ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಿಂದ ಪರಾರಿ: ಕೈದಿಗಳನ್ನು ಹೊಡೆದು ಕೊಂಡ 5,000 ಗ್ರಾಮಸ್ಥರು

ಘಟನೆ ಕುರಿತ ತನಿಖೆಗೆ ಆದೇಶಿಸಿದ ಗೃಹ ಸಚಿವ | ಕಾಣೆಯಾದ ಇಬ್ಬರು ಕೈದಿಗಳು
Last Updated 12 ಸೆಪ್ಟೆಂಬರ್ 2022, 15:59 IST
ಅಕ್ಷರ ಗಾತ್ರ

ಶಿಲ್ಲಾಂಗ್‌: ಜೊವಯ್‌ ಜೈಲಿನಿಂದ ಪರಾರಿಯಾಗಿದ್ದ ನಾಲ್ವರು ಕೈದಿಗಳನ್ನು ವೆಸ್ಟ್‌ ಜಯಂತಿಯಾ ಹಿಲ್ಸ್‌ ಜಿಲ್ಲೆಯ ಶಂಗ್‌ಪುಂಗ್‌ ಗ್ರಾಮದ ಸುಮಾರು 5,000 ಸಾವಿರ ಗ್ರಾಮಸ್ಥರು ಸೇರಿ ಭಾನುವಾರ ಹತ್ಯೆ ಮಾಡಿದ್ದಾರೆ. ಗುಂಪುಹತ್ಯೆ ಹಾಗೂ ಜೈಲಿನಿಂದ ಪರಾರಿಯಾದ ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಲಹಕಮನ್‌ ರಿಂಬುಯಿ ವಿಧಾನಸಭೆಯಲ್ಲಿ ಸೋಮವಾರ ಹೇಳಿದರು.

ಸೆಪ್ಟೆಂಬರ್‌ 10ರಂದು ಆರು ಕೈದಿಗಳು (ಐವರು ವಿಚಾರಣಾಧೀನ ಕೈದಿ, ಒಬ್ಬ ಅಪರಾಧಿ) ಜೈಲಿನಿಂದ ಪರಾರಿಯಾಗಿದ್ದರು. ಇವರಲ್ಲಿ ಮೂವರು ವಿಚಾರಣಾಧೀನ ಕೈದಿಗಳು ಹಾಗೂ ಒಬ್ಬ ಅಪರಾಧಿಯನ್ನು ಕೋಲುಗಳನ್ನು ಹಿಡಿದು ಬಂದ ಗ್ರಾಮಸ್ಥರು ಹತ್ಯೆ ಮಾಡಿದ್ದಾರೆ ಎಂದರು.ಗ್ರಾಮಸ್ಥರು ಕೈದಿಗಳನ್ನು ಹತ್ಯೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಗುಂಪುಹತ್ಯೆಯಲ್ಲಿ ಭಾಗಿಯಾಗಿದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ಸಚಿವರು ಯಾವುದೇ ಘೋಷಣೆ ಮಾಡಿಲ್ಲ.

ಕೈದಿಯನ್ನು ಪತ್ತೆ ಮಾಡಿದ ಗ್ರಾಮಸ್ಥರು: ‘ಭಾನುವಾರದ ವೇಳೆಗೆಪರಾರಿಯಾದ ಆರು ಕೈದಿಗಳಲ್ಲಿ ಐವರು ಜೈಲಿನಿಂದ 70 ಕಿ.ಮೀ ದೂರದಲ್ಲಿರುವ ಶಂಗ್‌ಪುಂಗ್ ಗ್ರಾಮಕ್ಕೆ ತಲುಪಿದ್ದರು. ಮಧ್ಯಾಹ್ನ 3ರ ಸುಮಾರಿಗೆ ಗ್ರಾಮದ ಅಂಗಡಿಯೊಂದರಲ್ಲಿ ಆಹಾರ ಖರೀದಿಸುತ್ತಿದ್ದ ಒಬ್ಬ ಕೈದಿಯನ್ನು ಸ್ಥಳೀಯರು ಪತ್ತೆಹಚ್ಚಿದರು. ಕ್ಷಣ ಮಾತ್ರದಲ್ಲಿ ಈ ಸುದ್ದಿ ಗ್ರಾಮದಲ್ಲಿ ಹಬ್ಬಿತು’ ಎಂದು ಗ್ರಾಮದ ಮುಖ್ಯಸ್ಥ ಆರ್‌. ರಾಬನ್‌ ತಿಳಿಸಿದರು.

‘ಗ್ರಾಮದ ಹತ್ತಿರದ ಅರಣ್ಯವೊಂದರಲ್ಲಿ ಅಡಗಿದ್ದ ಕೈದಿಗಳನ್ನು ಗ್ರಾಮಸ್ಥರು ಹುಡುಕಿ ಹೊರಟರು. ನಂತರ ಎಲ್ಲರು ಸೇರಿ ನಾಲ್ವರನ್ನು ಹತ್ಯೆ ಮಾಡಿದ್ದಾರೆ. ಒಬ್ಬ ಕೈದಿ ಜನರಿಂದ ತಪ್ಪಿಸಿಕೊಂಡಿದ್ದಾನೆ’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಕೆ. ಮಾರಾಕ್‌ ಪ್ರತಿಕ್ರಿಯಿಸಿ, ‘ಪರಾರಿಯಾದ ಆರನೇ ಕೈದಿಯ ಪತ್ತೆ ಆಗಿಲ್ಲ. ಈ ನಾಲ್ವರು ಕೈದಿಗಳಲ್ಲಿ ಇಬ್ಬರನ್ನು ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಟ್ಯಾಕ್ಸಿ ಚಾಲಕನ್ನು ಹತ್ಯೆ ಮಾಡಿದ ಆರೋಪ ಅವರ ಮೇಲಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT