ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘಕಾಲ ಅಧಿಕಾರದಲ್ಲಿದ್ದವರಿಂದ ಬುಡಕಟ್ಟು ಪ್ರದೇಶಗಳ ನಿರ್ಲಕ್ಷ್ಯ: ಮೋದಿ

‘ಗುಜರಾತ್ ಗೌರವ ಅಭಿಯಾನ’ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ
Last Updated 10 ಜೂನ್ 2022, 14:07 IST
ಅಕ್ಷರ ಗಾತ್ರ

ನವಸಾರಿ, ಗುಜರಾತ್‌:ಸ್ವಾತಂತ್ರ್ಯ ನಂತರ ದೇಶದಲ್ಲಿ ದೀರ್ಘಕಾಲ ಅಧಿಕಾರದಲ್ಲಿದ್ದವರು ಎಂದಿಗೂ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ನವಸಾರಿ ಜಿಲ್ಲೆಯ ಖುದ್ವೆಲ್ ಗ್ರಾಮದಲ್ಲಿ ‘ಗುಜರಾತ್ ಗೌರವ ಅಭಿಯಾನ’ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

ಬುಡಕಟ್ಟು ಪ್ರದೇಶದ ಅಭಿವೃದ್ಧಿಗಾಗಿ ಸುಮಾರು ₹3,050 ಕೋಟಿಯ ವಿವಿಧ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.

‘ಮತ ಪಡೆಯಲು ಅಥವಾ ಚುನಾವಣೆ ಗೆಲ್ಲಲು ಅಭಿವೃದ್ಧಿ ಕಾರ್ಯಗಳನ್ನುನಾನು ಪ್ರಾರಂಭಿಸುವುದಿಲ್ಲ.ಆದರೆ, ಜನರ ಜೀವನ ಮಟ್ಟ ಸುಧಾರಿಸುವ ಉದ್ದೇಶದಿಂದ ಅಭಿವೃದ್ಧಿ ಕೆಲಸ ಮಾಡುತ್ತೇನೆ.ನಾನು ಎರಡು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ಇದ್ದೇನೆ. ನಾನು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸದ ಒಂದೇ ಒಂದು ವಾರ ಇದ್ದರೇ ನನಗೆ ತೋರಿಸಲಿ’ ಎಂದು ಸವಾಲು ಹಾಕಿದರು.

‘ದೇಶದಲ್ಲಿ ದೀರ್ಘ ಕಾಲ ಅಧಿಕಾರದಲ್ಲಿದ್ದವರು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಗಮನ ಹರಿಸಲೇ ಇಲ್ಲ. ಏಕೆಂದರೆ ಅದಕ್ಕಾಗಿ ಕಠಿಣ ಪರಿಶ್ರಮಪಡಬೇಕಿತ್ತು. ಹಾಗಾಗಿ ಬುಡಕಟ್ಟು ಪ್ರದೇಶಗಳಲ್ಲಿಸರಿಯಾದ ರಸ್ತೆಗಳು, ಅಭಿವೃದ್ಧಿ ಕಾರ್ಯಗಳು ಆಗಲಿಲ್ಲ’ ಎಂದು ಮೋದಿ ಅವರುಯಾವುದೇ ಪಕ್ಷದಹೆಸರು ಉಲ್ಲೇಖಿಸದೇ ಟೀಕಾಪ್ರಹಾರ ನಡೆಸಿದರು.

ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಆಡಳಿತರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಪ್ರಧಾನಿ ಚಾಲನೆ ನೀಡಿದ ಪ್ರಮುಖ ಯೋಜನೆಗಳು

* ತಾಪಿ, ನವಸಾರಿ ಮತ್ತು ಸೂರತ್ ಜಿಲ್ಲೆಗಳಿಗೆ ನೀರು ಸರಬರಾಜಿನ ₹961 ಕೋಟಿಯ 13 ನೀರು ಸರಬರಾಜು ಯೋಜನೆಗಳಿಗೆ ಶಂಕುಸ್ಥಾಪನೆ

* ₹586 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಧುಬನ್ ಅಣೆಕಟ್ಟು ಆಧರಿತ ಆಸ್ಟೋಲ್ ಪ್ರಾದೇಶಿಕ ನೀರು ಸರಬರಾಜು ಯೋಜನೆ ಉದ್ಘಾಟನೆ

*ನವಸಾರಿ ಜಿಲ್ಲೆಯಲ್ಲಿ ₹ 542 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಶಂಕುಸ್ಥಾಪನೆ

* ಸೂರತ್, ನವಸಾರಿ, ವಲ್ಸಾದ್, ತಾಪಿ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ₹163 ಕೋಟಿಯ ‘ನಲ್ ಸೇ ಜಲ’ ಯೋಜನೆ ಉದ್ಘಾಟನೆ

‘8 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿ’

‘ಕಳೆದ ಎಂಟು ವರ್ಷಗಳಲ್ಲಿ ನಮ್ಮ ಸರ್ಕಾರವು ದೇಶದ ಆರೋಗ್ಯ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

ಎಂಜಿನಿಯರಿಂಗ್ ಸಮೂಹ ಸಂಸ್ಥೆಗಳಾದ ಲಾರ್ಸನ್ ಮತ್ತು ಟೂರ್ಬೊದ ಎ.ಎಂ. ನಾಯ್ಕ್ ನೇತೃತ್ವದ ಟ್ರಸ್ಟ್ ನಿರ್ಮಿಸಿರುವ ಎ.ಎಂ. ನಾಯಕ್ ಹೆಲ್ತ್‌ಕೇರ್ ಕಾಂಪ್ಲೆಕ್ಸ್ ಮತ್ತು ನಿರಾಲಿ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

‘ಗುಜರಾತ್‌ನಮುಖ್ಯಮಂತ್ರಿಯಾಗಿದ್ದಾಗಿನ ನನ್ನ ಅನುಭವವು ದೇಶದಲ್ಲಿ ಮಾದರಿ ಆರೋಗ್ಯ ನೀತಿ ರೂಪಿಸಲು ನೆರವಾಗಿದೆ. ಮುಖ್ಯಮಂತ್ರಿ ಅಮೃತಂ ಯೋಜನೆ ಪರಿಚಯಿಸಿದ್ದೇನೆ. ಇದು ರಾಜ್ಯದ ಬಡ ಜನರಿಗೆ ₹2 ಲಕ್ಷ ವರೆಗಿನ ವೈದ್ಯಕೀಯ ವೆಚ್ಚ ಭರಿಸುತ್ತದೆ. ದೇಶದ ಬಡಜನರ ಆರೋಗ್ಯಕ್ಕೆ ₹5 ಲಕ್ಷದವರೆಗೆ ವೆಚ್ಚ ಭರಿಸುವ ಆಯುಷ್ಮಾನ್ ಭಾರತ್ ಯೋಜನೆಯನ್ನುಕೇಂದ್ರ ಸರ್ಕಾರದಿಂದ ಪರಿಚಯಿಸಿದ್ದೇವೆ’ ಎಂದು ಮೋದಿ ಹೇಳಿದರು.

‘ಬಾಹ್ಯಾಕಾಶ ಕ್ಷೇತ್ರದಲ್ಲಿ ನಿರಂತರ ಸುಧಾರಣೆ’

ಅಹಮದಾಬಾದ್: ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಮತ್ತು ಆವಿಷ್ಕಾರ ಉತ್ತೇಜಿಸಲು ಸ್ಥಾಪಿಸಿರುವ ಭಾರತೀಯ ಬಾಹ್ಯಾಕಾಶ ಉತ್ತೇಜನ ಮತ್ತು ಮಾನ್ಯತಾ ಕೇಂದ್ರದ(ಇಂಡಿಯನ್‌ ಸ್ಪೇಸ್‌ ಪ್ರೊಮೊಷನ್‌ ಆ್ಯಂಡ್‌ ಆಥರೈಜೇಷನ್‌ ಸೆಂಟರ್‌–ಇನ್‌ ಸ್ಪೇಸ್‌) ಪ್ರಧಾನ ಕಚೇರಿಯನ್ನು ಪ್ರಧಾನಿ ಮೋದಿ ಶುಕ್ರವಾರ ಉದ್ಘಾಟಿಸಿದರು.

‘21ನೇ ಶತಮಾನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವು ವಿಶ್ವದಲ್ಲಿ ದೊಡ್ಡ ಕ್ರಾಂತಿ ತರಲಿದೆ. ನಮ್ಮಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಪ್ರಾರಂಭಿಸಿದೆ. ಅಲ್ಲದೇ, ಅದನ್ನು ಖಾಸಗಿ ವಲಯಕ್ಕೂ ಮುಕ್ತವಾಗಿ ತೆರೆದಿದೆ. ಐ.ಟಿ ವಲಯದಂತೆ, ನಮ್ಮ ಬಾಹ್ಯಾಕಾಶ ಉದ್ಯಮವು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಮುಂದಾಳತ್ವ ವಹಿಸುವ ಭರವಸೆ ನನಗಿದೆ. ಈ ಕ್ಷೇತ್ರದಲ್ಲಿ ಸುಧಾರಣೆಗಳು ನಿರಂತರ ಮುಂದುವರಿಯಲಿವೆ’ ಎಂದು ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT