ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಳೆಯುಳಿಕೆ ಇಂಧನ ಶೋಧ ಹೆಚ್ಚಿಸಿ: ಹೂಡಿಕೆದಾರರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

ಭಾರತ ಇಂಧನ ಸಪ್ತಾಹಕ್ಕೆ ಚಾಲನೆ l
Last Updated 6 ಫೆಬ್ರುವರಿ 2023, 21:16 IST
ಅಕ್ಷರ ಗಾತ್ರ

ಬೆಂಗಳೂರು: ಭಾರತವು ಸ್ಥಳೀಯವಾಗಿ ಇಂಧನ ನಿಕ್ಷೇಪಗಳ ಶೋಧ ಮತ್ತು ಉತ್ಪಾದನೆಗೆ ಒತ್ತು ನೀಡುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು ದೇಶದಲ್ಲಿ ಪಳೆಯುಳಿಕೆ ಇಂಧನ ನಿಕ್ಷೇಪಗಳ ಪತ್ತೆಗೆ ಹೆಚ್ಚಿನ ಹೂಡಿಕೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೂಡಿಕೆದಾರರಿಗೆ ಕರೆ ನೀಡಿದರು.

ಇಲ್ಲಿನ ಮಾದಾವರದ ಬಳಿಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಸೋಮವಾರ ಆರಂಭವಾದ ಭಾರತ ಇಂಧನ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತದಲ್ಲಿ ಇಂಧನದ ಬೇಡಿಕೆಯು ಈ ದಶಕದಲ್ಲಿ ಅತ್ಯಧಿಕ ಪ್ರಮಾಣ ತಲು‍ಪಲಿದೆ. ಇದು ಇಂಧನ ಕ್ಷೇತ್ರದಲ್ಲಿನ ಹೂಡಿಕೆದಾರರು ಮತ್ತು ಪಾಲುದಾರರಿಗೆ ಹೊಸ ಅವಕಾಶಗಳನ್ನು ತೆರೆದಿಡಲಿದೆ’ ಎಂದರು.

ಜಗತ್ತಿನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಲ್ಲಿ ಭಾರತದ ಬೇಡಿಕೆಯು ಶೇಕಡ 5ರಿಂದ 11ಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಅದೇ ರೀತಿ ಎಲ್‌ಪಿಜಿ ಬೇಡಿಕೆಯಲ್ಲಿ ಶೇ 500ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದು ದೇಶದಲ್ಲಿ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಸಹಭಾಗಿತ್ವದ ವಿಸ್ತರಣೆಗೆ ಅವಕಾಶಗಳನ್ನು ಒದಗಿಸಲಿದೆ ಎಂದು ಹೇಳಿದರು.

‘ನಿರ್ಬಂಧಿತ ಪ್ರದೇಶದ (ನೋ–ಗೋ ಏರಿಯಾ) ವ್ಯಾಪ್ತಿಯನ್ನು ತಗ್ಗಿಸಿದ್ದೇವೆ. ಇದರಿಂದಾಗಿ ಹತ್ತು ಲಕ್ಷ ಚದರ ಕಿಲೋಮೀಟರ್‌ ಪ್ರದೇಶವು ನಿರ್ಬಂಧಗಳಿಂದ ಮುಕ್ತವಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಪಳೆಯುಳಿಕೆ ಇಂಧನಗಳ ಶೋಧದಲ್ಲಿ ತೊಡಗಿಸಿಕೊಳ್ಳುವಂತೆ
ಹೂಡಿಕೆದಾರರನ್ನು ಒತ್ತಾಯಿಸುತ್ತೇನೆ’ ಎಂದರು.

ದೇಶೀಯವಾಗಿ ಇಂಧನ ನಿಕ್ಷೇಪಗಳ ಶೋಧ ಮತ್ತು ಉತ್ಪಾದನೆ ಹೆಚ್ಚಳ, ವಿತರಣಾ ವ್ಯವಸ್ಥೆಯಲ್ಲಿ ವೈವಿಧ್ಯ ತರುವುದು, ಜೈವಿಕ ಇಂಧನ, ಎಥೆನಾಲ್‌, ಬಯೋಗ್ಯಾಸ್‌, ಸೌರಶಕ್ತಿ ಉತ್ಪಾದನೆ ಹೆಚ್ಚಳ ಹಾಗೂ ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಮತ್ತು ಜಲಜನಕ ಆಧಾರಿತ ಇಂಧನ ಉತ್ಪಾದನೆ ಮೂಲಕ ಇಂಗಾಲ ಹೊರಸೂಸುವಿಕೆ ತಗ್ಗಿಸುವ ಕಾರ್ಯಸೂಚಿಯ ಮೂಲಕ ಇಂಧನ ಕ್ಷೇತ್ರದಲ್ಲಿ ಸುಧಾರಣೆ ತರುವ ಗುರಿಯನ್ನು ದೇಶವು ಹೊಂದಿದೆ. ಅದರ ಜತೆಯಲ್ಲೇ ದೇಶದಲ್ಲಿ ತೈಲ ಸಂಸ್ಕರಣಾ ಘಟಕಗಳ ಸಾಮರ್ಥ್ಯ
ವನ್ನು ವಾರ್ಷಿಕ 25 ಕೋಟಿ ಟನ್‌ಗಳಿಂದ 45 ಕೋಟಿ ಟನ್‌ಗಳಿಗೆ ಹೆಚ್ಚಿಸುವ ಯೋಜನೆಯಿದೆ ಎಂದು ತಿಳಿಸಿದರು.

ಇಂಧನ ಕ್ಷೇತ್ರದಲ್ಲಿ ಅನಿಲ ಬಳಕೆಯ ಪ್ರಮಾಣವನ್ನು 2030ರ ವೇಳೆಗೆ ಶೇ 6ರಿಂದ ಶೇ 15ಕ್ಕೆ ಹೆಚ್ಚಿಸುವ ಗುರಿ ಇದೆ. ಇದಕ್ಕಾಗಿಯೇ ‘ಒಂದು ದೇಶ– ಒಂದು ವಿತರಣಾ ಜಾಲ’ ಯೋಜನೆ ಜಾರಿಗೊಳಿಸಲಾಗುತ್ತಿದೆ. 2014ಕ್ಕೆ ಹೋಲಿಸಿದರೆ ನಗರ ಅನಿಲ ಪೂರೈಕೆ ವ್ಯವಸ್ಥೆಯಲ್ಲಿ (ಸಿಜಿಡಿ) ಒಂಬತ್ತು ಪಟ್ಟು ಹೆಚ್ಚಳವಾಗಿದೆ. ಸಿಎನ್‌ಜಿ ಕೇಂದ್ರಗಳ ಸಂಖ್ಯೆ 900ರಿಂದ 5,000ಕ್ಕೆ ಹೆಚ್ಚಿಸಲಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಹನ್ನೆರಡು 2–ಜಿ ಎಥೆನಾಲ್‌ ಘಟಕಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ ಎಂದರು.

ಈ ದಶಕದ ಅಂತ್ಯದೊಳಗೆ 50 ಲಕ್ಷ ಟನ್‌ ಹಸಿರು ಜಲಜನಕ ಉತ್ಪಾದನೆಯ ಗುರಿ ಇದೆ. ಇದು ₹ 8 ಲಕ್ಷ ಕೋಟಿ ಹೂಡಿಕೆಯ ಅವಕಾಶಗಳನ್ನು ಒದಗಿಸಲಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಇಂಧನ ಸಾಮರ್ಥ್ಯ ವೃದ್ಧಿ, ಸುಸ್ಥಿರ ಸಾಗಣೆ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡಲಾಗುವುದು. ಈ ದಶಕದ ಅಂತ್ಯದಲ್ಲಿ ಶೇ 50ರಷ್ಟು ಇಂಧನವನ್ನು ಪಳೆಯುಳಿಕೆಯೇತರ ಮೂಲಗಳಿಂದ ಉತ್ಪಾದಿಸುವ ಗುರಿ ಸರ್ಕಾರದ ಮುಂದಿದೆ ಎಂದು ಮೋದಿ ಹೇಳಿದರು.

ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಎಥೆನಾಲ್‌ ಮಿಶ್ರಣದ ಪ್ರಮಾಣವನ್ನು ಒಂಬತ್ತು ವರ್ಷಗಳಲ್ಲಿ ಶೇ 1.5ರಿಂದ ಶೇ 10ಕ್ಕೆ ಹೆಚ್ಚಿಸಲಾಗಿದೆ. ಅದನ್ನು ಶೇ 20ಕ್ಕೆ ಹೆಚ್ಚಿಸುವ ಪ್ರಯತ್ನ ಪ್ರಗತಿಯಲ್ಲಿದೆ. ಇಂಧನ ಪರಿವರ್ತನೆ ಮತ್ತು ಹೊಸ ಇಂಧನಗಳ ಉತ್ಪಾದನೆಯಲ್ಲಿ ಭಾರತವು ಜಗತ್ತಿನ ಪ್ರಬಲ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಸೋಲಾರ್‌ ಕುಕ್‌ಟಾಪ್‌, ಬಾಟಲಿಯ ವಸ್ತ್ರ

ಇಂಡಿಯನ್‌ ಆಯಿಲ್ ಕಾರ್ಪೋರೇಷನ್‌ (ಐಒಸಿ) ತಯಾರಿಸಿರುವ ಸೌರಶಕ್ತಿ ಆಧಾರಿತ ಕುಕ್‌ಟಾಪ್‌ ಹಾಗೂ ಬಳಸಿದ ಪ್ಲಾಸ್ಟಿಕ್‌ ಬಾಟಲಿಗಳಿಂದ ತಯಾರಿಸಿರುವ ವಸ್ತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಿದರು.

‘ಮುಂದಿನ ಮೂರು ವರ್ಷಗಳಲ್ಲಿ ದೇಶದ ಮೂರು ಕೋಟಿ ಕುಟುಂಬಗಳಲ್ಲಿ ಸೋಲಾರ್‌ ಕುಕ್‌ಟಾಪ್‌ಗಳ ಬಳಕೆ ಆರಂಭವಾಗಲಿದೆ. ಈ ಉತ್ಪನ್ನವು ದೇಶದ 25 ಕೋಟಿ ಕುಟುಂಬಗಳ ಅಡುಗೆ ಮನೆಯಲ್ಲಿ ಬದಲಾವಣೆ ತರಲಿದೆ’ ಎಂದು ಅವರು ಹೇಳಿದರು. ಬಳಸಿದ ಪ್ಲಾಸ್ಟಿಕ್‌ ಪೆಟ್‌ ಬಾಟಲಿಗಳಿಂದ ಐಒಸಿ ತಯಾರಿಸಿದ ವಸ್ತ್ರಗಳನ್ನೂ ಪ್ರಧಾನಿ ಬಿಡುಗಡೆ ಮಾಡಿದರು. ತೈಲ ಕಂಪನಿಗಳ ಸಿಬ್ಬಂದಿ ಹಾಗೂ ಯುದ್ಧರಹಿತ ಸನ್ನಿವೇಶಗಳಲ್ಲಿ ಯೋಧರು ಈ ವಸ್ತ್ರಗಳನ್ನು ಬಳಕೆ ಮಾಡಬಹುದು. ಶೇ 20ರಷ್ಟು ಎಥೆನಾಲ್‌ ಮಿಶ್ರಣದ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಕೆ ಮಾಡುವ ಇ–20 ಯೋಜನೆಯನ್ನೂ ಪ್ರಧಾನಿ ಉದ್ಘಾಟಿಸಿದರು.


‘ಇ.ವಿ ತಯಾರಿಕೆ– ಅಗ್ರಸ್ಥಾನದ ಗುರಿ’

‘ವಿದ್ಯುತ್‌ಚಾಲಿತ ವಾಹನಗಳಿಗೆ (ಇ.ವಿ) ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆಯಲ್ಲಿ ರಾಜ್ಯವನ್ನು ಅಗ್ರ ಸ್ಥಾನಕ್ಕೇರಿಸುವ ಗುರಿ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ₹ 3 ಲಕ್ಷ ಕೋಟಿ ಹೂಡಿಕೆಯ ಒಪ್ಪಂದಗಳಾಗಿವೆ. ಅವುಗಳಲ್ಲಿ ₹ 2 ಲಕ್ಷ ಕೋಟಿಗಳಷ್ಟು ಮೊತ್ತದ ಹೂಡಿಕೆ ಪ್ರಸ್ತಾವಗಳು ಹಸಿರು ಜಲಜನಕ ಉತ್ಪಾದನಾ ಕ್ಷೇತ್ರಕ್ಕೆ ಸೇರಿವೆ. ಈಗ ರಾಜ್ಯವು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದೆ’. ಎಥೆನಾಲ್‌ ಉತ್ಪಾದನೆಯಲ್ಲಿ ಕೂಡ ಕರ್ನಾಟಕವು ಅಗ್ರಸ್ಥಾನದಲ್ಲಿದೆ. ಉದ್ಯಮಿ ವಿಜಯ್‌ ನಿರಾಣಿ ದೇಶದಲ್ಲೇ ಅತ್ಯಧಿಕ ಎಥೆನಾಲ್‌ ಉತ್ಪಾದನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT