ಬುಧವಾರ, ಜೂನ್ 23, 2021
29 °C
ಸರ್ಕಾರದ ಕಾರ್ಯವೈಖರಿಗೆ ‘ದಿ ಲ್ಯಾನ್ಸೆಟ್‌’ನಲ್ಲಿ ತೀವ್ರ ಟೀಕೆ

ಕೋವಿಡ್‌ ನಿರ್ವಹಣೆ: ಟೀಕೆ, ಚರ್ಚೆ ಹತ್ತಿಕ್ಕುವ ಪ್ರಧಾನಿ ಮೋದಿ ಯತ್ನ ಅಕ್ಷಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೋವಿಡ್‌–19ರ ಎರಡನೇ ಅಲೆಯನ್ನು ನಿಭಾಯಿಸಿದ್ದರ ಬಗ್ಗೆ ಅಂತರರಾಷ್ಟ್ರೀಯ ವೈದ್ಯಕೀಯ ನಿಯತ ಕಾಲಿಕ ‘ದಿ ಲ್ಯಾನ್ಸೆಟ್‌’ನಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

‘ಬಿಕ್ಕಟ್ಟಿನ ಸಂದರ್ಭದಲ್ಲಿ ಟೀಕೆ ಮತ್ತು ಮುಕ್ತ ಚರ್ಚೆಯನ್ನು ಹತ್ತಿಕ್ಕುವ ಮೋದಿ ಅವರ ಯತ್ನಗಳು ಅಕ್ಷಮ್ಯ’ ಎಂದು ನಿಯತಕಾಲಿಕವು ಅಭಿಪ್ರಾಯಪಟ್ಟಿದೆ. 

‘ಮೋದಿ ನೇತೃತ್ವದ ಸರ್ಕಾರವು ಕೋವಿಡ್‌ ಸಾಂಕ್ರಾಮಿಕವನ್ನು ನಿಯಂತ್ರಿಸುವುದಕ್ಕಿಂತ ಟ್ವಿಟರ್‌ನಲ್ಲಿ ಪ್ರಕಟವಾಗುವ ಟೀಕೆಯನ್ನು ಅಳಿಸಿ ಹಾಕಲು ಹೆಚ್ಚು ಉಮೇದು ತೋರಿದೆ’ ಎಂದು ‘ದಿ ಲ್ಯಾನ್ಸೆಟ್‌’ನ ಸಂ‍ಪಾದಕೀಯ ದಲ್ಲಿ ಹೇಳಲಾಗಿದೆ. 

ಭಾರತವು ಕೋವಿಡ್‌ ಸಾಂಕ್ರಾ ಮಿಕದ ವಿರುದ್ಧದ ಹೋರಾಟದ ಕೊನೆಯ ಹಂತದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಎರಡನೇ ಅಲೆಯ ಆರಂಭಕ್ಕೆ ಮುನ್ನವೇ ಹೇಳಿದ್ದರು. ಕೆಲವು ತಿಂಗಳು ಕೋವಿಡ್‌ ಪ್ರಕರಣಗಳು ಕಡಿಮೆ ಇದ್ದವು. ಹಾಗಾಗಿ, ಭಾರತವು ಕೋವಿಡ್‌ ಅನ್ನು ಹಿಮ್ಮೆಟ್ಟಿಸಿತು ಎಂಬುದೇ ಸರ್ಕಾರದ ಭಾವನೆಯಾಗಿತ್ತು. ಎರಡನೇ ಅಲೆ ಮತ್ತು ರೂಪಾಂತರಿತ ತಳಿಗಳ ಅಪಾಯದ ಬಗ್ಗೆ ಪರಿಣತರು ಪದೇ ಪದೇ ಎಚ್ಚರಿಕೆ ನೀಡಿದ್ದರೂ ಸರ್ಕಾರ ಅದಕ್ಕೆ ಕಿವಿಗೊಡಲಿಲ್ಲ ಎಂದು ಹೇಳಲಾಗಿದೆ. 

‘ವ್ಯಾಪಕವಾಗಿ ಸೋಂಕು ಹರಡಲು ಕಾರಣವಾಗುವ, ಭಾರಿ ಸಂಖ್ಯೆಯಲ್ಲಿ ಜನರು ಸೇರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ’ ಎಂದು ಕುಂಭ ಮೇಳವನ್ನು ಉಲ್ಲೇಖಿಸಿ ಹೇಳಲಾಗಿದೆ. ನಾಲ್ಕು ರಾಜ್ಯಗಳು ಮತ್ತು ಪುದುಚೇರಿ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಕೋವಿಡ್‌ ತಡೆ ಮಾರ್ಗಸೂಚಿ ಪಾಲನೆ ಯಾದದ್ದು ಕಾಣಿಸಲೇ ಇಲ್ಲ ಎಂದೂ ಸಂಪಾದಕೀಯದಲ್ಲಿ ಟೀಕಿಸಲಾಗಿದೆ. 

ಲಸಿಕೆ ನೀತಿಯನ್ನು ತೀವ್ರ ವಿಮರ್ಶೆಗೆ ಒಳಪಡಿಸಲಾಗಿದೆ. ರಾಜ್ಯಗಳ ಜತೆಗೆ ಸಮಾಲೋಚನೆ ನಡೆಸದೆಯೇ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ನೀಡುವ ನಿರ್ಧಾರ ಕೈಗೊಳ್ಳಲಾಯಿತು. ಇದರಿಂದಾಗಿ ಲಸಿಕೆ ಕೊರತೆಯಾಗಿ ಜನರಲ್ಲಿ ಗೊಂದಲ ಮೂಡಿತು ಎಂದು ವಿಶ್ಲೇಷಿಸಲಾಗಿದೆ.

‘ಭಾರತದಲ್ಲಿ ಕೋವಿಡ್‌ನಿಂದಾಗಿ ಆಗಸ್ಟ್‌ 1ರ ಹೊತ್ತಿಗೆ ಒಂದು ಕೋಟಿ ಜನರು ಸಾಯಬಹುದು ಎಂದು ದಿ ಇನ್ಸ್‌ಟಿಟ್ಯೂಟ್‌ ಫಾರ್ ಹೆಲ್ತ್‌ ಮೆಟ್ರಿಕ್ಸ್‌ ಎಂಡ್‌ ಇವ್ಯಾಲುಯೇಷನ್‌ ಅಂದಾಜಿಸಿದೆ. ಹಾಗೇನಾದರೂ ಆದರೆ, ಸ್ವಯಂಕೃತ ರಾಷ್ಟ್ರೀಯ ಮಹಾ ದುರಂತದ ಹೊಣೆಯನ್ನು ಮೋದಿ ನೇತೃತ್ವದ ಸರ್ಕಾರ ಹೊರಬೇಕಾಗುತ್ತದೆ’ ಎಂಬ ಎಚ್ಚರಿಕೆಯೂ ಸಂಪಾದಕೀಯದಲ್ಲಿ ಇದೆ. 

ಕೋವಿಡ್‌ ನಿಯಂತ್ರಣದಲ್ಲಿ ಆರಂಭದಲ್ಲಿ ಸಿಕ್ಕ ಯಶಸ್ಸನ್ನು ಭಾರತವು ಕೈಚೆಲ್ಲಿತು. ಕೇಂದ್ರ ಸರ್ಕಾರದ ಕೋವಿಡ್‌ ಕಾರ್ಯಪಡೆಯು ಏಪ್ರಿಲ್‌ ವರೆಗೆ ಹಲವು ತಿಂಗಳಿನಿಂದ ಸಭೆಯೇ ಸೇರಿರಲಿಲ್ಲ. ಇದರ ಪರಿಣಾಮ ಕಣ್ಣ ಮುಂದೆಯೇ ಇದೆ. ಬಿಕ್ಕಟ್ಟು ತೀವ್ರ ಗೊಂಡ ಈ ಸಂದರ್ಭದಲ್ಲಿ ಅದಕ್ಕೆ ತೋರಬೇಕಾದ ಪ್ರತಿಕ್ರಿಯೆಯನ್ನು ಮರುರೂಪಿಸಬೇಕಾದ ಅಗತ್ಯ ಇದೆ. ಈ ಪ್ರಯತ್ನದ ಯಶಸ್ಸು ಕೂಡ ಸರ್ಕಾರ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದು, ಹೊಣೆಗಾರಿಕೆಯ ನಾಯಕತ್ವ, ಪಾರದರ್ಶಕತೆ, ವೈಜ್ಞಾನಿಕವಾದ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆ ಅನುಷ್ಠಾನದ ಮೇಲೆ ಅವಲಂಬಿತ ಎಂದು ‘ದಿ ಲ್ಯಾನ್ಸೆಟ್‌’ ಹೇಳಿದೆ. ‌

ಲ್ಯಾನ್ಸೆಟ್‌ ಸಲಹೆಗಳು

* ಅವ್ಯವಸ್ಥೆಗೊಂಡಿರುವ ಲಸಿಕೆ ನೀಡಿಕೆ ಅಭಿಯಾನವನ್ನು ವ್ಯವಸ್ಥಿತಗೊಳಿಸಿ

* ಲಸಿಕೆ ಅಭಿಯಾನ ತ್ವರಿತಗೊಳಿಸಿ

* ಜನರಿಗೆ ಸಕಾಲಕ್ಕೆ ನಿಖರವಾದ ಮಾಹಿತಿ ನೀಡಿ, ಹರಡುವಿಕೆ ತಗ್ಗಿಸಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು