ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ: ಯೋಗಿ–ಪಿಣರಾಯಿ: ವಾಗ್ವಾದದ ಮರ್ಮವೇನು?

Last Updated 14 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಗೆ ಮತ ಹಾಕದಿದ್ದರೆ ಉತ್ತರ ಪ್ರದೇಶವು ಕಾಶ್ಮೀರ, ಕೇರಳ ಅಥವಾ ಪಶ್ಚಿಮ ಬಂಗಾಳ ಆಗಲು ಹೆಚ್ಚು ಸಮಯ ಬೇಕಿಲ್ಲ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮತದಾನಕ್ಕೆ ಮುನ್ನಾದಿನ ಹೇಳಿಕೆ ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ಉತ್ತರ ಪ್ರದೇಶವು ಕೇರಳವಾದರೆ ರಾಜ್ಯಕ್ಕೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ಸಾಮಾಜಿಕ ಸೌಲಭ್ಯಗಳು, ಉತ್ತಮ ಗುಣಮಟ್ಟದ ಜೀವನ ದೊರೆಯಲಿದೆ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರ ಹತ್ಯೆ ಆಗುವುದಿಲ್ಲ’ ಎಂದು ತಿರುಗೇಟು ನೀಡಿದ್ದರು. ‘ಯೋಗಿ–ಪಿಣರಾಯಿ: ವಾಗ್ವಾದದ ಮರ್ಮವೇನು?’ ಎಂಬ ಕುರಿತು ಸೋಮವಾರ ‘ಪ್ರಜಾವಾಣಿ’ ಆಯೋಜಿಸಿದ್ದ ಸಂವಾದದಲ್ಲಿ ತಜ್ಞರು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ.

ಮುಸ್ಲಿಮರು ಬಹುಸಂಖ್ಯಾತರಾದರೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ

ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದಲೇ ಇನ್ನೂ ಪ್ರಜಾಪ್ರಭುತ್ವ ಉಳಿದಿದೆ. ಇಸ್ಲಾಂ ಧರ್ಮೀಯರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಪಾಕಿಸ್ತಾನ, ಅಫ್ಗಾನಿಸ್ತಾನ, ಸಿರಿಯಾದಲ್ಲಿ ಇಂದು ಏನಾಗಿದೆ? ಮುಸ್ಲಿಮರು ಬಹುಸಂಖ್ಯಾತರಾದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಅಂಥ ಸ್ಥಿತಿ ನಿರ್ಮಾಣ ಆಗುವುದು ಬೇಡ ಎಂದೇ ಆದಿತ್ಯನಾಥ ಅವರು ಎಚ್ಚರಿಸಿದ್ದಾರೆ. ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳದ ಜೊತೆಗೆ ಅಸ್ಸಾಂ ಹೆಸರನ್ನೂ ಅವರು ಉಲ್ಲೇಖಿಸಬೇಕಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ಎಷ್ಟೋ ಕಡೆ ಹಿಂದೂಗಳು ಹಳ್ಳಿಗಳನ್ನೇ ಬಿಟ್ಟು ಹೋಗಬೇಕಾಯಿತು. ಬಾಂಗ್ಲಾದ ಅಕ್ರಮ ವಲಸಿಗ ಮುಸ್ಲಿಮರ ಮತಗಳಿಂದ ಟಿಎಂಸಿ ಗೆದ್ದ ಬಳಿಕ ಹಿಂದೂಗಳ ಮಾರಣಹೋಮ ನಡೆಯಿತು. ಕೇರಳದಲ್ಲೂ ರಾಜಕೀಯ ಹತ್ಯೆಗಳು ನಡೆದಿವೆ.

ಪಿಎಫ್‌ಐ, ಎಸ್‌ಡಿಪಿಐ ಮತಗಳಿಂದ ಪಿಣರಾಯಿ ಗೆದ್ದು ಬಂದಿದ್ದಾರೆ. ಕೇರಳದಲ್ಲಿ ಮುಸ್ಲಿಂ ಪರ ವಾತಾವರಣ ನಿರ್ಮಾಣಗೊಂಡಿದೆ. ಮಲಪುರಂ, ಕಾಸರಗೋಡು ಜಿಲ್ಲೆಗಳ ಕೆಲ ಪ್ರದೇಶಗಳು ಪಾಕಿಸ್ತಾನದಂತಾಗಿವೆ. ಅಂಥ ಸ್ಥಿತಿ ಮತ್ತೆ ಬರಬಾರದು ಎಂದಾದರೆ ಮುಸ್ಲಿಂ ತುಷ್ಟೀಕರಣ ನಿಲ್ಲಬೇಕು.

- ಗೋ. ಮಧುಸೂದನ್,ಬಿಜೆಪಿ ಮುಖಂಡರು

***

ಬೆಂಕಿ ಹಚ್ಚುವುದಕ್ಕಿಂತ ಬೆಣ್ಣೆ ಹಚ್ಚುವುದೇ ಒಳ್ಳೆಯದು

ಇಂದಿನ ಪರಿಸ್ಥಿತಿಯನ್ನು ನೋಡಿದಾಗ, ‘ಬೆಂಕಿ’ ಹಚ್ಚುವವರಿಗಿಂತಲೂ ‘ಬೆಣ್ಣೆ’ ಹಚ್ಚುವವರೇ ಒಳ್ಳೆಯವರು. ಭಾರತದ ಒಳಗೇ ಪಾಕಿಸ್ತಾನ ನಿರ್ಮಿಸುವ ರಾಜಕೀಯ ಸಂಚು ರೂಪಿಸಲಾಗುತ್ತಿದೆ. ಹಿಂದೂ–ಮುಸ್ಲಿಮರನ್ನು ಒಡೆದು, ಪ್ರಜಾಪ್ರಭುತ್ವನ್ನು ನಾಶ ಮಾಡಿ ಹಿಂದುತ್ವವನ್ನು ತರುವ ಪ್ರಯತ್ನ ನಡೆಯುತ್ತಿದೆ.

ಪಿಎಫ್‌ಐ, ಎಸ್‌ಡಿಪಿಐ ಬೆಂಕಿ ಹಚ್ಚುವ ಕೆಲಸ ಮಾಡುತ್ತಿವೆ ಎಂದು ದೂರುತ್ತಿದ್ದಾರೆ. ಆದರೆ, ಈ ದೇಶದ ಸೆಕ್ಯೂಲರಿಸಂ ಅನ್ನು ಕತ್ತರಿ, ಚಾಕುವಿನಿಂದ ಮೊದಲು ಕತ್ತರಿಸಿದವರೇ ಬಿಜೆಪಿಯವರು.

ಆರೋಗ್ಯ, ಸಾರ್ವಜನಿಕ ಸೌಲಭ್ಯ, ಶಿಕ್ಷಣ ಇನ್ನಿತರ ವಲಯಗಳ ಅಭಿವೃದ್ಧಿ ಸೂಚ್ಯಂಕಗಳಲ್ಲಿ ನೀತಿ ಆಯೋಗವು ಕೇರಳಕ್ಕೆ ಸತತ ನಾಲ್ಕು ವರ್ಷಗಳಿಂದ ಮೊದಲ ಸ್ಥಾನ ನೀಡುತ್ತಿದೆ. ನೀತಿ ಆಯೋಗವೇನೂ ಪಾಕಿಸ್ತಾನದ್ದಲ್ಲ; ಬಿಜೆಪಿಯ ಕೇಂದ್ರ ಸರ್ಕಾರವೇ ರಚಿಸಿದ್ದು.

ಜನರ ಜೀವನ ಕ್ರಮ, ನಾರಾಯಣ ಗುರುಗಳ ಸಾಮಾಜಿಕ ಚಿಂತನೆ, ಸಾಕ್ಷರತೆಯ ಪ್ರಮಾಣದಿಂದ ಮೊದಲನೇ ಸ್ಥಾನ ಪಡೆಯಲು ಕೇರಳಕ್ಕೆ ಸಾಧ್ಯವಾಗಿದೆ. ಆದರೆ, ಉತ್ತರ ಪ್ರದೇಶದ ಸ್ಥಿತಿ ಹೇಗಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯವನ್ನು ಹೀಗಳೆಯುವುದನ್ನು ಪ್ರಜಾಪ್ರಭುತ್ವ ಎನ್ನಲು ಸಾಧ್ಯವೇ?

– ಕೆ.ಎಸ್‌.ವಿಮಲಾ,ಸಂಚಾಲಕರು, ಜನವಾದಿ ಮಹಿಳಾ ಸಂಘಟನೆ

***

ಕೇರಳದ ನಾಗರಿಕರಿಗೆ ಮಾಡಿದ ಅವಮಾನ

ಉತ್ತರ ಪ್ರದೇಶ–ಕೇರಳದ ನಡುವಿನ ವ್ಯತ್ಯಾಸ ಎಲ್ಲರಿಗೂ ಗೊತ್ತಿದೆ. ಅಂಗೈ ಹುಣ್ಣಿಗೆ ಕೈಗನ್ನಡಿ ಬೇಕಾಗಿಲ್ಲ. ಎಲ್ಲಾ ರಾಜ್ಯಗಳೂ ಸೇರಿಯೇ ಈ ದೇಶ ಆಗಿದೆ.

ಮುಖ್ಯಮಂತ್ರಿ ಆದಿತ್ಯನಾಥ ಇನ್ನೊಂದು ರಾಜ್ಯವನ್ನು ಹಂಗಿಸಿರುವುದು ಅಲ್ಲಿನ ಮತದಾರರಿಗೆ ಮಾಡಿರುವ ಅವಮಾನ. ಕೇರಳ, ಪಶ್ಚಿಮ ಬಂಗಾಳದ ಮತದಾರರು ತಮಗೆ ಬೇಕಾದ ಸರ್ಕಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಹಿಂದೂ– ಮುಸ್ಲಿಂ ವಿಷಯವನ್ನು ತರಲೇಬೇಕು ಎಂಬ ಕಾರಣಕ್ಕೆ ಈ ರೀತಿ ಮಾತನಾಡಿರುವುದು ಸರಿಯಲ್ಲ. ಒಬ್ಬ ಮುಖ್ಯಮಂತ್ರಿ ಈ ರೀತಿ ಮಾತನಾಡುವುದರಿಂದಲೇ ಪ್ರಜಾಪ್ರಭುತ್ವಕ್ಕೆ ಅಪಾಯ.

ಕಾಸರಗೋಡು ಜಿಲ್ಲೆ ಯಾವತ್ತೂ ಪಾಕಿಸ್ತಾನ ಆಗುವುದಿಲ್ಲ. ಕಾಸರಗೋಡನ್ನು ಪಾಕಿಸ್ತಾನ ಆಗದಂತೆ ನೋಡಿಕೊಳ್ಳುವವರು ಅಲ್ಲಿನ ಮುಸ್ಲಿಮರೇ ಹೊರತು, ಹಿಂದೂಗಳಲ್ಲ ಎಂಬ ಭರವಸೆ ನನಗಿದೆ.

ಪಿಣರಾಯಿ ವಿಜಯನ್‌ ಕಾಲದಲ್ಲೇ ಎಲ್ಲಾ ಅಭಿವೃದ್ಧಿ ಆಗಿದೆ ಎಂದು ಯಾರೂ ಹೇಳಿಲ್ಲ. 1947ರಲ್ಲಿ ಅಭಿವೃದ್ಧಿ ಸೂಚ್ಯಂಕದಲ್ಲಿ ಕೇರಳ, ಉತ್ತರ ಪ್ರದೇಶ ಒಂದೇ ಸ್ಥಿತಿಯಲ್ಲಿತ್ತು. ಆದರೆ, ಕೇರಳದ ಸರ್ಕಾರಗಳು ನೀಡಿದ ಉತ್ತಮ ಆಡಳಿತದಿಂದ ಸುಧಾರಣೆ ಕಂಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರೂಪಿಸಿದ್ದ ತಂತ್ರವನ್ನೇ ಟಿಎಂಸಿ ಹೆಣೆದಿದ್ದರಿಂದಲೇ ಹಿಂಸಾಚಾರ ಉಂಟಾಯಿತು.

–ಪ್ರೊ.ಎ. ನಾರಾಯಣ,ಪ್ರಾಧ್ಯಾಪಕರು, ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ

***

ಕೇರಳ–ಯುಪಿ ಹೋಲಿಕೆಯೇ ಸರಿಯಲ್ಲ

25 ಕೋಟಿ ಜನಸಂಖ್ಯೆ ಇರುವ ಉತ್ತರ ಪ್ರದೇಶ ಹಾಗೂ 3 ಕೋಟಿ ಜನಸಂಖ್ಯೆ ಇರುವ ಕೇರಳದ ನಡುವೆ ಹೋಲಿಕೆ ಮಾಡುವುದೇ ಸರಿಯಲ್ಲ. ಕೇರಳವು ಮೊದಲಿನಿಂದಲೂ ಅಭಿವೃದ್ಧಿಶೀಲ ರಾಜ್ಯ. ಪಿಣರಾಯಿ ಬಂದಮೇಲೆ ಅಭಿವೃದ್ಧಿ ಮಾಡಿದ್ದಲ್ಲ. ಅದೇ ರೀತಿ ಉತ್ತರ ಪ್ರದೇಶವೂ ಬಹಳ ವರ್ಷಗಳಿಂದ ಹಿಂದುಳಿದ ರಾಜ್ಯ. ಆದಿತ್ಯನಾಥ ಅಧಿಕಾರಕ್ಕೆ ಬಂದ ಬಳಿಕ ಏನಾಗಿದೆ? ಅದಕ್ಕೂ ಮೊದಲು ಹೇಗಿತ್ತು? ಈಗ ಜನ ಅದಕ್ಕೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದು ಮುಖ್ಯವಾಗಬೇಕು.

ಸಮಾಜವಾದಿ ಪಕ್ಷವನ್ನು ಜನ ಏಕೆ ತಿರಸ್ಕರಿಸಿದರು, ಅವರ ಕಾಲದಲ್ಲಿ ದೊಂಬಿಗಳು ಎಷ್ಟು ನಡೆಯುತ್ತಿದ್ದವು ಎಂಬುದನ್ನೂ ನೋಡಬೇಕು. ಪೊಲೀಸ್‌ ರಾಜ್‌ನಿಂದಾಗಿ ಏನು ಬೇಕಾದರೂ ಮಾಡಲಾಗುತ್ತಿತ್ತು. ಯೋಗಿ ಕಾಲದಲ್ಲೂ ಎನ್‌ಕೌಂಟರ್‌ಗಳಾಗಿವೆ. ಆದರೆ, ಗೂಂಡಾಗಿರಿ, ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬಂದಿದೆ. ಮೂಲಸೌಲಭ್ಯ ಕಲ್ಪಿಸಿರುವುದರಲ್ಲಿ ಮೊದಲ ಸ್ಥಾನದಲ್ಲಿದೆ. 15 ಹೆದ್ದಾರಿಗಳು, 10 ವಿಮಾನ ನಿಲ್ದಾಣಗಳು ಬರುತ್ತಿವೆ. ಹಲವು ಸವಾಲುಗಳ ನಡುವೆಯೂ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ.

ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವುದನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮುಸ್ಲಿಮರಿಗೂ ಭಾರತದಲ್ಲಿ ನೆಲೆಸಲು ಹಕ್ಕಿದೆ.

– ರಾಮಕೃಷ್ಣ ಉಪಾಧ್ಯ,ಪತ್ರಕರ್ತರು, ರಾಜಕೀಯ ವಿಶ್ಲೇಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT