ಶುಕ್ರವಾರ, ಜನವರಿ 27, 2023
26 °C

2 ಸಿಲಿಂಡರ್‌, ಕಂಪನಿಗಳ ಸಾಲ ಮನ್ನಾ ಉಚಿತ ಕೊಡುಗೆಯಲ್ಲವೇ ಮೋದಿ ಅವರೇ? ಚಿದಂಬರಂ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ರಾಜಕೀಯ ಪಕ್ಷಗಳು ನೀಡುತ್ತಿರುವ ಉಚಿತ ಕೊಡುಗೆ ಭರವಸೆಗಳನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಭಾನುವಾರ ಲೇವಡಿ ಮಾಡಿದ್ದಾರೆ.

ಗುಜರಾತ್‌ನಲ್ಲಿ ಚುನಾವಣೆ ಕಾರಣಕ್ಕಾಗಿ ನೀಡಲಾಗಿರುವ 2 ಉಚಿತ ಎಲ್‌ಪಿಜಿ ಸಿಲಿಂಡರ್‌ನ ಭರವಸೆ ಏನು ಎಂದು ಚಿದಂಬರಂ ಪ್ರಶ್ನೆ ಮಾಡಿದ್ದಾರೆ.

ಮಧ್ಯ ಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ‘ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿ’ಯಲ್ಲಿ ನಿರ್ಮಿಸಲಾಗಿದ್ದ ಮನೆಗಳ ಉದ್ಘಾಟನೆ ನಂತರ ಶನಿವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಉಚಿತ ಕೊಡುಗೆ ಸಂಸ್ಕೃತಿಯನ್ನು ಟೀಕಿಸಿದ್ದರು.

‘ಹಲವಾರು ತೆರಿಗೆದಾರರು ನನಗೆ ಮುಕ್ತವಾಗಿ ಪತ್ರ ಬರೆಯುತ್ತಿದ್ದಾರೆ. ಸಮಾಜದ ಒಂದು ದೊಡ್ಡ ವರ್ಗವು ದೇಶವನ್ನು ಉಚಿತ ಕೊಡುಗೆಗಳಿಂದ ಮುಕ್ತಗೊಳಿಸಲು ಸಂಕಲ್ಪ ಮಾಡಿದೆ ಎಂದು ನನಗೆ ಸಂತೋಷವಾಗಿದೆ’ ಎಂದು ಅವರು ಹೇಳಿದ್ದರು.

ಚುನಾವಣಾ ಸಮಯದ ಭರವಸೆಗಳನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ಈ ಹಿಂದೆಯೂ ವಾಗ್ದಾಳಿ ಮಾಡಿದ್ದರು. ಉಚಿತ ಕೊಡುಗೆಗಳನ್ನು ‘ರೇವ್ಡಿ (ಮಿಠಾಯಿ) ಸಂಸ್ಕೃತಿ' ಎಂದು ಗೇಲಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಭಾನುವಾರ ಟ್ವೀಟ್‌ ಮಾಡಿರುವ ಚಿದಂಬರಂ, ‘ಉಚಿತ ಕೊಡುಗೆಗಳಿಗೆ ಹಣ ವ್ಯರ್ಥ ಮಾಡುತ್ತಿರುವ ಬಗ್ಗೆ ತೆರಿಗೆದಾರರು ಅಸಮಾಧಾನಗೊಂಡಿದ್ದಾರೆ ಎಂದು ಗೌರವಾನ್ವಿತ ಪ್ರಧಾನಿ ಹೇಳಿದ್ದಾರೆ. ಚೆನ್ನಾಗಿ ಹೇಳಿದ್ದೀರಿ ಸರ್! ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು ಉಚಿತ ಕೊಡುಗೆಯಲ್ಲ ಎಂದು ನೀವು ಸೇರಿಸಬೇಕಿತ್ತು’ ಎಂದು ವ್ಯಂಗ್ಯ ಮಾಡಿದ್ದಾರೆ. .

‘517 ಕಂಪನಿಗಳ ₹5,32,000 ಕೋಟಿ ಸಾಲವನ್ನು ಮನ್ನಾ ಮಾಡುವುದು ಉಚಿತ ಕೊಡುಗೆಯಲ್ಲ ಎಂದು ಅವರು (ಮೋದಿ) ತಮ್ಮ ಮಾತಿನಲ್ಲಿ ಸೇರಿಸಬೇಕಾಗಿತ್ತು. ಅವರು ಇನ್ನೂ ಅನೇಕ ಉದಾಹರಣೆಗಳನ್ನು ನೀಡಬಹುದಿತ್ತು’ ಎಂದು ಚಿದಂಬರಂ ಕೆಣಕಿದ್ದಾರೆ.

ಆಮ್‌ ಆದ್ಮಿ ಪಕ್ಷದಿಂದ ಹಿಡಿದು, ಹಲವು ಪ್ರಾದೇಶಿಕ ಪಕ್ಷಗಳು ನೀಡುತ್ತಿರುವ ಉಚಿತ ಕೊಡುಗೆಗಳ ಭರವಸೆಯ ವಿಚಾರವಾಗಿ ಬಿಜೆಪಿ ಮತ್ತು ಕೆಲ ಆರ್ಥಿಕ ತಜ್ಞರು ಅಸಮಾಧಾನ ಹೊಂದಿದ್ದಾರೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೂ ಏರಿದೆ.

‘ರಾಜಕೀಯ ಪಕ್ಷಗಳು ತಾವು ನೀಡಿದ ಭರವಸೆಯನ್ನು ಈಡೇರಿಸಲು ಸಂಪನ್ಮೂಲವನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂಬುದನ್ನು ವಿವರಿಸಬೇಕು, ಇದರಿಂದಾಗಿ ಹಣಕಾಸಿನ ಸ್ಥಿತಿಯ ಮೇಲೆ ಆಗುವ ಪರಿಣಾಮ ಏನು ಎಂಬುದನ್ನು ಕೂಡ ತಿಳಿಸಬೇಕು’ ಎಂದು ಚುನಾವಣಾ ಆಯೋಗವೂ ಇತ್ತೀಚೆಗೆ ಹೇಳಿದೆ. ಚುನಾವಣಾ ಆಯೋಗದ ಈ ನಿಲುವು ಹಲವು ರಾಜಕೀಯ ಪಕ್ಷಗಳ ವಿರೋಧಕ್ಕೂ ಗುರಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು