಮಾಡಲು ನೆರವು ನೀಡಿದ ಝೆಲೆನ್‌ಸ್ಕಿ ಅವರಿಗೆ ಮೋದಿ ಧನ್ಯವಾದ ಹೇಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ತೆರವು ಕಾರ್ಯಾಚರಣೆಗೂ ನೆರವು ನೀಡುವಂತೆ ಝೆಲೆನ್‌ಸ್ಕಿ ಅವರಲ್ಲಿ ಪ್ರಧಾನಿ ಮನವಿ ಮಾಡಿದರು.

ಸಂಘರ್ಷ ಹಾಗೂ ಜನರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಪ್ರಧಾನಿ ಮೋದಿ ಅವರು ಮಾತುಕತೆ ವೇಳೆ ತೀವ್ರ ಕಳವಳ ವ್ಯಕ್ತಪಡಿಸಿದರು. ತಕ್ಷಣವೇ ಯುದ್ಧ ನಿಲುಗಡೆಗೆ ಆಗ್ರಹಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

‘ಸಮಸ್ಯೆಗಳ ಇತ್ಯರ್ಥಕ್ಕೆ ಶಾಂತಿಯುತ ಮಾರ್ಗದ ಪರಿಹಾರವನ್ನು ಭಾರತ ಬೆಂಬಲಿಸುತ್ತದೆ. ಎರಡೂ ಕಡೆಯವರು ನೇರವಾಗಿ ಮಾತುಕತೆ ನಡೆಸಲು ಆಗ್ರಹಿಸುತ್ತದೆ’ ಎಂದು ಪ್ರಧಾನಿ ತಿಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

*

ಭಾರತದ ನಾಗರಿಕರಿಗೆ ಉಕ್ರೇನ್ ನೀಡಿದ ನೆರವನ್ನು ಮೋದಿ ಶ್ಲಾಘಿಸಿದರು. ಶಾಂತಿಯುತ ಮಾತುಕತೆ ಬಯಸುತ್ತಿರುವ ಉಕ್ರೇನ್‌ ನಿಲುವನ್ನು ಬೆಂಬಲಿಸಿದರು.
-ವೊಲೊಡಿಮಿರ್‌ ಝೆಲೆನ್‌ಸ್ಕಿ, ಉಕ್ರೇನ್ ಅಧ್ಯಕ್ಷ

*

ಸುಮಿ ನಗರದಿಂದ ಭಾರತದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತೆರವು ಮಾಡಲು ಅಗತ್ಯವಿರುವ ಎಲ್ಲಾ ನೆರವನ್ನು ರಷ್ಯಾ ಸೈನಿಕರು ನೀಡಲಿದ್ದಾರೆ.
-ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಕಚೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT