ಮಂಗಳವಾರ, ಡಿಸೆಂಬರ್ 7, 2021
23 °C

ಕಸ್ಟಡಿಯಲ್ಲಿ ಸಾವು: ಮೃತನ ಮನೆಗೆ ಭೇಟಿ ನೀಡಲು ಯತ್ನಿಸಿದ ಪ್ರಿಯಾಂಕಾ ವಶಕ್ಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಲಖನೌ: ಪೊಲೀಸ್ ಕಸ್ಟಡಿಯಲ್ಲಿ ಇತ್ತೀಚೆಗೆ ಮೃತಪಟ್ಟ ಎಸ್‌ಸಿ ಯುವಕನ ಮನೆಗೆ ಭೇಟಿ ನೀಡಲು ಮುಂದಾದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕ ಮಂಗಳವಾರ ಮೃತಪಟ್ಟಿದ್ದರು. ಆಗ್ರಾದಲ್ಲಿರುವ ಅವರ ಕುಟುಂಬದವರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಪ್ರಿಯಾಂಕಾ ಅವರನ್ನು ಲಖನೌ–ಆಗ್ರಾ ಎಕ್ಸ್‌ಪ್ರೆಸ್ ವೇ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಆಗ್ರಾದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇರುವ ಕಾರಣ ಅಲ್ಲಿಗೆ ಭೇಟಿ ನೀಡದಂತೆ ಪ್ರಿಯಾಂಕಾಗೆ ಸೂಚಿಸಲಾಗಿತ್ತು. ಆದರೂ ಅವರು ಪ್ರಯಾಣ ಬೆಳೆಸಲು ಮುಂದಾಗಿದ್ದರು ಎನ್ನಲಾಗಿದೆ.

ಓದಿ: 

‘ನಾನು ಅತಿಥಿಗೃಹಕ್ಕಷ್ಟೇ ಸೀಮಿತವಾಗಿರಬೇಕೆಂದು ಅವರು (ಪೊಲೀಸರು) ಬಯಸುತ್ತಾರೆ. ಇದು ಸರ್ಕಾರಕ್ಕೆ ರಾಜಕೀಯವಾಗಿ ಸರಿಯಾಗಿರಬಹುದು. ಪ್ರತಿ ಬಾರಿ ನಾನು ಎಲ್ಲಿಗಾದರೂ ಭೇಟಿ ನೀಡಬೇಕಾದರೆ ಅವರ ಅನುಮತಿ ಪಡೆಯಬೇಕೇ? ಒಬ್ಬ ಸದಸ್ಯನನ್ನು ಕಳೆದುಕೊಂಡಿರುವವರ ಕುಟುಂಬದವರನ್ನು ನಾನು ಭೇಟಿಯಾಗುವುದು ಕಾನೂನು ಸುವ್ಯವಸ್ಥೆಗೆ ಭಂಗ ಹೇಗಾಗುತ್ತದೆ’ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

‘ಇವತ್ತು ವಾಲ್ಮೀಕಿ ಜಯಂತಿ. ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಯುವಕನ (ಅರುಣ್ ವಾಲ್ಮೀಕಿ) ಕುಟುಂಬದವರಿಗೆ ನ್ಯಾಯ ಒದಗಿಸಿಕೊಡಬೇಕಿದೆ. ಆತನ ಕುಟುಂಬದವರನ್ನು ಭೇಟಿಯಾಗಲು ತೆರಳುತ್ತಿದ್ದೇನೆ. ಇದಕ್ಕೆ ಉತ್ತರ ಪ್ರದೇಶ ಸರ್ಕಾರ ಯಾಕೆ ಭಯಪಡುತ್ತಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕುಶೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬುದ್ಧನ ಸಿದ್ಧಾಂತಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಅವುಗಳು ರಾಜ್ಯದಲ್ಲಿ ಪಾಲನೆಯಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಓದಿ: 

ಮೂಲಗಳ ಪ್ರಕಾರ, ಆಗ್ರಾದ ಜಗದೀಶಪುರ ಪೊಲೀಸ್ ಠಾಣೆಯಿಂದ ₹25 ಲಕ್ಷ ಕಳವು ಮಾಡಿದ ಆರೋಪದಲ್ಲಿ ಅರುಣ್ ವಾಲ್ಮೀಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರಿಂದ ನಗದನ್ನು ವಶಪಡಿಸಿಕೊಂಡಿದ್ದಾಗಿಯೂ ಪೊಲೀಸರು ಹೇಳಿದ್ದರು. ಕಸ್ಟಡಿಯಲ್ಲಿದ್ದಾಗ ಅರುಣ್ ದಿಢೀರ್ ಅನಾರೋಗ್ಯಕ್ಕೀಡಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದರು. ಆದರೆ, ಅರುಣ್‌ರನ್ನು ಕಸ್ಟಡಿಯಲ್ಲಿ ಹಿಂಸಿಸಿ ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು