ಭಾನುವಾರ, ಏಪ್ರಿಲ್ 11, 2021
33 °C

ಮಾಜಿ ಪ್ರಧಾನಿ ವಾಜಪೇಯಿ ಪುಣ್ಯಸ್ಮರಣೆ: ಗೌರವ ಸಲ್ಲಿಸಿದ ರಾಷ್ಟ್ರಪತಿ, ಪ್ರಧಾನಿ

ಎಎನ್‌ಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ವರ್ಷದ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಗೌರವ ಸಲ್ಲಿಸಿದರು.

ಇಂದು ಮುಂಜಾನೆ ದೆಹಲಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿ ‘ಸದೈವ್ ಅಟಲ್’ಗೆ ಭೇಟಿ ನೀಡಿ ಪುಷ್ಪಾರ್ಚನೆ ಮಾಡುವ ಮೂಲಕ ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.

ಇವರೊಂದಿಗೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರೆ ಗಣ್ಯರು ಭೇಟಿ ನೀಡಿ ಗೌರವ ಸಲ್ಲಿಸಿದರು. ವಾಯಪೇಯಿ ಅವರ ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ಮತ್ತು ಮೊಮ್ಮಗಳಾದ ನಿಹಾರಿಕಾ ಕೂಡ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ದೀರ್ಘಕಾಲದ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ದೇಶದ ಪ್ರಮುಖ ನಾಯಕರಲ್ಲಿ ಒಬ್ಬರು ಮತ್ತು ಭಾರತೀಯ ಜನತಾ ಪಕ್ಷದ ಸ್ಥಾಪಕ ಸದಸ್ಯರಾದ ವಾಜಪೇಯಿ ಅವರು ಆಗಸ್ಟ್ 16, 2018 ರಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್)  ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ದೇಶದ ಪ್ರಗತಿಗಾಗಿ 'ಅತ್ಯುತ್ತಮ ಸೇವೆ' ಮಾಡಿದ್ದಕ್ಕಾಗಿ ಮಾಜಿ ಪ್ರಧಾನಿಯನ್ನು ನೆನಪಿಸಿಕೊಂಡರು. ವಾಜಪೇಯಿ ಅವರ ವೃತ್ತಿಜೀವನದ ಮಹತ್ವದ ಕ್ಷಣಗಳನ್ನು ಸೆರೆಹಿಡಿದಿರುವ ವಿಡಿಯೊ ಕ್ಲಿಪ್ ಅನ್ನು ಕೂಡ ಹಂಚಿಕೊಂಡಿದ್ದರು.

ಎರಡನೇ ವರ್ಷದ ಪುಣ್ಯತಿಥಿ ಅಂಗವಾಗಿ ಪ್ರೀತಿಯ ಅಟಲ್ ಜಿ ಅವರಿಗೆ ಗೌರವ ಸಲ್ಲಿಸುತ್ತೇನೆ. ಅತ್ಯುತ್ತಮ ಸೇವೆ ಮತ್ತು ನಮ್ಮ ರಾಷ್ಟ್ರದ ಪ್ರಗತಿಗೆ ಮಾಡಿದ ಪ್ರಯತ್ನಗಳನ್ನು ಯಾವಾಗಲೂ ಭಾರತವೂ ನೆನಪಿಸಿಕೊಳ್ಳುತ್ತದೆ ಎಂದು ಟ್ವೀಟ್ ಮಾಡಿದ್ದರು.

ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿ, 'ಇಂದು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು ಅಟಲ್ ಜಿ ಅವರ ಆಲೋಚನೆಗಳನ್ನು ಇಟ್ಟುಕೊಳ್ಳುವ ಮೂಲಕ ಉತ್ತಮ ಆಡಳಿತ ಮತ್ತು ಗರೀಬ್ ಕಲ್ಯಾಣದ ಹಾದಿಯಲ್ಲಿದೆ. ಭಾರತವನ್ನು ವಿಶ್ವದ ಮಹಾಶಕ್ತಿಯನ್ನಾಗಿ ಮಾಡಲು ಬದ್ಧವಾಗಿದೆ. ಇಂದು ಗೌರವಾನ್ವಿತ ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ವರ್ಷದ ಪುಣ್ಯತಿಥಿ ಅಂಗವಾಗಿ ಅವರಿಗೆ ಕೋಟಿ ಕೋಟಿ ವಂದನೆಗಳು' ಎಂದು ಟ್ವೀಟ್ ಮಾಡಿದ್ದಾರೆ.

1998-2004ರವರೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸರ್ಕಾರವನ್ನು ಮುನ್ನಡೆಸಿದ ವಾಜಪೇಯಿ, ಬಿಜೆಪಿಯಿಂದ ರಾಷ್ಟ್ರದ ಪ್ರಧಾನ ಮಂತ್ರಿಯಾದ ಮೊದಲ ನಾಯಕ. ಅವರು ಮೂರು ಭಾರಿ ದೇಶದ ಪ್ರಧಾನಿಯಾಗಿದ್ದರು. 1996 ರಲ್ಲಿ ಮತ್ತು 1998 ರಿಂದ 2004 ರ ನಡುವೆ ಎರಡು ಅವಧಿಗೆ ಪ್ರಧಾನಿಯಾಗಿ ಸೇವೇ ಸಲ್ಲಿಸಿದರು.

ಡಿಸೆಂಬರ್ 25 ರ ಅವರ ಅವರ ಜನ್ಮದಿನವನ್ನು ಪಕ್ಷವು 'ಉತ್ತಮ ಆಡಳಿತ ದಿನ' ಎಂದು ಆಚರಿಸುತ್ತದೆ. 2014 ರಲ್ಲಿ ಅವರಿಗೆ ಭಾರತ ರತ್ನ ದೊರಕಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು