ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಯಿಂದ ದೇಶದ ಭದ್ರತೆ ಕಡೆಗಣನೆ: ಕಾಂಗ್ರೆಸ್ ಟೀಕೆ

Last Updated 18 ನವೆಂಬರ್ 2021, 18:38 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಭದ್ರತೆ ಮತ್ತು ಗಡಿಯನ್ನು ಕಡೆಗಣಿಸಿದ್ದಾರೆ. ಈ ವಿಚಾರದಲ್ಲಿ ಅವರು ರಾಜಿ ಆಗಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

2017ರಲ್ಲಿ ಭೂತಾನ್‌ನ ದೋಕಲಾ ಪ್ರದೇಶದಲ್ಲಿ ಚೀನಾ ಸೇನೆಯ ಅತಿಕ್ರಮಣವನ್ನು ಭಾರತೀಯ ಸೇನೆ ತಡೆದಿತ್ತು. ಈಗ ಈ ಪ್ರದೇಶದಲ್ಲಿ ಚೀನಾ ಹಲವು ಗ್ರಾಮಗಳನ್ನು ನಿರ್ಮಿಸಿದೆ ಎಂದು ಕೆಲವು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಈ ವರದಿಗಳನ್ನು ಆಧರಿಸಿ ಕಾಂಗ್ರೆಸ್‌, ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದೆ.

‘ಭಾರತ–ಭೂತಾನ್‌–ಚೀನಾದ ಗಡಿಗಳು ಸಂಧಿಸುವ ದೋಕಲಾ ಪ್ರದೇಶದಲ್ಲಿ ಚೀನಾ ಹೊಸದಾಗಿ ನಾಲ್ಕು ಗ್ರಾಮಗಳನ್ನು ನಿರ್ಮಿಸಿದೆ. ದೋಕಲಾ ಪ್ರದೇಶದಲ್ಲಿ ಚೀನಾವು 100 ಚದರ ಕಿ.ಮೀ. ಜಾಗವನ್ನು ಕಬಳಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಮೌನವಹಿಸಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಗೌರವ್ ವಲ್ಲಭ್ ಅವರು ಆರೋಪಿಸಿದ್ದಾರೆ.

‘ಬಹಳ ಹಿಂದಿನಿಂದಲೂ ಭೂತಾನ್‌ನ ವಿದೇಶಾಂಗ ವ್ಯವಹಾರಗಳಲ್ಲಿ ಭಾರತವು ಸಲಹೆ ನೀಡುತ್ತಾ ಬಂದಿದೆ ಮತ್ತು ಭೂತಾನ್‌ ಸೇನೆಗೆ ಭಾರತೀಯ ಸೇನೆಯೇ ತರಬೇತಿ ನೀಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ಭೂತಾನ್‌ನ ನೆಲವನ್ನು ಚೀನಾ ಅತಿಕ್ರಮಿಸಿಕೊಂಡಿದ್ದು, ಭಾರತದ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ದೊಡ್ಡ ಅಪಾಯ’ ಎಂದು ವಲ್ಲಭ್ ಕಳವಳ ವ್ಯಕ್ತಪಡಿಸಿದ್ದಾರೆ.

***

ಚೀನಾದ ಅತಿಕ್ರಮಣವನ್ನು ನಾವು ಏಕೆ ಸಹಿಸಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಬೇರೆ ವಿಚಾರಗಳ ಹಿಂದೆ ಅವಿತುಕೊಳ್ಳುವುದನ್ನು ಬಿಡಬೇಕು. ಜನರಿಗೆ ಉತ್ತರ ಹೇಳಬೇಕು

-ಗೌರವ್ ವಲ್ಲಭ್, ಕಾಂಗ್ರೆಸ್ ನಾಯಕ

***

ಚೀನಾ ಪದೇ–ಪದೇ ನಮ್ಮ ನೆಲವನ್ನು ಅತಿಕ್ರಮಿಸುತ್ತಲೇ ಇದೆ.ಚೀನಾದ ಈ ಮೌಖಿಕ, ಭೌಗೋಳಿಕ, ಸೇನಾ ಅತಿಕ್ರಮಣವನ್ನು ಪ್ರಧಾನಿ ಮೋದಿ ಅವರ ಸರ್ಕಾರವು ಎದುರಿಸುವುದು ಯಾವಾಗ?

-ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT