ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಪಶ್ಚಿಮ ಘಟ್ಟದಲ್ಲಿ ಮನುಷ್ಯರೂ ಇದ್ದಾರೆ ಎಂಬುದನ್ನೇ ಮರೆತ ವರದಿ

Last Updated 14 ಜನವರಿ 2022, 19:31 IST
ಅಕ್ಷರ ಗಾತ್ರ

ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೊ ಕಾದಂಬರಿಯಲ್ಲಿ ಮಂದಣ್ಣನ ಪರಿಸರ ಸೂಕ್ಷ್ಮ ಮಾತುಗಳನ್ನು ವಿಜ್ಞಾನಿ ಕರ್ವಾಲೊ ಕೇಳಿಸಿಕೊಳ್ಳುತ್ತಾರೆ; ಬಳಿಕ, ಘಟ್ಟ ಪ್ರದೇಶಗಳಲ್ಲಿ, ಅದರ ಕೊರಕಲುಗಳಲ್ಲಿ ನಿಂತು ಅಲ್ಲಿನ ಜನರು ಕಾಡು–ನೀರು ಕಾಪಾಡುವ ಬಗ್ಗೆ ಆಡುವ ಪಿಸುಮಾತುಗಳನ್ನು, ಕಾಡಾಡಿಗಳ ಬಗ್ಗೆ ಮರ–ಗಿಡ ಪಕ್ಷಿಗಳು ಉಸುರುವ ದನಿಯನ್ನು ಕೇಳಿಸಿಕೊಳ್ಳುವ ಜನವಿಜ್ಞಾನಿಯಾಗಿಬಿಡುತ್ತಾರೆ. ಅದೇ ರೀತಿಯೊಳಗೆ ಘಟ್ಟದೊಳಗೆ ತಾನೊಂದಾಗಿ ನಿಂತು ವರದಿ ನೀಡಬೇಕಾಗಿದ್ದ ಡಾ.ಕಸ್ತೂರಿ ರಂಗನ್ ನೇತೃತ್ವದ ಸಮಿತಿ, ಕಾಲಿಗೆ ಮಣ್ಣು ಮುಟ್ಟಿಸಿಕೊಳ್ಳದೇ ಬಾಹ್ಯಾಕಾಶದಲ್ಲೇ ನಿಂತು ವರದಿ ಕೊಟ್ಟಿದ್ದೇ ಸಮಸ್ಯೆಗಳಿಗೆಲ್ಲ ಕಾರಣ.

ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ ನೀಡಿದ ವರದಿಯನ್ನು ಕೇಂದ್ರ ಸರ್ಕಾರ ಒಪ್ಪಲೂ ಇಲ್ಲ, ತಿರಸ್ಕರಿಸಿದ್ದೇವೆ ಎಂದೂ ಹೇಳಲಿಲ್ಲ. ಹಾಗಾಗಿ, ಗಾಡ್ಗೀಳ್ ಹಾಗೂ ಕಸ್ತೂರಿರಂಗನ್ ವರದಿಗಳಿಗೆ ಪರಸ್ಪರ ಸಂಬಂಧವಿದೆ ಎಂಬುದನ್ನು ಒಪ್ಪಬೇಕು. ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಒಂಬತ್ತು ಜನರ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರ್ಕಾರ 2012ರ ಆಗಸ್ಟ್‌ 17ರಂದು ನೇಮಿಸಿತು. ಈ ಸಮಿತಿಯು ಕ್ಷೇತ್ರಕಾರ್ಯ, ಭೌತಿಕ ಪರಿಶೀಲನೆ ನಡೆಸದೇ ವಾಸ್ತವ ಪರಿಸ್ಥಿತಿ ನೋಡದೇ ಕೇವಲ ಎಂಟೇ ತಿಂಗಳಿನಲ್ಲಿ ವರದಿ ಸಲ್ಲಿಸಿತು. ವಿಜ್ಞಾನಿಯೊಬ್ಬರ ನೇತೃತ್ವದ ಸಮಿತಿ ನೀಡಿದ ಅವೈಜ್ಞಾನಿಕ ವರದಿ ಇದು ಎಂದರೆ ಹೆಚ್ಚು ಸಮಂಜಸವಾದೀತು.

ದೇಶದ ಆರು ಪ್ರಮುಖ ರಾಜ್ಯಗಳಿಗೆ ಸಂಬಂಧಿಸಿದಂತೆ ವರದಿ ತಯಾರಿಸಲು ಈ ಸಮಿತಿ ನೆಚ್ಚಿಕೊಂಡಿದ್ದು ಇಸ್ರೊ ಸಂಸ್ಥೆಯ ಡಾಟಾಬೇಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ತಯಾರಿಸಿದ್ದ ಮಾಹಿತಿಗಳು. ಇದನ್ನೇ ವೈಜ್ಞಾನಿಕ ಮಾಹಿತಿ ಆಧಾರದಲ್ಲಿ ನೀಡಿರುವ ವರದಿ ಎಂದುಸಮಿತಿ ಹೆಮ್ಮೆಯಿಂದ ಹೇಳಿಕೊಂಡಿದೆ. ಈ ವರದಿ ಅತ್ಯಂತ ಕ್ರಾಂತಿಕಾರಿಯಾಗಿದ್ದು, ಇದನ್ನು ಜಾರಿಮಾಡಲೇಬೇಕೆಂದು ಕೆಲವರು ವಾದ ಮಂಡಿಸುತ್ತಲೇ ಇದ್ದಾರೆ. ತಮ್ಮ ಬಾಳು–ಬದುಕನ್ನು ಪಶ್ಚಿಮ ಘಟ್ಟದ ತಪ್ಪಲಿನಲ್ಲೋ ಗುಡ್ಡದಲ್ಲೋ ತಲೆಮಾರುಗಳಿಂದ ಸವೆಸುತ್ತಾ, ಕಾಡನ್ನು ತಮ್ಮ ತಾಯಿಯಂತೆ ಕಾಪಾಡಿಕೊಂಡು ಬಂದ ಅಸಲಿ ಪರಿಸರವಾದಿಗಳಾದ ಜನರು ಈ ವರದಿಯನ್ನು ವಿರೋಧಿಸುತ್ತಿರುವುದಕ್ಕೆ ವೈಜ್ಞಾನಿಕ ಹಾಗೂ ವಾಸ್ತವಿಕ ಸತ್ಯಗಳೇ ಬಲಿಷ್ಠ ಕಾರಣ.

ಕಸ್ತೂರಿರಂಗನ್ ವರದಿಯು ಪಶ್ಚಿಮ ಘಟ್ಟವನ್ನು ಎರಡು ವಿಭಾಗದಲ್ಲಿ ಗುರುತಿಸಿ ಹೆಚ್ಚು ಜನವಸತಿ ಇರುವ ಶೇ 63ರಷ್ಟು ಭಾಗವನ್ನು ಕಲ್ಚರಲ್ ಲ್ಯಾಂಡ್ ಸ್ಕೇಪ್ ಎಂದೂ ಜನವಸತಿ ಕಡಿಮೆ ಇರುವ ಅರಣ್ಯ ಹೆಚ್ಚಾಗಿರುವಂತೆ ಕಂಡ ಉಪಗ್ರಹ ಆಧಾರಿತ ಭೂ ಭಾಗವನ್ನು ನ್ಯಾಚುರಲ್ ಲ್ಯಾಂಡ್ ಸ್ಕೇಪ್ ಎಂದೂ ಗುರುತಿಸಿದೆ.ನ್ಯಾಚುರಲ್ ಲ್ಯಾಂಡ್ ಸ್ಕೇಪ್ ಎಂದು ಗುರುತಿಸಿದ ಪ್ರದೇಶದಲ್ಲಿ ರಕ್ಷಿತಾರಣ್ಯ, ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ, ಹುಲಿ ಯೋಜನೆಯ ಮೀಸಲು – ಘೋಷಿತ ಹಾಗೂ ಪರಿಭಾವಿತ (ಡೀಮ್ಡ್‌) ಅರಣ್ಯ ಪ್ರದೇಶಗಳು ಇವೆ. ಈ ಭೂ ಪ್ರದೇಶ ಹೊರತುಪಡಿಸಿ, ಸಮಿತಿ ಹೆಚ್ಚುವರಿಯಾಗಿ ಗುರುತಿಸಿರುವ ಸುಮಾರು 20,000 ಚದರ ಕಿಲೋಮೀಟರ್ ಪ್ರದೇಶದಲ್ಲಿ ಇರುವ ಜನವಸತಿ, ಹಳ್ಳಿಗಳ ಕೃಷಿಕರು, ಜನ ಸಮುದಾಯಗಳ ಕುರಿತು ನಿರ್ಲಕ್ಷ್ಯ ತಾಳಿದೆ. ವರದಿಯು ಭವಿಷ್ಯದಲ್ಲಿ ಈ ಜನರನ್ನು ಅಲ್ಲಿಂದ ಎತ್ತಂಗಡಿ ಮಾಡುವ ಅಥವಾ ವರದಿಯ ಶಿಫಾರಸುಗಳು ಅಲ್ಲಿ ವಾಸಿಸುವ ಜನರ ಬದುಕನ್ನು ಅಸಹನೀಯ ವಾಗಿಸಿದಾಗ ಅವರೇ ಅನಿವಾರ್ಯವಾಗಿ ಹೊರಬರುವಂತೆ ಮಾಡುವ ಸಂಚು ಹೊಂದಿದೆ.

ಕಾಡಿನಲ್ಲಿ ವನ್ಯಜೀವಿ - ಮಾನವ ಸಂಘರ್ಷವು ನಿತ್ಯದ ಹಿಂಸೆಯಾಗುತ್ತಿದೆ. ಈ ಬಗ್ಗೆ ಹಾಗೂ ವನ್ಯಜೀವಿಗಳಿಂದ ಆದ ಬೆಳೆ ಹಾನಿಗೆ ಈ ನೆಲದ ಮೂಲ ನಿವಾಸಿಗಳಿಗೆ ಪರಿಹಾರ ಒದಗಿಸುವ ಸರ್ಕಾರದ ನೈತಿಕ ಹೊಣೆಗಾರಿಕೆಯ ಬಗ್ಗೆ ವರದಿ ಪ್ರಸ್ತಾಪವನ್ನೇ ಮಾಡಿಲ್ಲ.

ಮರಳು, ಕಲ್ಲು ಗಣಿಗಾರಿಕೆಯ ಸಂಪೂರ್ಣ ನಿಷೇಧಕ್ಕೆ ಸಮಿತಿ ಶಿಫಾರಸು ಮಾಡಿದೆ. ಹಾಗಾದರೆ, ಕನಿಷ್ಠ ಅವಶ್ಯಕತೆಗಾಗಿ ಬೇಕಾಗಿರುವ ಮರಳು, ಕಲ್ಲುಗಳಿಗೆ ಜನರು ಎಲ್ಲಿಗೆ ಹೋಗಬೇಕು. ಇದಕ್ಕಾಗಿ ಒಂದಷ್ಟು ವಿನಾಯಿತಿ ಅಗತ್ಯವಿದೆ. ಇದನ್ನು ಪ್ರಸ್ತಾಪ ಮಾಡಿದ ಕೂಡಲೇ, ಗಣಿ ಮಾಫಿಯಾದವರು ವರದಿಯನ್ನು ವಿರೋಧಿಸುತ್ತಿದ್ದಾರೆ ಎಂದು ಹುಯಿಲೆಬ್ಬಿಸುತ್ತಾರೆ. ಆದರೆ ನದಿ ಮೂಲಕ್ಕೆ, ಪರಿಸರಕ್ಕೆ ಧಕ್ಕೆಯಾಗುವ ಉದ್ಯಮಗಳ ವಿರುದ್ಧ ಸ್ಥಳೀಯರೇ ಹೋರಾಟ ರೂಪಿಸಿದಾಗ, ಇದೇ ಪಟ್ಟಭದ್ರರು ಜನ ಹೋರಾಟವನ್ನು ಹತ್ತಿಕ್ಕುವಲ್ಲಿ ಹಿಂದೆಲ್ಲ ಯಶಸ್ವಿಯಾಗಿರುವುದನ್ನು ನೆನಪಿಸಿಕೊಳ್ಳಲೇಬೇಕು. ನೀರಿನ ಮೂಲವು ಜಲದುರ್ಗಿ, ಕಾಡು ವನದುರ್ಗಿ, ನಾಗಬನ, ದೈವಬನ ಎಂದು ನಂಬಿ, ಅರಣ್ಯ ರಕ್ಷಿಸಿಕೊಂಡ ಜನರನ್ನೇ ಶಂಕೆಯಿಂದ ನೋಡುವುದೇ ನಿಜಕ್ಕೂ ಅಪಾಯಕಾರಿ.

ಪಶ್ಚಿಮಘಟ್ಟ ಪ್ರದೇಶದ ಕೃಷಿ ಬದುಕು ಹಾಗೂ ಬೆಳೆಗಳು ಏಕ ಪ್ರಕಾರವಾಗಿಲ್ಲ ಎಂಬ ಪರಿಜ್ಞಾನವೇ ಸಮಿತಿಗೆ ಇರಲಿಲ್ಲ. ಗುಜರಾತಿನಿಂದ ಕನ್ಯಾಕುಮಾರಿಯವರೆಗೆ ಇರುವ ಜನರ ಕೃಷಿ ಚಟುವಟಿಕೆ ವಿಭಿನ್ನವಾಗಿದೆ ಎಂಬುದನ್ನೂ ಗುರುತಿಸಿಲ್ಲ. ಆದರೆ, ಅತಿ ಬುದ್ಧಿವಂತಿಕೆ ತೋರಿರುವ ಸಮಿತಿಯು ಅಡಿಕೆ, ಕಾಫಿ ಬೆಳೆಗಳು ಬಹುಕೃಷಿ ಪದ್ಧತಿಗೆ ವಿರೋಧಿಯಾದ ಚಟುವಟಿಕೆ ಎಂಬಂತೆ ವಿಶ್ಲೇಷಿಸಿದೆ. ಅಲ್ಲದೇ ಇಲ್ಲಿರುವ ನೂರಾರು ವಿಧವಾದ ಹಣ್ಣು, ತರಕಾರಿ, ಆಹಾರ ಧಾನ್ಯಗಳ ಕೃಷಿ ವೈವಿಧ್ಯದ ರಕ್ಷಣೆಯ ಬಗ್ಗೆ ಯಾವುದೇ ಶಿಫಾರಸು ಮಾಡಿಲ್ಲ.

ಪರಿಸರ ಪ್ರವಾಸೋದ್ಯಮವು ‘ಹಸಿರು ಅಭಿವೃದ್ಧಿ’ಗೆ ಪೂರಕ ಎಂದು ಸಮಿತಿ ಹೇಳಿದೆ. ಇಂತಹ ಪ್ರವಾಸೋದ್ಯಮವು ಸ್ಥಳೀಯರಿಗೆ ನೀಡುವ ಉದ್ಯೋಗಾವಕಾಶಗಳನ್ನು ಅತಿರಂಜಿತವಾಗಿ ವಿವರಿಸಿದೆ. ಆದರೆ,ಪರಿಸರ ಪ್ರವಾಸೋದ್ಯಮದಲ್ಲಿ ಸ್ಥಳೀಯರು ನಗಣ್ಯವಾಗುವ ಹಾಗೂ ಪ್ರವಾಸಿತಾಣಗಳ ಗೇಟ್ ಕೀಪರ್‌ಗಳಾಗುವ ಸಂದರ್ಭಗಳ ಬಗ್ಗೆ ಸಮಿತಿಗೆ ಅರಿವೇ ಇಲ್ಲ.

ಕರ್ನಾಟಕ, ಕೇರಳ, ತಮಿಳುನಾಡಿಗೆ ಪರಿಸರ ಪ್ರವಾಸೋ ದ್ಯಮ ನೀತಿಗಳನ್ನು ರೂಪಿಸಲು ಶಿಫಾರಸು ಮಾಡಿರುವ ವರದಿಯು ಕಾರ್ಪೊರೇಟ್‌ಗಳ ಹಿತಾಸಕ್ತಿ ರಕ್ಷಣೆಯ ಪರವಾಗಿದೆ ಎಂಬುದನ್ನು ರುಜುವಾತುಪಡಿಸುತ್ತದೆ. ಅಲ್ಲದೇ ಪರೋಕ್ಷವಾಗಿ ಪರಿಸರದ ಶೋಷಕ ಶಕ್ತಿಗಳ ಪೋಷಕವಾಗಿ ನಿಂತಿದೆ ಎಂಬುದಂತೂ ಒಳಸತ್ಯ.

ಪರಿಸರ ಸೂಕ್ಷ್ಮ ವಲಯದಲ್ಲಿ ಭವಿಷ್ಯದ ಯೋಜನೆಗಳಲ್ಲಿ ಸ್ಥಳೀಯರ ಅಭಿಪ್ರಾಯ ಮುಖ್ಯ ಎಂದು ವಿವೇಕಯುತವಾಗಿ ಹೇಳಿದ ವರದಿಯು ಜಾರಿಯ ಪೂರ್ವದಲ್ಲಿ ಸ್ಥಳೀಯರ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗದೇ ಇರುವುದು ಅವೈಜ್ಞಾನಿಕವಲ್ಲವೇ? ಈ ಸಮಿತಿಯು, ತನ್ನ ವರದಿಯ ಮಧ್ಯೆಯೇ ಬೃಹತ್ ನಗರಗಳ ಭವಿಷ್ಯದ ನೀರಿನ, ಶುದ್ಧ ಗಾಳಿಯ ಅವಶ್ಯಕತೆಯ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತಾ ನಗರದ ನಾಳೆಗಳಿಗಾಗಿ ಪಶ್ಚಿಮ ಘಟ್ಟ ವಾಸಿಗಳು ಬಲಿಯಾಗ ಬೇಕಾಗುವುದು ಅನಿವಾರ್ಯ ಎಂಬರ್ಥದಲ್ಲಿ ಶಿಫಾರಸು ಮಾಡಿರುವುದನ್ನು ನೋಡಿದರೆ ಸಮಿತಿ ಯಾರ ಪರ ಎಂಬುದು ಮೇಲ್ನೋಟಕ್ಕೇ ಸ್ಪಷ್ಟ.

ಸುಧೀರ್ ಕುಮಾರ್ ಮುರೊಳ್ಳಿ
ಸುಧೀರ್ ಕುಮಾರ್ ಮುರೊಳ್ಳಿ

ಪಶ್ಚಿಮ ಘಟ್ಟದ ಜೀವ ವೈವಿಧ್ಯ ಉಳಿಯಬೇಕು ನಿಜ. ಆದರೆ, ಪಶ್ಚಿಮ ಘಟ್ಟದ ಸಂರಕ್ಷಣೆಯ ನೆಪದಲ್ಲಿ ಇಲ್ಲಿರುವ ನೆಲವಾಸಿಗಳನ್ನು ಶಂಕಿಸುವ, ಎತ್ತಂಗಡಿ ಮಾಡುವ ಬದಲು ಹಳ್ಳಿಗರ ಪರಿಸರ ಸಂರಕ್ಷಣೆಯ ಪ್ರಜ್ಞಾವಂತಿಕೆಯ ಮಾತುಗಳನ್ನು ಕೇಳಿಸಿಕೊಂಡ, ಜೀವ ಮತ್ತು ಮನುಷ್ಯ ಪ್ರೀತಿಯ ಶಿಫಾರಸುಗಳು ನಮಗೆ ಬೇಕಾಗಿವೆ. ಬೆಟ್ಟಗಳು ಜೀವ ತಳೆದು, ಬೆಳೆಯುತ್ತಾ ಬಂದಿರುವ ಕಾಲದಿಂದಲೂ ಬೆಟ್ಟದ ಜೀವಗಳಂತೆಯೇ ಇರುವವರ ಅಸ್ತಿತ್ವ ಉಳಿಸಬೇಕಾಗಿದೆ. ಅವರ ಜೀವ ಮತ್ತು ಜೀವನವೂ ಸೂಕ್ಷ್ಮ ಎಂದು ಅರಿವು ಬೇಕಾಗಿದೆ. ಪಶ್ಚಿಮ ಘಟ್ಟದಲ್ಲಿ ಚೋಮ, ನಾಯಿಗುತ್ತಿ, ಐತ, ಪೀಂಚಲು, ಮಂದಣ್ಣ, ಗೋಪಾಲಯ್ಯ–ಶಂಕರಿ, ತಬರ, ಕಮಲಕ್ಕ, ಕಸ್ತೂರಿ –ರಂಗಣ್ಣ, ಸಿಂಗಣ್ಣ , ಅಬ್ರಹಾಂ, ಇಬ್ರಾಹಿಂ ಎಲ್ಲರೂ ಇದ್ದಾರೆ. ಅವರೆಲ್ಲರೂ ಕಾಡು, ನೆಲ, ನೀರು ಇವೆಲ್ಲವೂ ಹಿಂದಿನ ಪೀಳಿಗೆಯವರಿಂದ ಎರವಲು ಪಡೆದದ್ದು, ಮತ್ತೆ ಮುಂದಿನ ತಲೆಮಾರಿಗೆ ಉಳಿಸಿಹೋಗಲೇಬೇಕಾದದ್ದು ಎಂಬ ಆತ್ಮಸಾಕ್ಷಿಯೊಂದಿಗೆ ಬದುಕುತ್ತಿದ್ದಾರೆ ಎಂಬುದನ್ನು ನಾವೆಲ್ಲರೂ ಅರಿಯಬೇಕಾಗಿದೆ.

ಲೇಖಕ: ವಕೀಲ, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT