ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರಿ ಹಿಂದೂಗಳ ಆತ್ಮರಕ್ಷಣೆಗೆ ಬಂದೂಕು ‍‍‍ಪರವಾನಗಿ ನೀಡಿ: ಮುತಾಲಿಕ

’ನೂಪುರ್‌ ಶರ್ಮಾ ಉಚ್ಚಾಟನೆ ಖಂಡನೀಯ‘
Last Updated 10 ಜೂನ್ 2022, 8:48 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋಮು ಭಾವನೆ ಕೆರಳಿಸಿದ ಆರೋಪದಡಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದು ಖಂಡನೀಯ’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೂಪುರ್‌ ಶರ್ಮಾ ಅವರೊಂದಿಗೆ ಬಿಜೆಪಿ ನಿಲ್ಲಬೇಕಿತ್ತು. ಆದರೆ, ಯಾರದ್ದೋ ಒತ್ತಡಕ್ಕೆ ಮಣಿದು ಉಚ್ಚಾಟನೆ ಮಾಡಿರುವುದು ಸರಿಯಲ್ಲ. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಹಿಂದೂ ಧರ್ಮಗಳ ಕುರಿತಾಗಿ ಮುಸ್ಲಿಮರು ಅಗೌರವ ತೋರಿದಾಗ, ಮುಸ್ಲಿಂ ರಾಷ್ಟ್ರದವರು ಒಂದೂ ಹೇಳಿಕೆ ನೀಡುವುದಿಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸ್ಥಿತಿ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆದರೆ, ನಮ್ಮ ಆಂತರಿಕ ವಿಚಾರಗಳಲ್ಲಿ ಅವರು ಮೂಗು ತೂರಿಸುವ ಅಗತ್ಯವಿಲ್ಲ. ಮುಸ್ಲಿಂ ರಾಷ್ಟ್ರಗಳ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿಯಬಾರದು’ ಎಂದರು.

‘ಕಾಶ್ಮೀರದಲ್ಲಿ ಹಿಂದೂ ಶಿಕ್ಷಕರು ಮತ್ತು ಸರ್ಕಾರಿ ನೌಕರರನ್ನು ಹತ್ಯೆ ಮಾಡಲಾಗುತ್ತಿದೆ. ಅಲ್ಲಿನ ಹಿಂದೂಗಳನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಹಾಗಾಗಿ ಸ್ವಯಂ ರಕ್ಷಣೆಗಾಗಿ ಎಲ್ಲ ಹಿಂದೂಗಳಿಗೆ ಬಂದೂಕು ಪರವಾನಗಿ ನೀಡಬೇಕು’ ಎಂದೂ ಆಗ್ರಹಿಸಿದರು.

‘ಬೆಳಗಾವಿಯ ಶಾಹಿ ಮಸೀದಿ ಮಾತ್ರವಲ್ಲ; 30 ಸಾವಿರ ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿದ್ದಾರೆ ಎಂಬ ಬಗ್ಗೆ ದಾಖಲೆಗಳಿವೆ. ಕಾನೂನು ಪ್ರಕಾರವೇ ಅವುಗಳನ್ನೆಲ್ಲ ವಶಕ್ಕೆ ತೆಗೆದುಕೊಳ್ಳುತ್ತೇವೆ’ ಎಂದರು.

‘90 ಚದರ ಅಡಿ ಜಾಗಕ್ಕೆ ಏಕೆ ಜಗಳ ಮಾಡುತ್ತೀರಿ?’ ಎಂಬ ಮಾಜಿ ಶಾಸಕ ಫಿರೋಜ್ ಸೇಠ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮುತಾಲಿಕ, ‘ದೇವಸ್ಥಾನದ ಒಂದು ಇಂಚು ಜಾಗವನ್ನೂ ಬಿಟ್ಟು ಕೊಡುವುದಿಲ್ಲ. ಫಿರೋಜ್ ಸೇಠ್ ಅವರೇ ನೀವೆಷ್ಟು ಜಾಗ ಲಪಟಾಯಿಸಿದ್ದೀರಿ, ಅದನ್ನು ಬೆಳಗಾವಿ ಜನರಿಗೆ ಬಿಟ್ಟು ಕೊಡಿ’ ಎಂದು ಒತ್ತಾಯಿಸಿದರು.

‘ಈ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ಪರಿಷ್ಕರಿಸಿದ್ದ ಪಠ್ಯದಲ್ಲಿ ಸಾಕಷ್ಟು ಲೋಪಗಳಿದ್ದರೂ, ಎಲ್ಲರೂ ಬಾಯಿ ಮುಚ್ಚಿಕೊಂಡಿದ್ದರು. ಈಗ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪರಿಷ್ಕರಣೆ ಸಮಿತಿ ವಿರೋಧಿಸುತ್ತಿದ್ದಾರೆ. ಪರಿಷ್ಕೃತ ಪಠ್ಯಕ್ರಮದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್‌ ಹೆಡಗೇವಾರ್‌ ‍ಪಾಠ ‍ಸೇರಿಸಿದರೆ ಕೋಮುವಾದ, ಜಾತಿವಾದ ಎನ್ನುತ್ತಿದ್ದಾರೆ. ಈ ಪಠ್ಯದಲ್ಲಿ ಬಸವಣ್ಣ ಸೇರಿದಂತೆ ಯಾರಿಗೂ ಅವಮಾನ ಮಾಡಲಾಗಿಲ್ಲ. ಇದರಲ್ಲಿ ಕೋಮುವಾದವೂ ಇಲ್ಲ. ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ವಿಸರ್ಜಿಸಿರುವುದು ಸರಿಯಲ್ಲ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಕಾಂಗ್ರೆಸ್‌ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದರು.

‘ಪಠ್ಯದಲ್ಲಿನ ತಮ್ಮ ಲೇಖನ ತೆಗೆಯುವಂತೆ ಹೇಳುತ್ತಿರುವ ಕೆಲವು ಸಾಹಿತಿಗಳಿಗೆ ನಾಚಿಕೆಯಾಗಬೇಕು. ಸ್ವಾಮೀಜಿಗಳು ಪಠ್ಯಕ್ರಮ ಪರಿಷ್ಕರಣೆ ವಿರೋಧಿಸಬಾರದು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT