ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್‌ ಕಾಂಗ್ರೆಸ್‌ಗೆ?

Last Updated 16 ಏಪ್ರಿಲ್ 2022, 20:44 IST
ಅಕ್ಷರ ಗಾತ್ರ

ನವದೆಹಲಿ : ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್‌ ಅವರು ಕಾಂಗ್ರೆಸ್ ಪಕ್ಷ ಸೇರುವ ಇಚ್ಛೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಶಾಂತ್‌ ಅವರು ಪಕ್ಷಕ್ಕೆ ಸೇರುವ ಕುರಿತು ಒಂದು ವಾರದಲ್ಲಿ ನಿರ್ಧಾರ ಆಗಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಶನಿವಾರ ತಿಳಿಸಿದ್ದಾರೆ.

ಪ್ರಶಾಂತ್ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ದಟ್ಟ ವದಂತಿ ಈ ಹಿಂದೆಯೂ ಹರಡಿತ್ತು. ಐದು ರಾಜ್ಯಗಳ ವಿಧಾನಸಭೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗೂ ಮುನ್ನ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎಂದೂ ಹೇಳಲಾಗಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಪ್ರಶಾಂತ್‌ ಅವರು ಹಲವು ಬಾರಿ ಭೇಟಿ ಕೂಡ ಆಗಿದ್ದರು. ಆದರೆ, ಪ್ರಶಾಂತ್‌ ಅವರ ಕಾಂಗ್ರೆಸ್ ಸೇರ್ಪಡೆ ಆಗ ಕಾರ್ಯರೂಪಕ್ಕೆ ಬರಲಿಲ್ಲ.

ಕಾಂಗ್ರೆಸ್‌‌ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್‌, ಮಲ್ಲಿಕಾರ್ಜುನ ಖರ್ಗೆ ಮುಂತಾದವರ ಸಮ್ಮುಖದಲ್ಲಿ ಶನಿವಾರ ನಾಲ್ಕು ತಾಸು ಸಭೆ ನಡೆದಿದೆ. ಈ ಸಭೆಯು ಸೋನಿಯಾ ನಿವಾಸದಲ್ಲಿ ನಡೆಯಿತು.

ಯಾವುದೇ ನಿರೀಕ್ಷೆ ಇಲ್ಲದೆ ಕಾಂಗ್ರೆಸ್ ಸೇರಲು ಸಿದ್ಧ ಎಂದು ಪ್ರಶಾಂತ್‌ ಅವರು ಸಭೆಯಲ್ಲಿ ಹೇಳಿದರು ಎನ್ನಲಾಗಿದೆ. ತಮಗೆ ಪ್ರತಿಫಲವಾಗಿ ಏನೂ ಬೇಕಾಗಿಲ್ಲ. ಆದರೆ, ಪಕ್ಷವನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸಲು ತಮ್ಮ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಅವರು ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ. ಪ್ರಶಾಂತ್‌ಅವರು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯುನಲ್ಲಿ ಈ ಹಿಂದೆ ಇದ್ದರು. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ನಿಲುವಿನ ಕಾರಣಕ್ಕೆ ಅವರನ್ನು ಜೆಡಿಯುನಿಂದ 2020ರ ಜನವರಿಯಲ್ಲಿ ಉಚ್ಚಾಟಿಸಲಾಗಿತ್ತು.

ವಿಧಾನಸಭಾ ಚುನಾವಣೆ ಕಾರ್ಯತಂತ್ರ ರೂಪಿಸಲು ತೃಣಮೂಲ ಕಾಂಗ್ರೆಸ್‌, ಡಿಎಂಕೆ ಮತ್ತು ಆಮ್‌ ಆದ್ಮಿ ಪಕ್ಷವು ಪ್ರಶಾಂತ್‌ ಅವರ ನೆರವನ್ನು ಇತ್ತೀಚೆಗೆ ಪಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT