ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UP polls: ಎಸ್‌ಪಿಗೆ ಉಗ್ರರ ಕುಟುಂಬದ ನಂಟಿದೆ ಎಂಬ ಆರೋಪಕ್ಕೆ ಅಖಿಲೇಶ್ ತಿರುಗೇಟು

Last Updated 20 ಫೆಬ್ರುವರಿ 2022, 6:42 IST
ಅಕ್ಷರ ಗಾತ್ರ

ಲಖನೌ: ಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ದಾಳಿ ಪ್ರಕರಣಗಳ ಅಪರಾಧಿಯ ಕುಟುಂಬದೊಂದಿಗೆಸಮಾಜವಾದಿ ಪಕ್ಷವು (ಎಸ್‌ಪಿ) ನಂಟು ಹೊಂದಿದೆ ಎಂದು ಬಿಜೆಪಿ ಮಾಡಿರುವ ಆರೋಪಗಳನ್ನು ಎಸ್‌ಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಲ್ಲಗಳೆದಿದ್ದಾರೆ.

2008ರಲ್ಲಿಅಹಮದಾಬಾದ್‌ನಲ್ಲಿ ನಡೆದ ಬಾಂಬ್ ದಾಳಿ ಪ್ರಕರಣಗಳಲ್ಲಿ 56 ಮಂದಿ ಮೃತಪಟ್ಟು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣದ ಆಪರಾಧಿಯ ತಂದೆ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆರೋಪಿಸಿದ್ದರು.

ಸರಣಿ ಸ್ಫೋಟಪ್ರಕರಣಗಳ ವಿಚಾರಣೆ ನಡೆಸಿದ್ದವಿಶೇಷ ನಿಯೋಜಿತ ನ್ಯಾಯಾಲಯವು,28 ಮಂದಿಯನ್ನು ಖುಲಾಸೆಗೊಳಿಸಿ, 49 ಮಂದಿಯನ್ನು ತಪ್ಪಿತಸ್ಥರು ಎಂದು ಫೆಬ್ರುವರಿ 8 ರಂದುತೀರ್ಪು ನೀಡಿತ್ತು. ಫೆಬ್ರುವರಿ 18ರಂದು, 38 ಅಪರಾಧಿಗಳಿಗೆ ಮರಣದಂಡನೆ, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

ಈ ಸಂಬಂಧ ಲಖನೌ ಮತ್ತು ಕಾನ್ಪುರದಲ್ಲಿ ನಡೆದ ಚುನಾವಣಾ ಸಮಾವೇಶಗಳಲ್ಲಿ ಎಸ್‌ಪಿ ವಿರುದ್ಧ ಗುಡುಗಿದ್ದ ಯೋಗಿ,'ಉಗ್ರನ ತಂದೆ ಸಮಾಜವಾದಿ ಪಕ್ಷದೊಂದಿಗೆ ಸಂಬಂಧ ಹೊಂದಿದ್ದು, ವಿಧಾನಸಭೆ ಚುನಾವಣೆಯಲ್ಲಿ ಆ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ' ಎಂದಿದ್ದರು. ಹಾಗೆಯೇ, ಸಮಾಜವಾದಿ ಪಕ್ಷವು 'ಉಗ್ರರನ್ನು ರಕ್ಷಿಸುತ್ತಿದೆ' ಎಂದು ಗಂಭೀರ ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಖಿಲೇಶ್ ಯಾದವ್, 'ಇಲ್ಲಿ ಸುಳ್ಳು ಹೇಳುವವರು ಇದ್ದಾರೆ ಎಂದರೆ ಅವರು ಬಿಜೆಪಿಯವರೇ ಆಗಿರುತ್ತಾರೆ ಎಂದು ನಾನು ಹಲವು ದಿನಗಳಿಂದ ಹೇಳುತ್ತಿದ್ದೇನೆ.ಬಿಜೆಪಿ ನಾಯಕರು ಸುಳ್ಳನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ' ಎಂದು ತಿರುಗೇಟು ನೀಡಿದ್ದಾರೆ.

ಮುಂದುವರಿದು, ತಮಗೂ, ತಮ್ಮ ಪಕ್ಷಕ್ಕೂ ಉಗ್ರರು ಅಥವಾ ಉಗ್ರರ ಕುಟುಂಬದವರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಎರಡು ಹಂತದ (ಫೆಬ್ರುವರಿ 10 ಮತ್ತು 14ರಂದು) ಮತದಾನ ಈಗಾಗಲೇ ಮುಗಿದಿದೆ. ಇಂದು (ಫೆಬ್ರುವರಿ 20) ಮೂರನೇ ಹಂತದ ಮತದಾನ ನಡೆಯುತ್ತಿದೆ. ಫೆಬ್ರುವರಿ 23, 27, ಮಾರ್ಚ್‌ 3 ಮತ್ತು 7ರಂದು ಉಳಿದ ಹಂತಗಳ ಚುನಾವಣೆ ನಡೆಯಲಿದೆ. ಮಾರ್ಚ್‌ 10 ರಂದು ಫಲಿತಾಂಶ ಪ್ರಕಟವಾಗಲಿದೆ.

2017ರ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಎಸ್‌ಪಿ 47, ಬಿಎಸ್‌ಪಿ 19 ಕ್ಷೇತ್ರಗಳಲ್ಲಿ ಜಯ ಕಂಡರೆ, ಕಾಂಗ್ರೆಸ್ ಕೇವಲ 7 ಕಡೆ ಖಾತೆ ತೆರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT