ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಯ್‌ ಮಿಶ್ರಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳಬೇಡಿ: ಪ್ರಧಾನಿಗೆ ಪ್ರಿಯಾಂಕಾ ಪತ್ರ

Last Updated 20 ನವೆಂಬರ್ 2021, 10:24 IST
ಅಕ್ಷರ ಗಾತ್ರ

ಲಖನೌ: ಇಲ್ಲಿ ಆರಂಭವಾಗಿರುವ ಡಿಜಿಪಿಗಳ ಸಮಾವೇಶದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆಗ್ರಹಿಸಿದ್ದಾರೆ.

ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಮಿಶ್ರಾ ಅವರ ಪುತ್ರ ಆರೋಪಿಯಾಗಿದ್ದಾರೆ. ಹಾಗಾಗಿ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಎಂದೂ ಅವರು ಒತ್ತಾಯಿಸಿದ್ದಾರೆ.

ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧಾರ ಪ್ರಕಟಿಸಿದ ಮರುದಿನ ಪ್ರಿಯಾಂಕಾ ಅವರು ಈ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಶನಿವಾರ ಡಿಜಿಪಿ ಸಮಾವೇಶ ಆರಂಭವಾಗುವುದಕ್ಕೂ ಮುನ್ನ ಅವರು ಪತ್ರವನ್ನು ಸುದ್ದಿಗಾರರ ಮುಂದೆ ಓದಿದರು.

‘ದೇಶವಾಸಿಗಳನ್ನು ಉದ್ದೇಶಿಸಿ ಶುಕ್ರವಾರ ನೀವು ಮಾತನಾಡುವಾಗ, ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದೀರಿ. ಇದು ನಿಜವೇ ಆಗಿದ್ದರೆ, ಲಖಿಂಪುರ ಖೇರಿ ಹಿಂಸಾಚಾರದಲ್ಲಿ ನೊಂದಿರುವ ಕುಟುಂಬಗಳಿಗೆ ನ್ಯಾಯ ಒದಗಿಸುವುದು ನಿಮ್ಮ ಆದ್ಯತೆಯಾಗಬೇಕು’ ಎಂದು ಅವರು ಹೇಳಿದರು.

‘ಆದರೆ, ಸಚಿವ ಅಜಯ್‌ ಮಿಶ್ರಾ ಅವರು ಇನ್ನೂ ನಿಮ್ಮ ಸಂಪುಟದ ಸದಸ್ಯರಾಗಿಯೇ ಉಳಿದಿದ್ದಾರೆ. ಡಿಜಿಪಿಗಳ ಸಮಾವೇಶದಲ್ಲಿ ಆರೋಪಿಯ ತಂದೆ ಜೊತೆಗೆ ನೀವು ವೇದಿಕೆ ಹಂಚಿಕೊಂಡರೆ, ಕೊಲೆಗಾರರಿಗೆ ಪ್ರೋತ್ಸಾಹ ನೀಡುತ್ತಿರುವ ವ್ಯಕ್ತಿಗಳೊಂದಿಗೆ ನೀವು ಇದ್ದೀರಿ ಎಂಬ ಸಂದೇಶ ನೊಂದ ಕುಟುಂಬಗಳಿಗೆ ಹೋಗುತ್ತದೆ’ ಎಂದು ಅವರು ತಿಳಿಸಿದರು.

ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಹೋರಾಡುತ್ತಿರುವ ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಮತ್ತು ಆಂದೋಲನದ ಸಂದರ್ಭದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT