ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂಪುರ್, ನವೀನ್‌ ಬಂಧನಕ್ಕೆ ಆಗ್ರಹ: ಮುಸ್ಲಿಮರ ದಿಢೀರ್ ಪ್ರತಿಭಟನೆ

ದೇಶದ ವಿವಿಧೆಡೆ ಘರ್ಷಣೆ
Last Updated 10 ಜೂನ್ 2022, 19:48 IST
ಅಕ್ಷರ ಗಾತ್ರ

ದೆಹಲಿ/ಕೋಲ್ಕತ್ತ/ರಾಂಚಿ/ಶ್ರೀನಗರ/ಮುಂಬೈ:ಪ್ರವಾದಿ ಮಹಮ್ಮದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಮುಸ್ಲಿಮರು ದೇಶದ ಹಲವೆಡೆ ಶುಕ್ರವಾರ ದಿಢೀರ್‌ ಪ್ರತಿಭಟನೆ ನಡೆಸಿದ್ದಾರೆ. ಉತ್ತರ ಪ್ರದೇಶದ ಹಲವೆಡೆ ಪ್ರತಿಭಟನೆ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಘರ್ಷಣೆ ನಡೆದಿದೆ. ರಾಂಚಿಯಲ್ಲಿ ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನದ ನಮಾಜ್‌ನ ನಂತರ ದೇಶದ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಜಿಲ್ಲೆಯಲ್ಲಿ ಪ್ರತಿಭಟನ ಕಾರರು ಕಲ್ಲು ತೂರಿದ್ದಾರೆ. ಅವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಪ್ರತಿಭಟನೆ ವೇಳೆ ದುಷ್ಕರ್ಮಿಗಳು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಇದ್ದಾಗ, ಪೊಲೀಸರು ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ. ಈ ವೇಳೆ ಹಲವು ಪ್ರತಿಭಟನಕಾರರು ಮತ್ತು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ‘ಹಿಂಸಾಚಾರದಲ್ಲಿ ತೊಡಗಿದ್ದ ಹಲವರನ್ನು ವಶಕ್ಕೆ ಪಡೆದಿದ್ದೇವೆ. ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ’ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.

ಜೂನ್‌ ಮೊದಲ ವಾರದಲ್ಲಿ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಕಾನ್ಪುರದಲ್ಲಿ ಗುರುವಾರ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.

ನೂಪುರ್ ಮತ್ತು ನವೀನ್ ಅವರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಕಾಶ್ಮೀರದ ಶ್ರೀನಗರ, ದೋದಾ, ಕಿಶ್ತವಾರ ಮತ್ತು ಭದೇರ್ವಾದಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯ ವೇಳೆ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇದರಿಂದ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ನಂತರ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ದೋದಾ ಮತ್ತು ಕಿಶ್ತವಾರದಲ್ಲಿ ಕರ್ಫ್ಯೂ ಜಾರಿಗೆ ತರಲಾಗಿದೆ. ಕಾಶ್ಮೀರ ಕಣಿವೆಯ ಹಲವೆಡೆ ಇಂಟರ್ನೆಟ್‌ ಸ್ಥಗಿತಗೊಳಿಸಲಾಗಿದೆ.

ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲೂ ಶುಕ್ರವಾರ ಮಧ್ಯಾಹ್ನದ ನಂತರ ಪ್ರತಿಭಟನೆ ನಡೆದಿದೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಮಧ್ಯಾಹ್ನದ ನಂತರ ಕೆಲವರು ಬಲವಂತವಾಗಿ ಅಂಗಡಿಗಳ ಬಾಗಿಲನ್ನು ಹಾಕಿಸಲು ಯತ್ನಿಸಿದರು. ಅದನ್ನು ತಡೆಯಲು ಪೊಲೀಸರು ಮುಂದಾದಾಗ ಕಲ್ಲು ತೂರಾಟ ನಡೆದಿದೆ. ಆಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕೆಲವರಿಗೆ ಗಾಯಗಳಾಗಿವೆ. ನಿಷೇಧಾಜ್ಞೆ ಹೇರಲಾಗಿದೆ.

ಕೋಲ್ಕತ್ತದ ಧುಲಾಗಡ್‌, ಪಾಂಚ್ಲಾ ಮತ್ತು ಉಲೂಬೇರಿಯಾ ಪ್ರದೇಶಗಳಲ್ಲಿ ಪ್ರತಿಭಟನೆ ತೀವ್ರವಾಗಿತ್ತು. ಪ್ರತಿಭಟನಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ತಡೆದರು. ಸಂಚಾರ ಸುಗಮಗೊಳಿಸಲು ಪೊಲೀಸರು ಮುಂದಾದಾಗ, ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಘರ್ಷಣೆ ನಡೆಯಿತು. ಪ್ರತಿಭಟನಕಾರರು ಹೆದ್ದಾರಿಯಲ್ಲಿದ್ದ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಕೆಲವರಿಗೆ ಗಾಯಗಳಾಗಿವೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ದೆಹಲಿಯ ಜಾಮಾ ಮಸೀದಿ ಬಳಿ ಸೇರಿದ್ದ ಹಲವರು ದಿಢೀರ್‌ ಪ್ರತಿಭಟನೆ ನಡೆಸಿದ್ದಾರೆ. ಮಸೀದಿ ಸಮೀಪದ ಅಂಗಡಿಗಳ ಬಾಗಿಲನ್ನು ಹಾಕಿಸಿದ್ದಾರೆ. ‘ಪ್ರತಿಭಟನೆಗೂ ನಮಗೂ ಸಂಬಂಧವಿಲ್ಲ. ಪ್ರತಿಭಟನೆ ನಡೆಸಿದವರು ಯಾರು ಎಂಬುದು ನಮಗೆ ಗೊತ್ತಿಲ್ಲ’ ಎಂದು ಮಸೀದಿ ನಿರ್ವಹಣಾ ಸಮಿತಿ ಹೇಳಿದೆ.

ಉಳಿದಂತೆ ಹೈದರಾಬಾದ್‌, ಅಹಮದಾಬಾದ್‌, ಮುಂಬೈ, ಸೊಲ್ಲಾಪುರದಲ್ಲಿ ಪ್ರತಿಭಟನೆ ನಡೆದಿದೆ. ಆದರೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಮಕ್ಕಳನ್ನು ಬಳಸಿಕೊಂಡರೆ ಕ್ರಮ: ‘ಈ ಪ್ರತಿಭಟನೆಗಳಲ್ಲಿ ಮಕ್ಕಳನ್ನು ಬಳಸಿಕೊಂಡಿರುವ ಬಗ್ಗೆ ಮಾಹಿತಿ ದೊರೆತಿದೆ. ಅವನ್ನು ಪರಿಶೀಲಿಸುತ್ತಿದ್ದೇವೆ. ಇಂತಹ ಹಿಂಸಾತ್ಮಕ ಪ್ರತಿಭಟನೆಗೆ ಮಕ್ಕಳನ್ನು ಬಳಸಿಕೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಹೇಳಿದೆ.

ಕಾಂಗ್ರೆಸ್‌ನಿಂದ ದೂರು
ನೂಪುರ್ ಶರ್ಮಾ ಮತ್ತು ನವೀನ್‌ ಜಿಂದಾಲ್‌ ವಿರುದ್ಧ ಅಸ್ಸಾಂನ ಗುವಾಹಟಿಯಲ್ಲಿ ಕಾಂಗ್ರೆಸ್‌ ದೂರು ದಾಖಲಿಸಿದೆ. ದ್ವೇಷಭಾಷಣ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಕಾಂಗ್ರೆಸ್‌ ದೂರು ನೀಡಿದೆ.

‘ದೂರನ್ನು ಪರಿಶೀಲಿಸುತ್ತಿದ್ದೇವೆ. ಇನ್ನೂ ಎಫ್‌ಐಆರ್‌ ದಾಖಲಿಸಿಲ್ಲ’ ಎಂದು ಅಸ್ಸಾಂ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಶಾ ಅಧಿಕಾರದಲ್ಲಿ ಇರಬೇಕೇ?’
‘ಕಾಶ್ಮೀರವು ಭಾರತದ ಬೇರೆ ಭಾಗಗಳಂತೆ ಕಾಣಬೇಕು ಎಂದು ನಾವು ಬಯಸಿದ್ದೆವು. ಆದರೆ, ಇಂದು ಇಡೀ ಭಾರತವು ಕಾಶ್ಮೀರದಂತೆ ಕಾಣುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರಿಗೆ ಏನಾದರೂ ಅರಿವು ಇದೆಯೇ? ಮುಂದಿನ 48 ಗಂಟೆಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಇದ್ದರೆ, ಶಾ ಅಧಿಕಾರದಲ್ಲಿ ಇರಬೇಕೇ? ಮೋದಿ ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT