ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಣಸಿ | ಪ್ರಧಾನಿಯಿಂದ ಮಧ್ಯರಾತ್ರಿ ನಗರ ಪ್ರದಕ್ಷಿಣೆ; ಕಾಮಗಾರಿ ಪರಿಶೀಲನೆ

ಕಾಶಿ ವಿಶ್ವನಾಥ ಧಾಮ, ರೈಲ್ವೆ ನಿಲ್ದಾಣಕ್ಕೆ ಭೇಟಿ
Last Updated 14 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಧ್ಯರಾತ್ರಿ 1 ಗಂಟೆಯ ಹೊತ್ತಿನಲ್ಲಿ ಕಾಶಿ ವಿಶ್ವನಾಥ ಧಾಮ ಮತ್ತು ಬನಾರಸ್ ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೊತೆಗಿದ್ದರು.

ರಾತ್ರಿ ಮಾಡಲಾದ ಟ್ವೀಟ್‌ನಲ್ಲಿ, ‘ದೇಗುಲ ನಗರಿಯಲ್ಲಿ ನಡೆಯುತ್ತಿರುವ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಧಾನಿ ಪರಿಶೀಲನೆ ನಡೆಸಿದರು. ಈ ಪವಿತ್ರ ಜಾಗದಲ್ಲಿ ಅತ್ಯುತ್ತಮ ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆ’ ಎಂದು ಹೇಳಲಾಗಿದೆ.

ಸೋಮವಾರ ಬೆಳಿಗ್ಗೆ ಕಾಲಭೈರವ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಮಧ್ಯಾಹ್ನ ಉದ್ಘಾಟಿಸಿದರು. ಸಂಜೆ ಗಂಗಾ ಆರತಿಯಲ್ಲಿ ಪಾಲ್ಗೊಂಡ ಅವರು, ತಡರಾತ್ರಿ ವೇಳೆ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.

ಬೂದು ಬಣ್ಣದ ಕುರ್ತಾ, ಪೈಜಾಮ, ಕಪ್ಪು ಕೋಟು ಹಾಗೂ ಮಫ್ಲರ್ ಧರಿಸಿದ್ದ ಅವರು ರಸ್ತೆಗಿಳಿದರು. ಕಾರಿಡಾರ್ ಪ್ರದೇಶದಲ್ಲಿ ಓಡಾಡಿದರು. ಮೋದಿ ಅವರು ಬನಾರಸ್ ರೈಲು ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಲಾಯಿತು. ‘ರೈಲ್ವೆ ಸಂಪರ್ಕ ಹೆಚ್ಚಿಸುವುದು ಹಾಗೂ ಸ್ವಚ್ಛ, ಸುಧಾರಿತ, ಪ್ರಯಾಣಿಕ ಸ್ನೇಹಿ ರೈಲು ನಿಲ್ದಾಣ ರೂಪಿಸುವ ಯತ್ನ ನಡೆಯುತ್ತಿದೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ನವೀಕೃತ ನಿಲ್ದಾಣಕ್ಕೆ ಭೇಟಿ ನೀಡಿದ ಚಿತ್ರವನ್ನು ರಾತ್ರಿ 1 ಗಂಟೆಗೆ ಟ್ವೀಟ್ ಮಾಡಲಾಯಿತು.

ಶಿಕ್ಷಣ, ಕೌಶಲಕ್ಕೆ ಆದ್ಯತೆ ನೀಡಿ:ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿಯ ಕಡೆಗೆ ಜನರು ಹೆಚ್ಚು ಗಮನ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕರೆ ನೀಡಿದರು.ಸ್ವರವೇದ ಮಹಾಮಂದಿರದ ಸದ್ಗುರು ಸದಾಫಲದೇವ ವಿಹಂಗಮ ಯೋಗ ಸಂಸ್ಥಾನದ 98ನೇ ವರ್ಷಾಚರಣೆಯಲ್ಲಿ ಅವರು ಮಾತನಾಡಿದರು.

ಅಯೋಧ್ಯೆ: ಮುಖ್ಯಮಂತ್ರಿಗಳ ಭೇಟಿ ಇಂದು
ಅಯೋಧ್ಯೆ: ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಇಲ್ಲಿನ ರಾಮಜನ್ಮಭೂಮಿ ತಾತ್ಕಾಲಿಕ ಮಂದಿರಕ್ಕೆ ಬುಧವಾರ ಭೇಟಿ ನೀಡಲಿದ್ದಾರೆ. ಮಂಗಳವಾರ ಲಖನೌ ತಲಿಪಿದ್ದು, ಬುಧವಾರ 11 ಗಂಟೆಗೆ ಅಯೋಧ್ಯೆಗೆ ಬರಲಿದ್ದಾರೆ.ಮಧ್ಯಾಹ್ನ 2 ಗಂಟೆ ವೇಳೆಗೆ ಹುನುಮಾನ್‌ಗಡಿ ದೇವಸ್ಥಾನ ಹಾಗೂ ರಾಮಜನ್ಮಭೂಮಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ.

ಹಿಮಾಚಲ ಪ್ರದೇಶ ಉತ್ತಾರಾಖಂಡ, ಅರುಣಾಚಲ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ತ್ರಿಪುರಾ, ಗುಜರಾತ್, ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿಗಳು, ಬಿಹಾರ ಹಾಗೂ ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿಗಳೂ ಭೇಟಿ ನೀಡಲಿದ್ದಾರೆ. ಕರ್ನಾಟಕ, ಸಿಕ್ಕಿಂ, ಮೇಘಾಲಯ, ಮಿಜೋರಾಂ, ಪುದುಚೇರಿ ಮುಖ್ಯಮಂತ್ರಿಗಳೂ ಭೇಟಿ ನೀಡುವ ಸಾಧ್ಯತೆಯಿದೆ.

*

ಚುನಾವಣಾ ದೃಷ್ಟಿಯಿಂದ ಅರ್ಧಂಬರ್ಧ ಆಗಿರುವ ಕಾಮಗಾರಿಗಳನ್ನು ಉದ್ಘಾಟಿಸುವುದರಿಂದ ಬಿಜೆಪಿ ನೆಲೆಯೇನೂ ಗಟ್ಟಿಗೊಳ್ಳುವುದಿಲ್ಲ.
-ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

*

ಪ್ರಧಾನಿ ನರೇಂದ್ರ ಮೋದಿ ಅವರ ರೀತಿ, ನಾವು ಚುನಾವಣೆ ಸಮಯದಲ್ಲಿ ಮಾತ್ರ ಗಂಗಾ ನದಿಯಲ್ಲಿ ಮುಳುಗು ಹಾಕುವುದಿಲ್ಲ.
-ಮಮತಾ ಬ್ಯಾನರ್ಜಿ, ಟಿಎಂಸಿ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT