ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ವಿರೋಧಿ ಚಟುವಟಿಕೆ: ಪುದುಚೇರಿ ಸಚಿವ ನಮಶಿವಾಯಂ ರಾಜೀನಾಮೆ

Last Updated 25 ಜನವರಿ 2021, 11:58 IST
ಅಕ್ಷರ ಗಾತ್ರ

ಪುದುಚೇರಿ: ಪುದುಚೇರಿಯ ಲೋಕೋಪಯೋಗಿ ಖಾತೆ ಸಚಿವ ಎ.ನಮಶಿವಾಯಂ ಅವರು ಸೋಮವಾರ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಕಾರಣ ನಮಶಿವಾಯಂ ಅವರನ್ನು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿತ್ತು. ಹೀಗಾಗಿ ಅವರು ಸಚಿವ ಸ್ಥಾನ ತೊರೆದಿದ್ದಾರೆ.

ಕಾಂಗ್ರೆಸ್‌ನ ಮತ್ತೊಬ್ಬ ಶಾಸಕ ಈ.ತಿಪ್ಪೈನಾಥನ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸ್ಪೀಕರ್‌ ವಿ.ಪಿ.ಶಿವಕೊಲುಂಡು ಅವರನ್ನು ಭೇಟಿಮಾಡಿ ಇಬ್ಬರೂ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ. ಹೀಗಾಗಿ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಬಲ 12ಕ್ಕೆ ಕುಸಿದಿದೆ.

ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಪುದುಚೇರಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಮಶಿವಾಯಂ ಅವರು ಬಿಜೆಪಿ ಸೇರಲು ಮನಸ್ಸು ಮಾಡಿದ್ದಾರೆ. ಹೀಗಾಗಿಯೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ನಮಶಿವಾಯಂ ಅವರು ವಿಳ್ಳಿಯನೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರೆ, ತಿಪ್ಪೈನಾಥನ್‌ ಅವರು ಒಸುಡು ಮೀಸಲು ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿದ್ದರು.

ಪಕ್ಷಾಂತರ ವಿರೋಧಿ ಕಾಯ್ದೆಯಡಿಯಲ್ಲಿ ಹೋದ ವರ್ಷದ ಜುಲೈನಲ್ಲಿ ಕಾಂಗ್ರೆಸ್‌ ಶಾಸಕ ಎನ್‌.ಧನವೇಲು ಅವರನ್ನು ಸ್ಪೀಕರ್‌ ಅನರ್ಹಗೊಳಿಸಿದ್ದರು.

ಕಾಂಗ್ರೆಸ್‌ ಸರ್ಕಾರವು ಡಿಎಂಕೆಯ ಮೂವರು ಶಾಸಕರ ಬಾಹ್ಯ ಬೆಂಬಲದೊಂದಿಗೆ ಪುದುಚೇರಿಯಲ್ಲಿ ಸರ್ಕಾರ ರಚಿಸಿತ್ತು.

‘ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ತುಂಬಾ ನೋವಾಗಿದೆ. ನನ್ನ ತಾಳ್ಮೆಗೂ ಮಿತಿ ಇದೆ. ಇನ್ನು ಮುಂದೆ ಎಲ್ಲವನ್ನೂ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಹೀಗಾಗಿ ಶಾಸಕ ಹಾಗೂ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ’ ಎಂದು ನಮಶಿವಾಯಂ ಅವರು ಭಾನುವಾರ ರಾತ್ರಿ ತಮ್ಮ ಬೆಂಬಲಿಗರೊಂದಿಗೆ ನಡೆಸಿದ ಸಭೆಯಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT