ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೆಂದಿಗಿಂತಲೂ ನಿಕಟವಾಗಿ, ಜೊತೆಯಾಗಿ ಕಾರ್ಯಾಚರಿಸೋಣ: ಕ್ವಾಡ್ ಸಭೆಯಲ್ಲಿ ಮೋದಿ

Last Updated 12 ಮಾರ್ಚ್ 2021, 15:27 IST
ಅಕ್ಷರ ಗಾತ್ರ

ನವದೆಹಲಿ: ''ಲಸಿಕೆ, ಹವಾಮಾನ ಬದಲಾವಣೆ ಹಾಗೂ ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನ ವಿಷಯಗಳ ಚರ್ಚೆಯು ನಮ್ಮ ಉದ್ದೇಶವಾಗಿದೆ, ಇದರಿಂದಾಗಿ 'ಕ್ವಾಡ್‌' ಜಾಗತಿಕ ಒಳಿತಿನ ಶಕ್ತಿಯಾಗಲಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಥಮ ಕ್ವಾಡ್‌ ಮುಖ್ಯಸ್ಥರ ಸಭೆಯಲ್ಲಿ ಹೇಳಿದ್ದಾರೆ.

ಕೋವಿಡ್-19ರ ಕಾರಣದಿಂದ ಕ್ವಾಡ್ ದೇಶಗಳ ಮುಖ್ಯಸ್ಥರ ಸಭೆಯನ್ನು ವರ್ಚ್ಯುವಲ್ ರೂಪದಲ್ಲಿ ನಡೆಸಲಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಿ ಯೊಶೀಹಿಡೆ ಸೂಗಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್‌ ಸಭೆಯಲ್ಲಿ ಭಾಗವಹಿಸಿದ್ದಾರೆ.

'ಈ ಸಕಾರಾತ್ಮಕ ದೃಷ್ಟಿಯನ್ನು ಭಾರತದ ಪುರಾತನ ತತ್ವವಾದ 'ವಸುಧೈವ ಕುಟುಂಬಕಂ' ವಿಸ್ತರಿಸಿದ ಭಾಗದಂತೆ ಕಾಣುತ್ತೇನೆ. ಹಿಂದೆಂದಿಗಿಂತಲೂ ನಾವು ಮತ್ತಷ್ಟು ನಿಕಟವಾಗಿ ಕಾರ್ಯನಿರ್ವಹಿಸೋಣ, ಒಪ್ಪಿತ ಮೌಲ್ಯಗಳನ್ನು ವೃದ್ಧಿಸಿಕೊಳ್ಳಲು ಹಾಗೂ ಸಾಮಾನ, ಸುಸ್ಥಿರ ಹಾಗೂ ಸಮೃದ್ಧ ಇಂಡೊ–ಪೆಸಿಫಿಕ್‌ ಉತ್ತೇಜಿಸಲು ಶ್ರಮಿಸೋಣ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

'ಜಂಟಿಯಾಗಿ ಮಹಾತ್ವಾಕಾಂಕ್ಷೆಯ ಹೊಸ ಪಾಲುದಾರಿಕೆಯನ್ನು ಆರಂಭಿಸುತ್ತಿದ್ದು, ಅದರಿಂದಾಗಿ ಜಾಗತಿಕ ಅನುಕೂಲಕ್ಕಾಗಿ ಲಸಿಕೆ ತಯಾರಿಕೆಗೆ ಒತ್ತು ಸಿಗಲಿದೆ. ಪೂರ್ಣ ಇಂಡೊ–ಪೆಸಿಫಿಕ್‌ ವಲಯಕ್ಕೆ ಲಸಿಕೆಯ ಬಲ ಸಿಗಲಿದೆ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದರು.

ಹಿಂದೂ ಮಹಾಸಾಗರ–ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ಮುಕ್ತ ಸಮುದ್ರಯಾನವನ್ನು ರಕ್ಷಿಸುವ ಉದ್ದೇಶದಿಂದ ಭಾರತ-ಅಮೆರಿಕ-ಆಸ್ಟ್ರೇಲಿಯಾ ಮತ್ತು ಜಪಾನ್ ರಚಿಸಿಕೊಂಡಿರುವ ಕೂಟವೇ ಕ್ವಾಡ್ ಮೈತ್ರಿಕೂಟ.ನಾಲ್ಕು ರಾಷ್ಟ್ರಗಳ ಈ ಕೂಟವನ್ನು ಕ್ವಾಡ್ರಿಲ್ಯಾಟರಲ್‌ ಸೆಕ್ಯುರಿಟಿ ಡಯಲಾಗ್‌ ಅಥವಾಕ್ವಾಡ್‌ ಎಂದು ಕರೆಯಲಾಗುತ್ತಿದೆ.

ಏಷ್ಯಾ-ಆಫ್ರಿಕಾ-ಅಮೆರಿಕ ಖಂಡಗಳ ನಡುವೆ ನಡೆಯುವ ವಾಣಿಜ್ಯ ವಹಿವಾಟುಗಳು ಕಾರ್ಯರೂಪಕ್ಕೆ ಬರುವುದು ಈ ಸಮುದ್ರಮಾರ್ಗದ ಮೂಲಕವೇ. ಇದನ್ನು ಮುಕ್ತ ಮತ್ತು ಸ್ವತಂತ್ರವಾಗಿ ಇರಿಸುವುದರಲ್ಲಿ ಜಾಗತಿಕ ವಾಣಿಜ್ಯ ಹಿತಾಸಕ್ತಿ ಅಡಗಿದೆ. ಈ ಸಮುದ್ರಮಾರ್ಗದ ಮೇಲೆ ಚೀನಾವು ತನ್ನ ಹಿಡಿತವನ್ನು ಬಿಗಿಗೊಳಿಸಲು ಯತ್ನಿಸುತ್ತಿದೆ. ಈ ಯತ್ನವನ್ನು ತಡೆಹಿಡಿಯುವುದೇ ಕ್ವಾಡ್ ಒಕ್ಕೂಟದ ಪ್ರಧಾನ ಉದ್ದೇಶವಾಗಿತ್ತು. ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶವನ್ನು ಹಾದುಹೋಗುವ ಸಮುದ್ರ ಮಾರ್ಗದ ಆಯಕಟ್ಟಿನ ಜಾಗದಲ್ಲಿ ಕ್ವಾಡ್‌ ಕೂಟದ ಮಲಬಾರ್ ಸಮರಾಭ್ಯಾಸ ನಡೆಸುವುದಕ್ಕೆ ಈ ಮೈತ್ರಿ ಸೀಮಿತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT