ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಗೃಹಸಚಿವರಿಗೆ ಉತ್ತರದಾಯಿಯಲ್ಲ: ತೃಣಮೂಲ ಕಾಂಗ್ರೆಸ್ ಸಂಸದರ ಪ್ರತ್ಯುತ್ತರ

ದೂರುಗಳು ಕೇಂದ್ರಕ್ಕೆ ರವಾನೆ: ಎಚ್ಚರಿಕೆ
Last Updated 12 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಕೋಲ್ಕತ್ತ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ಪಡೆಯಲು ಪಶ್ಚಿಮ ಬಂಗಾಳದ ಇಬ್ಬರು ಅಧಿಕಾರಿಗಳನ್ನು ಕೇಂದ್ರ ಗೃಹ ಕಾರ್ಯದರ್ಶಿ ದೆಹಲಿಗೆ ಕರೆಸಿಕೊಂಡಿರುವುದು ವಿವಾದ ಸೃಷ್ಟಿಸಿದೆ.

‘ಗೃಹಸಚಿವರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಹಿಂದೆ ರಾಜಕೀಯ ಉದ್ದೇಶವಿದೆ’ ಎಂದು ತೃಣಮೂಲ ಕಾಂಗ್ರೆಸ್‌ನ ಸಂಸದ ಕಲ್ಯಾಣ್‌ ಬ್ಯಾನರ್ಜಿ ಆರೋಪಿಸಿದ್ದಾರೆ.

ಡಿ.14ರಂದು ದೆಹಲಿಗೆ ಬಂದು ಘಟನೆಯ ಬಗ್ಗೆ ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ವಿವರಣೆ ನೀಡುವಂತೆ ಕೇಂದ್ರದ ಗೃಹ ಸಚಿವಾಲಯವು ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ಅಲಪನ್‌ ಬಂದೊಪಾಧ್ಯಾಯ ಹಾಗೂ ಡಿಜಿಪಿ ವೀರೇಂದ್ರ ಅವರಿಗೆ ಶುಕ್ರವಾರ ಸೂಚನೆ ನೀಡಿತ್ತು. ರಾಜ್ಯಪಾಲ ಜಗದೀಪ್‌ ಧನಕರ್‌ ಅವರ ವರದಿಯ ಆಧಾರದಲ್ಲಿ ಈ ಸೂಚನೆ ನೀಡಲಾಗಿದೆ.

ಕೇಂದ್ರದ ನಡೆಯನ್ನು ಆಕ್ಷೇಪಿಸಿ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲ ಅವರಿಗೆ ಪತ್ರ ಬರೆದಿರುವ ಬ್ಯಾನರ್ಜಿ, ‘ಕಾನೂನು ಸುವ್ಯವಸ್ಥೆಯು ರಾಜ್ಯದ ವ್ಯಾಪ್ತಿಯಲ್ಲಿ ಬರುವ ವಿಷಯ. ಹೀಗಿರುವಾಗ, ರಾಜ್ಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವಿವರಣೆ ಪಡೆಯಲು ಅಧಿಕಾರಿಗಳನ್ನು ನೀವು ಕರೆಯಿಸಿಕೊಳ್ಳಲು ಹೇಗೆ ಸಾಧ್ಯ? ರಾಜ್ಯ ಸರ್ಕಾರವು ವಿಧಾನಸಭೆಗೆ ಉತ್ತರ ದಾಯಿಯಾಗಿರುತ್ತದೆಯೇ ವಿನಾ ನಿಮಗಾಗಲಿ, ನಿಮ್ಮ ಸಚಿವರಿಗಾಗಲಿ ಅಲ್ಲ’ ಎಂದಿದ್ದಾರೆ.

‘ನಡ್ಡಾ ಅವರು ಪ್ರಯಾಣಿಸುತ್ತಿದ್ದ ವಾಹನದಲ್ಲಿ ಒಂದು ಪ್ರಕರಣದಲ್ಲಿ ಅಪರಾಧಿ ಎನ್ನಿಸಿಕೊಂಡಿರುವ ಮತ್ತು 59 ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿ ಇದ್ದರು. ಅವರು ರಸ್ತೆ ಬದಿಯಲ್ಲಿ ನಿಂತಿದ್ದ ಟಿಎಂಸಿ ಕಾರ್ಯಕರ್ತರತ್ತ ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ್ದರು’ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.

***

ಅಮಿತ್‌ ಶಾ ಅವರ ಸೂಚನೆಯ ಮೇರೆಗೆ ಕಾನೂನನ್ನು ನದಿಗೆ ಎಸೆಯಲಾಗಿದೆ. ಪಶ್ಚಿಮ ಬಂಗಾಳದಲ್ಲಿ ತುರ್ತು ಪರಿಸ್ಥಿತಿ ಹೇರುವ ಪರೋಕ್ಷ ಪ್ರಯತ್ನ ನಡೆದಿದೆ.

- ಕಲ್ಯಾಣ್‌ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್‌ನ ಸಂಸದ

***

ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆ ದಿರುವುದು ಎಲ್ಲರಿಗೂ ತಿಳಿದಿದೆ. ಕಲ್ಯಾಣ ಬ್ಯಾನರ್ಜಿ ಅವರ ಪತ್ರಕ್ಕಾಗಲಿ, ಹೇಳಿಕೆಗಾಗಲಿ ಮಹತ್ವ ಇಲ್ಲ

-ಕೈಲಾಶ್‌ ವಿಜಯವರ್ಗೀಯ, ಬಿಜೆಪಿ ಪ್ರಧಾನ ಕಾರ್ಯದರ್ಶಿ

***

ದೂರುಗಳು ಕೇಂದ್ರಕ್ಕೆ ರವಾನೆ: ಎಚ್ಚರಿಕೆ

‘ಪಶ್ಚಿಮ ಬಂಗಾಳದ 260 ಪ್ರಕರಣಗಳಿಗೆ ಸಂಬಂಧಿಸಿದಂತೆ 15 ದಿನಗಳೊಳಗೆ ಸ್ಪಷ್ಟನೆಗಳನ್ನು ನೀಡದಿದ್ದರೆ ಅವುಗಳನ್ನು ಮುಂದಿನ ಕ್ರಮಕ್ಕಾಗಿ ಕೇಂದ್ರದ ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗುವುದು’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಶನಿವಾರ ಹೇಳಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಎಂಟು ತಿಂಗಳಲ್ಲಿ 260 ಪ್ರಕರಣಗಳು ದಾಖಲಾಗಿವೆ. ಆದರೆ, ಆ ಕುರಿತ ಮಾಹಿತಿಯನ್ನು ನಮಗೆ ಕಳುಹಿಸಿಲ್ಲ. ಮಹಿಳೆಯರ, ವಿಶೇಷವಾಗಿ ಬುಡಕಟ್ಟು ಸಮುದಾಯದ ಮಹಿಳೆಯರ ಸಾಗಾಣಿಕೆ ಕುರಿತ ದೂರುಗಳ ಬಗ್ಗೆಯೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯವು ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

‘ಡಿಜಿಪಿಯಾಗಲಿ, ಮುಖ್ಯ ಕಾರ್ಯದರ್ಶಿಯಾಗಲಿ ನನ್ನನ್ನು ಭೇಟಿಯಾಗುತ್ತಿಲ್ಲ. ಅವರು ತಮ್ಮ ಕೆಳಗಿನ ಅಧಿಕಾರಿಗಳನ್ನು ಕಳುಹಿಸುತ್ತಾರೆ. ಅವರಿಗೆ ಪ್ರಕರಣಗಳ ಬಗ್ಗೆ ಮಾಹಿತಿಯೆ ಇರುವುದಿಲ್ಲ ಇದು ಚಿಂತೆಗೆ ಕಾರಣವಾಗಿದೆ' ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT