ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌: ಮೋದಿ ಸ್ವಾಗತಕ್ಕೆ ಬಿಜೆಪಿ, ಜೆಎಂಎಂ ನಡುವೆ ಪೋಸ್ಟರ್ ಸಮರ

Last Updated 12 ಜುಲೈ 2022, 14:03 IST
ಅಕ್ಷರ ಗಾತ್ರ

ದೇವಘರ್‌: ಜಾರ್ಖಂಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಡುವೆಪೋಸ್ಟರ್‌ಗಳ ಸಮರ ನಡೆದಿದೆ.

ಪ್ರಧಾನಿ ಅವರು ಮಂಗಳವಾರ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಜಾರ್ಖಂಡ್‌ಗೆ ಭೇಟಿ ನೀಡಿದ್ದರು. ಶೈವ ಪರಂಪರೆಯ ಜ್ಯೋರ್ತಿಲಿಂಗ ದೇವಸ್ಥಾನ ‘ಬೈದ್ಯನಾಥ್ ಧಾಮ’ಕ್ಕೂ ಮೋದಿ ಭೇಟಿ ನೀಡಿದರು.

ಆಡಳಿತಾರೂಢ ಮೈತ್ರಿಕೂಟದ ಪಕ್ಷವಾಗಿರುವ ಜೆಎಂಎಂ ಜೊತೆಗೆ ವಿರೋಧ ಪಕ್ಷವಾದ ಬಿಜೆಪಿ ಕೂಡ ಮೋದಿ ಸ್ವಾಗತಕ್ಕೆ ಪೋಸ್ಟರ್‌ಗಳನ್ನು ಹಾಕಿರುವುದು ಇರಿಸುಮುರಿಸು ಉಂಟು ಮಾಡಿದೆ.

ಜಾರ್ಖಂಡ್‌ನಲ್ಲಿ ಜೆಎಂಎಂ ಪಕ್ಷವು ಕಾಂಗ್ರೆಸ್‌ನೊಂದಿಗೆ ಸೇರಿ ಸರ್ಕಾರ ರಚಿಸಿದೆ. ವಾಡಿಕೆಯಂತೆ ಪ್ರಧಾನಿ ಅಥವಾ ರಾಷ್ಟ್ರಪತಿ ರಾಜ್ಯಗಳಿಗೆ ಬಂದಾಗ ಅವರನ್ನು ಸ್ವಾಗತಿಸಲು ಆಡಳಿತದಲ್ಲಿರುವ ಪಕ್ಷಗಳು ಪೋಸ್ಟರ್ ಮತ್ತು ಬಂಟಿಂಗ್ಸ್‌ಗಳನ್ನು ಹಾಕುವುದು ವಾಡಿಕೆ. ಆದರೆ, ವಿರೋಧ ಪಕ್ಷ ಬಿಜೆಪಿ ಕೂಡಾ ಪೋಸ್ಟರ್‌ಗಳನ್ನು ಹಾಕಿತ್ತು.

ಬಿಜೆಪಿ ಕೇಸರಿ ಬಣ್ಣದ ಪೋಸ್ಟರ್‌ಗಳಲ್ಲಿ ಪ್ರಧಾನಿ ಅವರ ಜೊತೆಗೆ ದೇವಘರ್‌ನ ಜ್ಯೋರ್ತಿಲಿಂಗದ ಚಿತ್ರ ಹಾಕಿದ್ದರೆ, ಜಾರ್ಖಂಡ್ ಸರ್ಕಾರ ಮತ್ತು ಜೆಎಂಎಂ ಪಕ್ಷ ಹಸಿರು ಬಣ್ಣದ ಪೋಸ್ಟರ್‌ಗಳಲ್ಲಿ ಪ್ರಧಾನಿ ಚಿತ್ರದ ಜತೆಗೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಚಿತ್ರವನ್ನೂ ಹಾಕಿತ್ತು. ಹಸಿರು ಬಣ್ಣ ಜೆಎಂಎಂ ಪಕ್ಷದ ಧ್ವಜದ ಬಣ್ಣವೂ ಆಗಿದೆ. ಇದರ ಜತೆಗೆ ಶಿಬು ಸೊರೇನ್ ಅವರ ಚಿತ್ರವೂ ಪೋಸ್ಟರ್‌ನಲ್ಲಿದೆ.

ಜೆಎಂಎಂ ‘ಜೋಹರ್ ಪಿ.ಎಂ. ನರೇಂದ್ರ ಮೋದಿ (ಪ್ರಧಾನಿ ನರೇಂದ್ರ ಮೋದಿಗೆ ಸ್ವಾಗತ) ಎಂದು ಬುಡಕಟ್ಟು ಭಾಷೆಯಲ್ಲಿ ಸ್ವಾಗತ ಕೋರಿದ್ದರೆ, ಬಿಜೆಪಿ ಸಂಸ್ಕೃತ ಭಾಷೆಯಲ್ಲಿ ‘ಸ್ವಾಗತಂ’ ಎಂದು ಕೋರಿದೆ.‌

ಈ ಎರಡೂ ಪಕ್ಷಗಳ ನಡುವೆ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ (ಎಜೆಎಸ್‌ಯು) ಹಸಿರು– ಕೆಂಪು– ನೀಲಿ ಬಣ್ಣಗಳು ಇರುವ ಧ್ವಜವನ್ನೊಳಗೊಂಡಿರುವ ಪೋಸ್ಟರ್ ಅನ್ನು ಪ್ರಧಾನಿಗೆ ಸ್ವಾಗತ ಕೋರಲು ಹಾಕಿತ್ತು. ಈ ಹಿಂದೆ ಎಜೆಎಸ್‌ಯು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT