ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವವನ್ನು ತುಳಿಯಲು ಪ್ರಯತ್ನಿಸಲಾಯಿತು: ಮೋದಿ

Last Updated 26 ಜೂನ್ 2022, 7:24 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವವನ್ನು ತುಳಿದು ಹಾಕುವ ಪ್ರಯತ್ನ ಮಾಡಲಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮನ್‌ ಕಿ ಬಾತ್‌ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು ತುರ್ತು ಪರಿಸ್ಥಿತಿ ಹೇರಿದ್ದನ್ನು ಪ್ರಸ್ತಾಪಿಸಿದರು. ಆ ಸಮಯದಲ್ಲಿ ಎಲ್ಲ ಹಕ್ಕುಗಳನ್ನು ಕಸಿಯಲಾಗಿತ್ತು. 'ದಬ್ಬಾಳಿಕೆ ಮನಸ್ಥಿತಿಯನ್ನು' ಪ್ರಜಾಸತ್ತಾತ್ಮಕವಾಗಿ ಮಣಿಸಿದ ಮತ್ತೊಂದು ಉದಾಹರಣೆಯು ಜಗತ್ತಿನ ಬೇರೆಲ್ಲೂ ಹುಡುಕುವುದು ಕಷ್ಟ ಎಂದರು.

ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿ, 1975ರ ಜೂನ್‌ 25ರಂದು ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಅದನ್ನು 1977ರ ಮಾರ್ಚ್‌ 21ರಂದು ಅಂತ್ಯಗೊಳಿಸಲಾಗಿತ್ತು.

'ತುರ್ತು ಪರಿಸ್ಥಿತಿಯ ಸಮಯದಲ್ಲಿ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಆ ಸಮಯದಲ್ಲಿ ದೇಶದ ನ್ಯಾಯಾಲಯಗಳು, ಸರ್ಕಾರಿ ಸಂಸ್ಥೆಗಳು, ಮಾಧ್ಯಮಗಳು, ಎಲ್ಲವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿತ್ತು. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ತುಳಿದು ಹಾಕಲು ಪ್ರಯತ್ನಿಸಲಾಯಿತು' ಎಂದು ಮೋದಿ ಹೇಳಿದರು.

ಅನುಮತಿ ಪಡೆಯದೆಯೇ ಯಾವುದನ್ನೂ ಪ್ರಕಟಿಸುವಂತಿರಲಿಲ್ಲ. ಪ್ರಖ್ಯಾತ ಗಾಯಕರಾದ ಕಿಶೋರ್‌ ಕುಮಾರ್ ಅವರು ಸರ್ಕಾರವನ್ನು ಹೊಗಳಲು ನಿರಾಕರಿಸಿದ್ದರು. ಅದಕ್ಕಾಗಿ ಅವರ ಮೇಲೆ ನಿರ್ಬಂಧ ಹೇರಲಾಗಿತ್ತು ಹಾಗೂ ರೇಡಿಯೊ ಕಾರ್ಯಕ್ರಮಗಳಿಗೆ ಅವರಿಗೆ ಅವಕಾಶ ನೀಡಿರಲಿಲ್ಲ ಎಂದು ಹಿಂದಿನ ಘಟನೆ ಮೆಲುಕು ಹಾಕಿದರು.

'ಸಾವಿರಾರು ಜನರನ್ನು ಬಂಧಿಸಲಾಯಿತು ಹಾಗೂ ಲಕ್ಷಾಂತರ ಜನರ ಮೇಲೆ ದೌರ್ಜನ್ಯ ನಡೆಸಲಾಯಿತು. ಆದರೆ, ಪ್ರಜಾಪ್ರಭುತ್ವದ ಮೇಲೆ ಜನರ ನಂಬಿಕೆಯನ್ನು ಅಲುಗಾಡಿಸಲು ಆಗಲಿಲ್ಲ. ಪ್ರಜಾಪ್ರಭುತ್ವದ ಚೈತನ್ಯವು ನಮ್ಮ ನರನಾಡಿಗಳಲ್ಲಿ ಹರಿದಿದೆ, ಪ್ರಜಾಪ್ರಭುತ್ವದ ಮೌಲ್ಯಗಳು ಶತಮಾನಗಳಿಂದ ನಮ್ಮೊಳಗೆ ಬೆರೆತು ಹೋಗಿವೆ, ಅಂತಿಮವಾಗಿ ಅದಕ್ಕೆ ಗೆಲುವಾಯಿತು' ಎಂದು ಪ್ರಧಾನಿ ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT