ಮಂಗಳವಾರ, ಸೆಪ್ಟೆಂಬರ್ 29, 2020
23 °C

ರಾಮ ಜನ್ಮಭೂಮಿ ಇಂದು ಮುಕ್ತವಾಗಿದೆ, ಮಂದಿರ ಮೇಲೆದ್ದು ನಿಲ್ಲಲಿದೆ: ಪ್ರಧಾನಿ ಮೋದಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

PM Narendra Modi

ಅಯೋಧ್ಯೆ: ರಾಮ ಜನ್ಮಭೂಮಿ ಇಂದು ಮುಕ್ತವಾಗಿದೆ. ಎಲ್ಲಿ ಕೆಡವಲಾಗಿತ್ತೋ ಅಲ್ಲೇ ಮಂದಿರ ಮೇಲೆದ್ದು ನಿಲ್ಲಲಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ‘ಜೈ ಶ್ರೀರಾಮ್’ ಘೋಷಣೆ ಮೊಳಗಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಅವರು, ‘ಪ್ರಭು ರಾಮಚಂದ್ರ ಮತ್ತು ಸೀತಾದೇವಿಯನ್ನು ನೆನಪಿಸಿಕೊಂಡು ನನ್ನ ಮಾತು ಆರಂಭಿಸುತ್ತೇನೆ. ದೇಶದ ಕೋಟಿಕೋಟಿ ರಾಮಭಕ್ತರಿಗೆ ಈ ಶುಭದಿನದ ಕೋಟಿಕೋಟಿ ಶುಭಾಶಯಗಳು’ ಎಂದು ಹೇಳಿದರು.

ಇದನ್ನೂ ಓದಿ: 

‘ಈ ಮಹತ್ವದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಾಗಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ನಾನು ಹೃದಯಪೂರ್ವಕ ಆಭಾರಿಯಾಗಿದ್ದಾನೆ. ಭಾರತವು ಇಂದು ಸೂರ್ಯನ ಸನ್ನಿಧಿಯಲ್ಲಿ, ಸರಯೂ ನದಿಯ ತೀರದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ. ಪೂರ್ಣ ದೇಶವು ಇಂದು ರಾಮಮಯವಾಗಿದೆ. ಇಡೀದೇಶ ರೋಮಾಂಚಿತವಾಗಿದೆ. ಪ್ರತಿ ಮನಸ್ಸಿನಲ್ಲಿಯೂ ಜ್ಯೋತಿ ಬೆಳಗುತ್ತಿದೆ. ಪೂರ್ತಿ ಭಾರತ ಭಾವುಕವಾಗಿದೆ’ ಎಂದು ಮೋದಿ ಹೇಳಿದರು.

ಹಲವು ವರ್ಷಗಳ ಕಾಯುವಿಕೆ ಇಂದು ಅಂತ್ಯವಾಗಿದೆ. ಕೋಟ್ಯಂತರ ಜನರು ಈ ಪವಿತ್ರ ದಿನ ನೋಡಲೆಂದು ಉಸಿರು ಬಿಗಿ ಹಿಡಿದಿದ್ದರು. ನಮ್ಮ ರಾಮಲಲ್ಲಾನಿಗಾಗಿ ಒಂದು ಭವ್ಯ ಮಂದಿರ ನಿರ್ಮಾಣವಾಗಲಿದೆ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: 

ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಕೆ: ‘ಸ್ವಾತಂತ್ರ್ಯ ಹೋರಾಟದ ಸಂದರ್ಭ ಸಾಕಷ್ಟು ಜನರು ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ್ದರು. ದೇಶದ ಎಲ್ಲ ಭೂಭಾಗಗಳಲ್ಲಿಯೂ ಹೋರಾಟ ನಡೆದಿತ್ತು. ಆಗಸ್ಟ್‌ 15 ಎನ್ನುವುದು ಇಂಥ ಲಕ್ಷಾಂತರ ಬಲಿದಾನಗಳ ಪ್ರತೀಕ. ಸ್ವಾತಂತ್ರ್ಯ ಗಳಿಸಬೇಕೆನ್ನುವ ಭಾವನೆಗಳ ಪ್ರತೀಕ. ಇದೂ ಅಷ್ಟೇ. ರಾಮಮಂದಿರಕ್ಕಾಗಿ ಹಲವು ಪೀಳಿಗೆಗಳು ಅಖಂಡವಾಗಿ ಪ್ರಯತ್ನಿಸಿದ್ದವು. ಈ ದಿನವು ಅವರ ತ್ಯಾಗ ಮತ್ತು ಸಂಕಲ್ಪದ ಪ್ರತೀಕ. ರಾಮ ಮಂದಿರಕ್ಕಾಗಿ ನಡೆದ ಆಂದೋಲನದಲ್ಲಿ ಅರ್ಪಣೆ ಮತ್ತು ತರ್ಪಣ ಇತ್ತು. ಸಂಘರ್ಷ ಮತ್ತು ಸಂಕಲ್ಪ ಇತ್ತು. ಅವರ ತ್ಯಾಗ ಮತ್ತು ಬಲಿದಾನ ಮತ್ತು ಸಂಘರ್ಷದಿಂದ ಈ ಕನಸು ಇಂದು ನನಸಾಗುತ್ತಿದೆ. ಅವರ ಬದುಕು ರಾಮಮಂದಿರದ ಕನಸಿನೊಂದಿಗೆ ಬೆಸೆದುಕೊಂಡಿತ್ತು. ಅವರೆಲ್ಲರಿಗೂ ದೇಶದ 130 ಕೋಟಿ ದೇಶವಾಸಿಗಳ ಪರವಾಗಿ ಕೈಮುಗಿದು ನಮಿಸುತ್ತೇನೆ’ ಎಂದು ಮೋದಿ ಹೇಳಿದರು.

ಸಂಪೂರ್ಣ ಸೃಷ್ಟಿಯ ಶಕ್ತಿ ರಾಮಜನ್ಮಭೂಮಿಯ ಪವಿತ್ರ ಆಂದೋಲನದೊಂದಿಗೆ ಜೋಡಿಸಿಕೊಂಡಿತ್ತು. ಬದುಕಿನ ಪ್ರೇರಣೆಗಾಗಿ ಇಂದಿಗೂ ನಾವು ರಾಮನತ್ತ ನೋಡುತ್ತೇವೆ. ಇತಿಹಾಸ ಪುಟಗಳಲ್ಲಿ ಏನೆಲ್ಲಾ ಆಗಿದ್ದರೂ ರಾಮ ಇಂದಿಗೂ ನಮ್ಮ ಮನದಲ್ಲಿ ವಿರಾಜಮಾನನಾಗಿದ್ದಾನೆ, ನಮ್ಮ ಸಂಸ್ಕೃತಿಯ ಆಧಾರವಾಗಿದ್ದಾನೆ. ರಾಮನ ಭವ್ಯದಿವ್ಯ ಮಂದಿರಕ್ಕಾಗಿ ಇಂದು ಭೂಮಿಪೂಜೆ ಆಗಿದೆ. ಇಲ್ಲಿಗೆ ಬರುವ ಮೊದಲು ನಾನು ಹನುಮಂತನ ಗುಡಿಗೆ ಹೋಗಿದ್ದೆ. ರಾಮನ ಕೆಲಸಗಳನ್ನು ಹನುಮ ಶ್ರದ್ಧೆಯಿಂದ ಮಾಡುತ್ತಿದ್ದ. ರಾಮನ ಮಂದಿರ ನಿರ್ಮಾಣದಿಂದ ಅಯೋಧ್ಯೆಯ ಭವ್ಯತೆ ಹೆಚ್ಚಾಗುವುದಷ್ಟೇ ಅಲ್ಲ. ಇಲ್ಲಿನ ವಾತಾವರಣವೇ ಬದಲಾಗಲಿದೆ. ಇಡೀ ಜಗತ್ತಿನಿಂದ ಜನರು ಪ್ರಭು ರಾಮ ಮತ್ತು ಜಾನಕಿಯ ದರ್ಶನಕ್ಕಾಗಿ ಇಲ್ಲಿಗೆ ಬರ್ತಾರೆ. ರಾಮ ಮಂದಿರ ನಿರ್ಮಾಣ ಪ್ರಕ್ರಿಯೆಯು ದೇಶವನ್ನು ಜೋಡಿಸುವ ಯತ್ನ. ಇದು ವಿಶ್ವಾಸವನ್ನು ವಿದ್ಯಮಾನದೊಂದಿಗೆ ಜೋಡಿಸುವ ಯತ್ನ ಎಂದು ಮೋದಿ ಹೇಳಿದರು.

ಈ ದಿನವು ಕೋಟ್ಯಂತರ ರಾಮಭಕ್ತರ ಸಂಕಲ್ಪ ಸತ್ಯವಾದ ದಿನ. ಸತ್ಯ, ಅಹಿಂಸಾ, ಆಸ್ಥಾ ಮತ್ತು ಬಲಿದಾನಕ್ಕೆ ನ್ಯಾಯಪ್ರಿಯ ಭಾರತ ಕೊಟ್ಟ ಗೌರವ. ಸುಪ್ರೀಂಕೋರ್ಟ್‌ ತೀರ್ಪು ಕೊಟ್ಟಾಗ ದೇಶವಾಸಿಗಳು ಶಾಂತಿಯಿಂದ ನಡೆದುಕೊಂಡರು. ಇಂದೂ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಈ ಮಂದಿರದೊಂದಿಗೆ ಹೊಸ ಇತಿಹಾಸ ಬರೆಯುವುದಷ್ಟೇ ಅಲ್ಲ, ಸ್ವತಃ ಇತಿಹಾಸವು ತನ್ನನ್ನು ತಾನು ಸರಿಪಡಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: 

ವಾನರರು ರಾಮನಿಗೆ, ಮಕ್ಕಳು ಕೃಷ್ಣನಿಗೆ, ವನವಾಸಿಗಳು ಶಿವಾಜಿಗೆ ನೆರವಾದಂತೆ ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳು ಸೇರಿದಂತ ಎಲ್ಲರ ಒತ್ತಾಸೆಯಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ. ರಾಮಾಯಣ ಕಾಲದಲ್ಲಿ ಕಲ್ಲಿನ ಮೇಲೆ ಶ್ರೀರಾಮ ಎಂದು ಬರೆದು ರಾಮಸೇತು ನಿರ್ಮಿಸಲಾಯಿತು. ಮಂದಿರ ನಿರ್ಮಾಣಕ್ಕಾಗಿ ಶ್ರೀರಾಮನ ಹೆಸರು ಹೊತ್ತ ಇಟ್ಟಿಗೆಗಳು ಇಲ್ಲಿಗೆ ಬಂದವು. ಇದು ನ ಭೂತೋ ನ ಭವಿಷ್ಯತಿ. ನಮ್ಮ ಸಾಮೂಹಿಕ ಶಕ್ತಿ ಇಡೀ ಜಗತ್ತಿಗೆ ಅಧ್ಯಯನದ ವಿಷಯ. ರಾಮನು ತೇಜಕ್ಕೆ ಸೂರ್ಯ, ಕ್ಷಮೆಗೆ ಭೂಮಿ, ಬುದ್ಧಿಗೆ ಗುರು, ಯಶಸ್ಸಿನಲ್ಲಿ ಇಂದ್ರಿಗೆ ಸಮಾನ. ಸತ್ಯವನ್ನು ಆಧರಿಸಿದ ಬದುಕು ಜೀವಿಸಿ ಎಂಬುದೇ ರಾಮನ ಜೀವನ ನಮಗೆ ಕೊಡುವ ಸಂದೇಶ. ರಾಮನ ಆಡಳಿತಕ್ಕೆ ಆಧಾರವಾಗಿದ್ದ ಅಂಶ ಸಾಮಾಜಿಕ ಸಾಮರಾಸ್ಯ. ವಿಶ್ವಾಸದ ಆಡಳಿತ ರಾಮನದು. ರಾಮನ ಅಭೂತ ವ್ಯಕ್ತಿತ್ವ, ಧೈರ್ಯ ಹಲವು ಯುಗಗಳಿಗೆ ಪ್ರೇರಣಾದಾಯಕ ಎಂದು ಮೋದಿ ಹೇಳಿದರು.

ರಾಮನು ಎಲ್ಲ ಪ್ರಜೆಗಳನ್ನು ಒಂದೇ ರೀತಿ ಕಾಣುತ್ತಿದ್ದ. ಬಡವರು ಮತ್ತು ದೀನ, ದುಃಖಿತರನ್ನು ಹೆಚ್ಚು ಪ್ರೀತಿಯಿಂದ ಕಾಣುತ್ತಿದ್ದ. ಭಾರತದ ನಂಬಿಕೆಯಲ್ಲಿ, ಆದರ್ಶಗಳಲ್ಲಿ, ದಿವ್ಯತೆಯಲ್ಲಿ, ದರ್ಶನದಲ್ಲಿ ರಾಮನಿದ್ದಾನೆ. ರಾಮನ ಕಥೆ ಹಲವು ಮಹಾಕಾವ್ಯಗಳಿಗೆ ವಸ್ತು, ಅದೇ ರಾಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧಿಜಿಯವರ ಭಜನೆಗಳ ಮೂಲಕ ಜನರಿಗೆ ಪ್ರೇರಣೆ ನೀಡಿದ. ವಿವಿಧತೆಯಲ್ಲಿ ಏಕತೆ ಎನ್ನುವುದು ಭಾರತದ ಜೀವನ ಚರಿತ್ರೆ. ತಮಿಳು, ಕನ್ನಡ, ತೆಲುಗು, ಒಡಿಶಾ, ಮಲಯಾಳಂ, ಕಾಶ್ಮೀರಿ, ಬಾಂಗ್ಲಾ ಭಾಷೆಗಳಲ್ಲಿ ರಾಮಾಯಣಗಳು ಸ್ವತಂತ್ರ ಕೃತಿಗಳಾಗಿವೆ. ಗುರುಗೋವಿಂದ ಸಿಂಗ್‌ರು ಸ್ವತಃ ರಾಮಾಯಣ ಬರೆದಿದ್ದರು. ದೇಶ ವಿವಿಧೆಡೆ ವಿವಿಧ ರೀತಿಯ ರಾಮಾಯಣ ಕೃತಿಗಳು ಇವೆ. ರಾಮ ಎಲ್ಲೆಡೆ ಇದ್ದೇನೆ. ವಿವಿಧತೆಯಲ್ಲಿ ಏಕತೆ ಎನ್ನುವುದಕ್ಕೆ ರಾಮನೇ ಪ್ರತೀಕ ಎಂದು ಮೋದಿ ಹೇಳಿದರು.

ಮೋದಿ ಭಾಷಣದಿಂದ ಇನ್ನಷ್ಟು...

* ವಿಶ್ವದಲ್ಲಿ ಅತಿಹೆಚ್ಚು ಮುಸ್ಲಿಮರು ಇರುವ ಇಂಡೊನೇಷ್ಯಾದಲ್ಲಿಯೂ ಸಾಕಷ್ಟು ರಾಮಾಯಣ ಕೃತಿಗಳಿವೆ. ರಾಮ ಇಂದಿಗೂ ಅಲ್ಲಿ ಪೂಜನೀಯ. ಕಾಂಬೋಡಿಯಾ, ವಾಲೋ, ಮಲೇಷ್ಯಾ, ಥಾಯ್ಲೆಂಡ್, ಇರಾನ್ ಮತ್ತು ಚೀನಾಗಳಲ್ಲಿಯೂ ರಾಮಾಯಣಗಳಿವೆ. ರಾಮ ಕಥೆಯಲ್ಲಿ ಭಕ್ತಿಯಿಂದ ನೆನೆಯುತ್ತಾರೆ ಆ ಜನರು. ನೇಪಾಳದಲ್ಲಿ ರಾಮನಿಗಿಂತಲೂ ಸೀತೆಯ ಭಕ್ತರು ಹೆಚ್ಚು. ಅವರು ಸೀತೆಯೊಂದಿಗೆ ಭಾವುಕ ನಂಟು ಹೊಂದಿದ್ದಾರೆ

* ಭಾರತದಂತೆಯೇ ವಿಶ್ವದ ಹಲವು ದೇಶಗಳಲ್ಲಿ, ಹಲವು ಭಾಷೆಗಳಲ್ಲಿ ಇಂದಿಗೂ ರಾಮಾಯಣ ಪ್ರಚಲಿತದಲ್ಲಿದೆ. ಇವರೆಲ್ಲರಿಗೂ ರಾಮಮಂದಿರ ನಿರ್ಮಾಣದಿಂದ ಸಂತೋಷವಾಗುತ್ತಿದೆ.

ಇದನ್ನೂ ಓದಿ: 

* ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ದೇಶದ ಭವ್ಯ ಸಂಸ್ಕೃತಿಯ ಪ್ರತೀಕವಾಗಲಿದೆ. ಇದು ಅನಂತ ಕಾಲದವರೆಗೆ ಪೂರ್ಣ ಮಾನವ ಕುಲಕ್ಕೆ ಪ್ರೇರಣೆಯಾಗಲಿದೆ. ಶ್ರೀರಾಮ ಮತ್ತು ರಾಮ ಮಂದಿರದ ಸಂದೇಶವನ್ನು ಪೂರ್ಣ ಜಗತ್ತಿಗೆ ನಿರಂತರ ತಲುಪುವಂತೆ ಮಾಡುವುದು ಹೇಗೆ? ಇದು ನಮ್ಮ ಮುಂದಿನ ತಲೆಮಾರಿನ ವಿಶೇಷ ಜವಾಬ್ದಾರಿ

* ದೇಶದಲ್ಲಿ ರಾಮ ಎಲ್ಲೆಲ್ಲಿ ಓಡಾಡಿದ್ದನೋ ಅವೆಲ್ಲವನ್ನೂ ರಾಮ ಸರ್ಕೀಟ್ ಹೆಸರಿನಲ್ಲಿ ಜೋಡಿಸಲಾಗುತ್ತಿದೆ. ಅಯೋಧ್ಯೆ ರಾಮನ ಸ್ವಂತದ, ಪ್ರೀತಿಯ ನಗರ. ರಾಮನ ಅಯೋಧ್ಯೆಯ ಭವ್ಯತೆ, ದಿವ್ಯತೆ ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಂಡಿದ್ದೇನೆ. ಇಡೀ ಜಗತ್ತಿನಲ್ಲಿ ರಾಮನಂಥ ರಾಜ ಇರಲಿಲ್ಲ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ರಾಮನ ಆಡಳಿತದಲ್ಲಿ ಯಾರೂ ದುಃಖಿಗಳು, ಬಡವರು ಇರಲಿಲ್ಲ. ಎಲ್ಲ ಸ್ತ್ರೀ–ಪುರುಷರು ಸಮಾನ ಸುಖಿಗಳಾಗಿದ್ದರು ಎನ್ನುವುದು ರಾಮನ ಆಡಳಿತದ ವೈಭವ. ರಾಮನ ಆಡಳಿತದಲ್ಲಿ ರೈತರು, ಪಶುಪಾಲಕರು ಖುಷಿಯಾಗಿ ಜೀವನ ಸಾಗಿಸುತ್ತಿದ್ದರು. ವೃದ್ಧರು, ಬಾಲಕರು, ರೋಗಿಗಳಿಗೂ ರಾಮನ ಆಡಳಿತದಲ್ಲಿ ಬೆಚ್ಚನೆ ರಕ್ಷೆಯಿತ್ತು.

* ‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ (ತಾಯಿ ಮತ್ತು ಸ್ವದೇಶ ಸ್ವರ್ಗಕ್ಕಿಂತ ಹೆಚ್ಚು) ಎನ್ನವುದು ರಾಮನ ಸಂದೇಶ. ನಮ್ಮ ದೇಶ ಎಷ್ಟು ಬೆಳೆದರೂ ನೀತಿಯ ಹಾದಿಯಿಂದ ಹಿಂದೆ ಸರಿಯುವುದಿಲ್ಲ. ಇದು ರಾಮನ ಆದರ್ಶ. ರಾಷ್ಟ್ರಪಿತ ಮಹಾತ್ಮಗಾಂಧಿ ಇದೇ ಸೂತ್ರಗಳ ಆಧರಿಸಿದ ರಾಮರಾಜ್ಯದ ಕನಸು ಕಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು