ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಮ ವರ್ಗದತ್ತ ಪ್ರಧಾನಿ ಚಿತ್ತ

Last Updated 29 ಜನವರಿ 2023, 19:26 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಧ್ಯಮ ವರ್ಗದ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳು ಹಾಗೂ ಅವುಗಳು ಕಲ್ಪಿಸಿರುವ ಅನುಕೂಲಗಳ ಮಾಹಿತಿಯನ್ನು ಆ ವರ್ಗಕ್ಕೆ ತಲುಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಿಗೆ ಭಾನುವಾರ ಸೂಚಿಸಿದರು. ಬುಧವಾರ ಮಂಡನೆಯಾಗಲಿರುವ ಬಜೆಟ್‌ಗೂ ಮುನ್ನ, ಮಂತ್ರಿ ಪರಿಷತ್ತಿನ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರದ ಯೋಜನೆಗಳು ಬಡವರು ಹಾಗೂ ಸಮಾಜದ ಅಂಚಿನಲ್ಲಿರುವ ಸಮುದಾಯಗಳಿಗೆ ಅನುಕೂಲ ಮಾಡಿಕೊಟ್ಟಿವೆ. ಹಾಗೆಯೇ ಮಧ್ಯಮ ವರ್ಗದವರ ಜೀವನ ಸುಧಾರಣೆಗೂ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಈ ಯೋಜನೆಗಳು ಹಲವು ರೀತಿಯಲ್ಲಿ ನೆರವಾಗಿವೆ ಎಂಬ ವಾಸ್ತವವನ್ನು ಮಧ್ಯಮ ವರ್ಗದ ಜನರಿಗೆ ವಿವರಿಸಬೇಕು ಎಂದು ಸಚಿವರು ಸೂಚಿಸಿದರು.

ಈ ವರ್ಷದ ಮೊದಲ ಮಂತ್ರಿ ಪರಿಷತ್ತಿನ ಸಭೆ ಇದಾಗಿದ್ದು, ಪ್ರಧಾನಿ ಮಂಡಿಸಿದ ವಿಷಯಗಳನ್ನು ಒಳಗೊಂಡ ಪ್ರತಿಗಳನ್ನು ಸಚಿವರಿಗೆ ಹಂಚಲಾಯಿತು. ದೇಶದ 75ನೇ ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ, ಬ್ರಿಟಿಷರ ಕಾಲದ ವಿಷಯಗಳು ಹಾಗೂ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಪ್ರಧಾನಿ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಮೂವರು ಕಾರ್ಯದರ್ಶಿಗಳು ಸಭೆಯಲ್ಲಿ ವಿಷಯ ಮಂಡನೆ ಮಾಡಿದರು. ಎಂಟು ವರ್ಷಗಳ ಅವಧಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಮೋದಿ ನೇತೃತ್ವದ ಸರ್ಕಾರದ ಒಟ್ಟಾರೆ ಕೆಲಸಗಳನ್ನು ಒಳಗೊಂಡ ವಿಷಯವನ್ನು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಮಂಡಿಸಿದರು. ಈ ವಿಸ್ತೃತ ವಿಷಯ ಮಂಡನೆಯು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಒತ್ತು ನೀಡಿತು. ಹಲವು ಐಐಟಿ, ಐಐಎಂ ಹಾಗೂ ಐಐಎಸ್‌ಸಿ ಕೇಂದ್ರಗಳನ್ನು ದೇಶದ ವಿವಿಧೆಡೆ ಸ್ಥಾಪಿಸಲಾಗಿದೆ ಎಂದು ಗೌಬಾ ಹೇಳಿದರು.

ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣ ಸೇರಿದಂತೆ ಎಲ್ಲ ವಿಭಾಗದಲ್ಲಿಯೂ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಳವಾಗಿದ್ದು, ಮೂಲಸೌಕರ್ಯಗಳು ಅಭಿವೃದ್ಧಿಯಾಗಿವೆ ಎಂದು ತಿಳಿಸಿದರು.

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಕಾರ್ಯದರ್ಶಿ ಅನುರಾಗ್ ಜೈನ್ ಅವರು ತಮ್ಮ ವಿಷಯ ಮಂಡನೆ ವೇಳೆ, ಸರ್ಕಾರ ಆರಂಭಿಸಿರುವ ವಿವಿಧ ಯೋಜನೆಗಳ ಮೇಲೆ ಬೆಳಕು ಚೆಲ್ಲಿದರು. ಕಾಮಗಾರಿ ಪೂರ್ಣಗೊಂಡಿರುವ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಿತಿಗತಿಯ ಮಾಹಿತಿಯನ್ನು ಅವರು ಒದಗಿಸಿದರು.

ಕೇಂದ್ರ ಸರ್ಕಾರದ ಕೆಲಸಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಹೇಗೆ ಪ್ರಚುರಪಡಿಸಬಹುದು ಎಂಬುದನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು
ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT