ಮಂಗಳವಾರ, ಜೂನ್ 28, 2022
28 °C
ಸಾಂಕೇತಿಕ ದಂಡ ವಿಧಿಸಿದ ‘ಸುಪ್ರೀಂ’, ಪ್ರಶಾಂತ್‌ರಿಂದ ಮರುಪರಿಶೀಲನಾ ಅರ್ಜಿ ಸಾಧ್ಯತೆ

'ಕಠಿಣ ಶಿಕ್ಷೆ ಕೊಡದೆ ದೊಡ್ಡತನ ತೋರಿದ್ದೇವೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಶಾಂತ್‌ ಭೂಷಣ್‌ ಅವರ ಕೃತ್ಯಗಳು ಗಂಭೀರ ಸ್ವರೂಪದವುಗಳಾಗಿದ್ದರೂ, ಅವರಿಗೆ ಕಠಿಣ ಶಿಕ್ಷೆ ವಿಧಿಸದೆ ದೊಡ್ಡತನ ಪ್ರದರ್ಶಿಸಲು ಬಯಸಿರುವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಪ್ರಶಾಂತ್‌ಗೆ ಸಾಂಕೇತಿಕವಾಗಿ ₹1 ದಂಡ ವಿಧಿಸಿ ಆದೇಶ ನೀಡಿರುವ ನ್ಯಾಯಾಲಯವು, ‘ಕ್ಷಮೆ ಕೇಳಲು ನ್ಯಾಯಾಲಯವು ಅವರಿಗೆ ಅವಕಾಶ ನೀಡಿತ್ತು. ಟ್ವೀಟ್‌ ಅನ್ನು ಹಿಂತೆಗೆದುಕೊಳ್ಳುವಂತೆ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಮನವಿ ಸಹ ಮಾಡಿದ್ದರು. ಆದರೆ ಪ್ರಶಾಂತ್‌ ಅವರು ಕ್ಷಮೆ ಕೇಳುವುದಾಗಲಿ,  ಟ್ವೀಟ್‌ ಹಿಂತೆಗೆದುಕೊಳ್ಳುವುದಾಗಲಿ ಮಾಡಲಿಲ್ಲ. ಬದಲಿಗೆ ಮಾಧ್ಯಮಗಳಿಗೆ ಸಂದರ್ಶನ ನೀಡಿ ನ್ಯಾಯಾಲಯದ ಘನತೆಗೆ ಇನ್ನಷ್ಟು ಕುಂದು ಉಂಟುಮಾಡಲು ಪ್ರಯತ್ನಿಸಿದರು.

‘ಇಂಥ ನಡವಳಿಕೆಗಳನ್ನು ನಾವು ಗಂಭೀರವಾಗಿ ಪರಿಗಣಿಸದಿದ್ದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಆದರೆ ನಾವು ಸಾಂಕೇತಿಕವಾಗಿ ₹1 ದಂಡ ವಿಧಿಸುವ ಮೂಲಕ ದೊಡ್ಡತನ ಮೆರೆಯಲು ಬಯಸುತ್ತೇವೆ’ ಎಂದು ನ್ಯಾಯಾಲಯ ಹೇಳಿತು.

‘ಯಾವುದೇ ತೀರ್ಪಿನ ನ್ಯಾಯಯುತ ಟೀಕೆಗೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಸಂವಿಧಾನದ 19(1)(ಎ) ವಿಧಿ ಬಳಸಿಕೊಂಡು ಸಂಸ್ಥೆಯ ಘನತೆಗೆ ಧಕ್ಕೆ ಉಂಟುಮಾಡಬಾರದು. ಪ್ರಶಾಂತ್‌ ಅವರ ಹೇಳಿಕೆಗಳು ಸಾರ್ವಜನಿಕ ಹಿತಾಸಕ್ತಿಯುಳ್ಳದ್ದಾಗಲಿ, ವಿಶ್ವಾಸಾರ್ಹವಾದವುಗಳಾಗಲಿ ಆಗಿರಲಿಲ್ಲ. ಬದಲಿಗೆ ಅವು ನ್ಯಾಯಾಲಯವನ್ನು ಅವಹೇಳನಗೊಳಿಸುವಂಥ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಅಪಖ್ಯಾತಿ ತರುವಂಥವುಗಳಾಗಿದ್ದವು’ ಎಂದು 82 ಪುಟಗಳ ತೀರ್ಪಿನಲ್ಲಿ ಕೋರ್ಟ್‌ ಹೇಳಿದೆ.

ದಂಡ ಪಾವತಿಸುವೆ: ನ್ಯಾಯಾಲಯ ವಿಧಿಸಿದ ದಂಡ ಪಾವತಿಸುವುದಾಗಿ ಹೇಳಿರುವ ಪ್ರಶಾಂತ್‌ ಭೂಷಣ್‌, ‘ನನ್ನ ದುಃಖವನ್ನು ತೋಡಿಕೊಳ್ಳುವ ಉದ್ದೇಶದಿಂದ ಆ ಟ್ವೀಟ್‌ಗಳನ್ನು ಮಾಡಿದ್ದೆನೇ ವಿನಾ ನ್ಯಾಯಾಲಯಕ್ಕೆ ಅಗೌರವ ತೋರಿಸುವ ಉದ್ದೇಶದಿಂದ ಮಾಡಿರಲಿಲ್ಲ’ ಎಂದಿದ್ದಾರೆ.

‘ನ್ಯಾಯಾಲಯದ ಆದೇಶವನ್ನು ಪಾಲಿಸಿ ನಾನು ದಂಡವನ್ನು ಪಾವತಿಸು ತ್ತೇನೆ. ಆದರೆ ನನಗೆ ನೀಡಿರುವ ಶಿಕ್ಷೆಯ ವಿಚಾರವಾಗಿ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಅಧಿಕಾರವನ್ನು ಕಾಯ್ದಿರಿಸಿದ್ದೇನೆ’ ಎಂದು ತೀರ್ಪಿನ ನಂತರ ಪ್ರಶಾಂತ್‌ ಅವರು ಪ್ರತಿಕ್ರಿಯೆ ನೀಡಿದ್ದಾರೆ.

'ಪತ್ರಿಕಾಗೋಷ್ಠಿ: ಅದೇ ಕೊನೆಯಾಗಲಿ'

ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳ ವಿರುದ್ಧ ತಾನು ಮಾಡಿರುವ ಟೀಕೆಗಳನ್ನು ಸಮರ್ಥಿಸಿಕೊಳ್ಳಲು ಪ್ರಶಾಂತ್‌ ಅವರು, 2018ರ ಜನವರಿ 12ರಂದು ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದ ಆರೋಪಗಳನ್ನು ಬಳಸಲು ಮುಂದಾದಾಗ ನ್ಯಾಯಾಲಯವು ಅವರನ್ನು ತಡೆಯಿತು.

‘ಅದು ನ್ಯಾಯಮೂರ್ತಿಗಳ ಮೊದಲ ಮತ್ತು ಕೊನೆಯ ಪತ್ರಿಕಾಗೋಷ್ಠಿಯಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ಯಾರಾದರೂ ಆರೋಪಗಳನ್ನು ಮಾಡುವಾಗ, ಆಂತರಿಕ ವ್ಯವಸ್ಥೆಯ ಮೂಲಕವೇ ತನ್ನ ಘನತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುವಂಥ ಬುದ್ಧಿಶಕ್ತಿಯನ್ನು ದೇವರು ನ್ಯಾಯಾಂಗ ವ್ಯವಸ್ಥೆಗೆ ನೀಡಿದ್ದಾರೆ. ತಮ್ಮ ವಿರುದ್ಧ ಆರೋಪಗಳು ಬಂದಾಗ ನ್ಯಾಯಮೂರ್ತಿ ಗಳು ಸಾರ್ವಜನಿಕವಾಗಿ ಚರ್ಚೆಗೆ ಇಳಿಯುವುದಾಗಲಿ ಮಾಧ್ಯಮಗಳ ಮುಂದೆ ಬರುವುದಾಗಲಿ ಮಾಡಬಾರದು. ತೀರ್ಪುಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು’ ಎಂದು ನ್ಯಾಯಾಲಯ ಹೇಳಿದೆ.

‘ನ್ಯಾಯಮೂರ್ತಿಗಳ ವಿಚಾರದಲ್ಲೂ ಸತ್ಯ ಬೇರೆಯೇ ಆಗಿರಬಹುದಾದ ಸಾಧ್ಯತೆ ಇರುತ್ತದೆ. ಅವರು ನ್ಯಾಯಾಂಗದ ಸಂಪ್ರದಾಯ ಮತ್ತು ನೀತಿಸಂಹಿತೆಗೆ ಬದ್ಧರಾಗಿರಬೇಕಾಗುತ್ತದೆ. ವಕೀಲರಿಗೂ ನೀತಿ ಸಂಹಿತೆಗಳಿದ್ದು, ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿರುವುದರಿಂದ ಅವರೂ ಅದಕ್ಕೆ ಬದ್ಧರಾಗಬೇಕಾಗಿರುತ್ತದೆ’ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು