ಭಾನುವಾರ, ಜನವರಿ 16, 2022
28 °C

ನೊಯಿಡಾ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ನ. 25ರಂದು ಪ್ರಧಾನಿ ಶಂಕುಸ್ಥಾಪನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉತ್ತರಪ್ರದೇಶದ ಜೇವರ್‌ನಲ್ಲಿ  ನೊಯಿಡಾ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಇದೇ 25ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇದರಿಂದಾಗಿ ಉತ್ತರಪ್ರದೇಶವು ಶೀಘ್ರವೇ ಐದು ಅಂತರರಾಷ್ಟ್ರೀಯ ವಿಮಾನನಿಲ್ದಾಣಗಳನ್ನು ಹೊಂದಿದ ಏಕೈಕ ರಾಜ್ಯವಾಗಲಿದೆ. ರಾಜ್ಯದಲ್ಲಿ ಈಗಾಗಲೇ ಕುಶಿನಗರ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಉದ್ಘಾಟನೆಗೊಂಡಿದೆ. ಅಯೋಧ್ಯೆಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣ ಹಂತದಲ್ಲಿದೆ.

ಇದೇ 25ರಂದು ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಅವರು ನೊಯಿಡಾ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಅಡಿಗಲ್ಲು ಹಾಕುವರು ಎಂದು ಪ್ರಧಾನಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ. ವಿಮಾನನಿಲ್ದಾಣದ ಮೊದಲ ಹಂತದ ಅಭಿವೃದ್ಧಿಯು ₹ 10,050 ಕೋಟಿ ವೆಚ್ಚದಲ್ಲಿ ಆಗಲಿದೆ.

ಮೊದಲ ಹಂತದಲ್ಲಿ 1,300 ಹೆಕ್ಟೇರ್‌ಗೂ ಹೆಚ್ಚು ಜಾಗ ಬಳಸಲಾಗುವುದು. ಈ ವಿಮಾನನಿಲ್ದಾಣವು ವರ್ಷದಲ್ಲಿ 1.2 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸುವ ಸಾಮರ್ಥ್ಯ ಹೊಂದಿರಲಿದೆ ಮತ್ತು ನಿರ್ಮಾಣ ಕಾಮಗಾರಿಯು 2024ರ ವೇಳೆಗೆ ಪೂರ್ಣಗೊಳ್ಳಲಿದೆ.

ಭೂ ಸ್ವಾಧೀನ ಪ್ರಕ್ರಿಯೆ ಮತ್ತು ಸಂತ್ರಸ್ತರ ಪುನರ್ವಸತಿ ಕಾರ್ಯ ಪೂರ್ಣಗೊಂಡಿದೆ. ದೆಹಲಿ– ಎನ್‌ಸಿಆರ್ ವಲಯದಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ವಿಮಾನನಿಲ್ದಾಣ ಇದಾಗಿದ್ದು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ದಟ್ಟಣೆಯನ್ನು ಕಡಿಮೆಗೊಳಿಸಲಿದೆ. ದೆಹಲಿ, ನೊಯಿಡಾ, ಗಾಜಿಯಾಬಾದ್‌, ಅಲೀಗಡ, ಆಗ್ರಾ, ಫರೀದಾಬಾದ್‌ ಮತ್ತು ಸುತ್ತಲಿನ ಪ್ರದೇಶಗಳ ಜನರಿಗೆ ಈ ವಿಮಾನನಿಲ್ದಾಣದಿಂದ ಅನುಕೂಲ ಆಗಲಿದೆ ಎಂದು ಪ್ರಧಾನಮಂತ್ರಿಯವರ ಕಚೇರಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು